ಬಾಂಗ್ಲಾವನ್ನು ಮುಹಮ್ಮದ್ ಯೂನುಸ್ ಅಮೆರಿಕಕ್ಕೆ ಮಾರಿಕೊಂಡಿದ್ದಾರೆ: ಶೇಖ್ ಹಸೀನಾ ವಾಗ್ದಾಳಿ

ಮುಹಾಮ್ಮದ್ ಯೂನುಸ್ | ಶೇಖ್ ಹಸೀನಾ PC: PTI
ಢಾಕಾ: ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ ಅವರು ಅಮೆರಿಕಕ್ಕೆ ದೇಶವನ್ನು ಮಾರಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ವಾಗ್ದಾಳಿ ನಡೆಸಿದ್ದಾರೆ. ಅವಾಮಿ ಲೀಗ್ ಪಕ್ಷವನ್ನು ನಿಷೇಧಿಸಿದ ಕ್ರಮವನ್ನು ಟೀಕಿಸಿದ ಅವರು ಇದು ಅಸಂವಿಧಾನಿಕ ಕ್ರಮ ಎಂದಿದ್ದಾರೆ.
ಪಕ್ಷದ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಆಡಿಯೊ ಸಂದೇಶದಲ್ಲಿ, ಭಯೋತ್ಪಾದಕ ಗುಂಪುಗಳ ನೆರವಿನಿಂದ ಯೂನುಸ್ ಇಡೀ ದೇಶವನ್ನು ನಿಯಂತ್ರಣಕ್ಕೆ ಪಡೆದಿದ್ದಾರೆ ಎಂದು ಆಪಾದಿಸಿದ್ದಾರೆ.
"ಸೈಂಟ್ ಮಾರ್ಟಿನ್ ದ್ವೀಪದ ಬಗೆಗಿನ ಅಮೆರಿಕದ ಬೇಡಿಕೆಗೆ ನನ್ನ ತಂದೆ ಒಪ್ಪಿಕೊಂಡಿರಲಿಲ್ಲ. ಅದಕ್ಕಾಗಿ ಅವರು ಪ್ರಾಣ ತೆರಬೇಕಾಯಿತು. ಅಧಿಕಾರದಲ್ಲಿ ಮುಂದುವರಿಯಲು ದೇಶವನ್ನು ಮಾರಾಟ ಮಾಡುವ ಬಗ್ಗೆ ಯಾವ ಯೋಚನೆಯೂ ಮಾಡದ ನನಗೂ ಅದೇ ಪರಿಸ್ಥಿತಿ ಎದುರಾಯಿತು" ಎಂದು ಶೇಖ್ ಹಸೀನಾ ಹೇಳಿದ್ದಾರೆ.
ವಿದ್ಯಾರ್ಥಿ ಮುಖಂಡರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶೇಖ್ ಹಸೀನಾ ರಾಜೀನಾಮೆ ನೀಡಿ, ದೇಶದಿಂದ ಪಲಾಯನ ಮಾಡಿದ ಬಳಿಕ 2024ರ ಆಗಸ್ಟ್ 7ರಂದು ರಚನೆಯಾದ ಮಧ್ಯಂತರ ಸರ್ಕಾರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಯೂನುಸ್ ಪ್ರಧಾನಿಯಾಗಿ ನೇಮಕಗೊಂಡಿದ್ದರು. ಮುಂದಿನ ಡಿಸೆಂಬರ್ ನಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗೆ ಸೇನೆ ನೀಡಿದ ಕರೆಯ ಹಿನ್ನೆಲೆಯಲ್ಲಿ ಯೂನೂಸ್ ರಾಜೀನಾಮೆ ನೀಡುವ ಸೂಚನೆ ನೀಡಿದ್ದರು.





