"ನನ್ನ ಜನರ ಮೇಲೆ ದಾಳಿ ನಡೆಯುತ್ತಿದೆ": ಅಕ್ರಮ ವಲಸಿಗರ ಗಡೀಪಾರು ಕುರಿತ ಟ್ರಂಪ್ ಆದೇಶಕ್ಕೆ ಕಣ್ಣೀರಿಟ್ಟ ಖ್ಯಾತ ನಟಿ ಸೆಲೆನಾ ಗೊಮೆಝ್

ಸೆಲೆನಾ ಗೊಮೆಝ್ (Photo:X/@EndWokeness)
ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ದೇಶದಿಂದ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ನಿರ್ಧಾರ ತೆಗೆದುಕೊಂಡ ಕೆಲವು ದಿನಗಳ ನಂತರ ನಟಿ, ಗಾಯಕಿ ಸೆಲೆನಾ ಗೊಮೆಝ್ 'ನನ್ನ ಜನರ ಮೇಲೆ ದಾಳಿ ನಡೆಯುತ್ತಿದೆ' ಎಂದು ಕಣ್ಣೀರಿಟ್ಟು ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಸೆಲೆನಾ ಗೊಮೆಝ್ ಇನ್ ಸ್ಟಾಗ್ರಾಮ್ ಸ್ಟೋರೀಸ್ ನಲ್ಲಿ ಕಣ್ಣೀರಿಟ್ಟು ವೀಡಿಯೊ ಹಂಚಿಕೊಂಡಿದ್ದು, ವ್ಯಾಪಕ ಪ್ರತಿಕ್ರಿಯೆ ಬಳಿಕ ವೀಡಿಯೊವನ್ನು ಡಿಲಿಟ್ ಮಾಡಿದ್ದಾರೆ.
ವೀಡಿಯೊದಲ್ಲಿ ಕಪ್ಪು ಉಡುಪನ್ನು ಧರಿಸಿದ್ದ ಗಾಯಕಿ ಸೆಲೆನಾ ಗೊಮೆಝ್ ತನ್ನ ಮನೆಯಲ್ಲೇ ಕುಳಿತುಕೊಂಡು ಈ ವೀಡಿಯೊ ರೆಕಾರ್ಡ್ ಮಾಡಿದ್ದಾರೆ ಎಂದು ಹೇಳಲಾಗಿದೆ. @SELENAT0RSARMY ಎಂಬ ಎಕ್ಸ್ ಖಾತೆಯಲ್ಲಿ ಕೂಡ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ʼನನ್ನನ್ನು ಕ್ಷಮಿಸಿ ಎಂದು ನಾನು ಹೇಳಲು ಬಯಸುತ್ತೇನೆ, ಮಕ್ಕಳನ್ನೊಳಗೊಂಡಂತೆ ನನ್ನ ಜನರು ದಾಳಿಗೊಳಗಾಗುತ್ತಿದ್ದಾರೆ. ನನಗೆ ಅರ್ಥವಾಗುತ್ತಿಲ್ಲ. ನನ್ನನ್ನು ಕ್ಷಮಿಸಿ, ಏನಾದರೂ ಮಾಡಬಹುದೆಂದು ನಾನು ಬಯಸುತ್ತೇನೆ ಆದರೆ ನನಗೆ ಸಾಧ್ಯವಿಲ್ಲ. ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ನಾನು ಏನಾದರು ಮಾಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡುತ್ತೇನೆʼ ಎಂದು ವೀಡಿಯೊದಲ್ಲಿ ಸೆಲೆನಾ ಗೊಮೆಝ್ ಹೇಳಿದ್ದಾರೆ.
ಸೆಲೆನಾ ಗೊಮೆಝ್ ವೀಡಿಯೊಗೆ ವ್ಯಕ್ತವಾದ ಭಿನ್ನ ಪ್ರತಿಕ್ರಿಯೆ:
ಸೆಲೆನಾ ಗೊಮೆಝ್ ಇನ್ ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಮೆಕ್ಸಿಕನ್ ಧ್ವಜದೊಂದಿಗೆ "ಕ್ಷಮಿಸಿ" ಎಂಬ ಬರಹದೊಂದಿಗೆ ಹಂಚಿಕೊಂಡ ವೀಡಿಯೊಗೆ ಸಾಮಾಜಿಕ ಜಾಲತಾಣದ ಬಳಕೆದಾರರು ಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಅಮೆರಿಕಾಗೆ ಬರಲು ಕಾನೂನುಬದ್ಧ ಮಾರ್ಗವಿದೆ. ಅವರು ಆ ಮಾರ್ಗದಲ್ಲಿ ಏಕೆ ಪ್ರಯತ್ನಿಸಬಾರದು? ಎಂದು ವ್ಯಕ್ತಿಯೋರ್ವರು ಪ್ರಶ್ನಿಸಿದ್ದಾರೆ.
ʼಇದು 2025, ನಾವು ಇನ್ನೂ ನಮ್ಮ ಫೋನ್ ಗಳನ್ನು ಹಿಡಿದು ಅಳುವುದನ್ನು ರೆಕಾರ್ಡ್ ಮಾಡುತ್ತಿದ್ದೇವೆಯೇ? ಅವರನ್ನು ನೋಡಿ ನಗುವ ಜನರು ತುಂಬಾ ಅಸಹ್ಯಕರರು, ನೆನಪಿಡಿ, ಮಕ್ಕಳನ್ನು ಒಳಗೊಂಡಂತೆ ಅವರ ಜನರನ್ನು ಗಡೀಪಾರು ಮಾಡಲಾಗುತ್ತಿದೆ, ಅವರಿಗೆ ಅಳುವ ಹಕ್ಕಿದೆ. ಅವರು ಮೆಕ್ಸಿಕನ್ ವಲಸೆ ಕುಟುಂಬಕ್ಕೆ ಸೇರಿದವರಾಗಿದ್ದಾರೆʼ ಎಂದು ಓರ್ವ ಎಕ್ಸ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಇದು ಹೃದಯವಿದ್ರಾವಕ. ಆ ಮಹಿಳೆಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ನೀವು ಬಿಡಬಹುದೇ? ದೊಡ್ಡ ಕಲಾವಿದೆಯಾಗಿ ತನ್ನ ಜನರಿಗೆ ಏನನ್ನೂ ಮಾಡಲು ಸಾಧ್ಯವಾಗದೆ ಇರುವುದನ್ನು ಊಹಿಸಿ, ಅವರು ಆಘಾತಗೊಂಡಿರಬೇಕು ಎಂದು ಮತ್ತೋರ್ವರು ಪ್ರತಿಕ್ರಿಯಿಸಿದ್ದಾರೆ.
ನಂತರ, ಸೆಲೆನಾ ತನ್ನ ಇನ್ ಸ್ಟಾಗ್ರಾಮ್ ಸ್ಟೋರೀಸ್ ನಲ್ಲಿ ಮತ್ತೊಂದು ಪೋಸ್ಟ್ ನ್ನು ಹಂಚಿಕೊಂಡಿದ್ದು, ಅದರಲ್ಲಿ "ಜನರಿಗೆ ಸಹಾನುಭೂತಿ ತೋರುವುದು ಸರಿಯಲ್ಲ ಎಂದು ತೋರುತ್ತದೆ" ಎಂದು ಬರೆಯಲಾಗಿತ್ತು. ಅವರು ಆ ಪೋಸ್ಟ್ ಅನ್ನು ಕೂಡ ಮತ್ತೆ ಅಳಿಸಿದ್ದಾರೆ.
ವಲಸೆಗಾರರ ಜೀವನಾಧಾರಿತ ಸಾಕ್ಷ್ಯಚಿತ್ರ ನಿರ್ಮಿಸಿದ್ದ ಸೆಲೆನಾ ಗೊಮೆಝ್:
2019ರಲ್ಲಿ, ಸೆಲೆನಾ ಗೊಮೆಝ್ ʼಲಿವಿಂಗ್ ಅನ್ ಡಾಕ್ಯುಮೆಂಟಡ್ʼ ( Living Undocumented) ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದರು. ಈ ಸಾಕ್ಷ್ಯಚಿತ್ರವನ್ನು ವಲಸೆಗಾರರ ಸಮಸ್ಯೆ ಮತ್ತು ಟ್ರಂಪ್ ಆಡಳಿತದ ಅವಧಿಯಲ್ಲಿ ಯುಎಸ್ ನಲ್ಲಿ ವಾಸಿಸುತ್ತಿದ್ದ 8 ಅಕ್ರಮ ವಲಸೆ ಕುಟುಂಬಗಳ ಜೀವನವನ್ನು ಆಧರಿಸಿ ನಿರ್ಮಿಸಲಾಗಿತ್ತು.
Selena Gomez just posted a video crying about deportations, but deleted it after outrage from fans…. pic.twitter.com/xRTO8x4ND5
— End Wokeness (@EndWokeness) January 27, 2025