ಝೊಹ್ರಾನ್ ಮಮ್ದಾನಿ ನ್ಯೂಯಾರ್ಕ್ ಮೇಯರ್ ಆಗಿ ಚುನಾಯಿತರಾದರೆ ಫೆಡರಲ್ ಫಂಡ್ ಇಲ್ಲ: ಟ್ರಂಪ್ ಎಚ್ಚರಿಕೆ

ಝೊಹ್ರಾನ್ ಮಮ್ದಾನಿ / ಡೊನಾಲ್ಡ್ ಟ್ರಂಪ್ (Photo credit: X/@ZohranKMamdani, PTI)
ವಾಷಿಂಗ್ಟನ್, ಸೆ.30: ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಗಳ ರೇಸ್ನಲ್ಲಿ ಮುಂಚೂಣಿಯಲ್ಲಿರುವ `ಸ್ವಯಂ ಘೋಷಿತ ಕಮ್ಯುನಿಸ್ಟ್' ಝೊಹ್ರಾನ್ ಮಮ್ದಾನಿಯ ಗೆಲುವು ನ್ಯೂಯಾರ್ಕ್ ನಗರಕ್ಕೆ ತೊಂದರೆಗೆ ಕಾರಣವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಮೇಯರ್ ಆಗಿ ಚುನಾಯಿತರಾದರೆ ಮಮ್ದಾನಿ ವಾಷಿಂಗ್ಟನ್ನಿಂದ ಅಸಾಮಾನ್ಯ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ. ಫೆಡರಲ್ ಫಂಡ್ ಪಡೆಯಲೂ ಹೆಣಗಾಡಬೇಕಾಗುತ್ತದೆ. ನೆನಪಿರಲಿ, ಅವರು ತನ್ನ ನಕಲಿ ಕಮ್ಯುನಿಸ್ಟ್ ಭರವಸೆಗಳನ್ನು ಈಡೇರಿಸಬೇಕಿದ್ದರೆ ಅಧ್ಯಕ್ಷನಾಗಿ ನನ್ನಿಂದ ಹಣ ಪಡೆಯುವ ಅಗತ್ಯವಿದೆ. ಆದರೆ ಅವರಿಗೆ ಫೆಡರಲ್ ನಿಧಿ ಸಿಗುವುದಿಲ್ಲ. ಆದ್ದರಿಂದ ಮಮ್ದಾನಿಗೆ ವೋಟ್ ನೀಡಿದರೆ ಏನು ಪ್ರಯೋಜನ ? ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಮಮ್ದಾನಿಯ ನೀತಿಗಳು ರಾಜಕೀಯವಾಗಿ ಹಾನಿಕಾರವಾಗಿದೆ. ಈ ಸಿದ್ಧಾಂತ ಸಾವಿರ ವರ್ಷಗಳಿಂದ ವಿಫಲಗೊಂಡಿವೆ ಮತ್ತು ಮುಂದೆ ಕೂಡಾ ವಿಫಲವಾಗುವುದು ಖಚಿತ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಆದರೆ ಟ್ರಂಪ್ ಅವರ ಎಚ್ಚರಿಕೆಯನ್ನು ತಳ್ಳಿಹಾಕಿರುವ ಮಮ್ದಾನಿ ` ಗೆಲ್ಲುವ ಸಾಧ್ಯತೆಯನ್ನು ಮನಗಂಡಿರುವ ಅಧ್ಯಕ್ಷರು ದುಃಖದ ಹಂತದಲ್ಲಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ' ಎಂದು ಪ್ರತಿಕ್ರಿಯಿಸಿದ್ದಾರೆ.





