ಸೆರ್ಬಿಯಾ ಚುನಾವಣೆ | ವಿದ್ಯಾರ್ಥಿ ಚಳವಳಿಗೆ ಗೆಲುವು; ಬಲಪಂಥೀಯ ಪಕ್ಷದ 14 ವರ್ಷಗಳ ಆಡಳಿತ ಅಂತ್ಯ

Photo Credit : aljazeera.com
ಬೆಲ್ಗ್ರೇಡ್, ಅ. 26: ಸೆರ್ಬಿಯಾದ ವಿದ್ಯಾರ್ಥಿ ನೇತೃತ್ವದ ಚಳವಳಿ ‘ಸ್ಟೂಡೆಂಟ್ ಲಿಸ್ಟ್’ ರವಿವಾರ ನಡೆದ ಸಂಸತ್ತಿನ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಾಗಿ ವರದಿಯಾಗಿದ್ದು, ಇದರೊಂದಿಗೆ ಅಲೆಕ್ಸಾಂಡರ್ ವುಚಿಕ್ ಅವರ ಬಲಪಂಥೀಯ ಪಕ್ಷದ 14 ವರ್ಷಗಳ ಆಡಳಿತಕ್ಕೆ ಅಂತ್ಯಬಿದ್ದಿದೆ.
2024ರಲ್ಲಿ ನೋವಿಸಾದ್ ರೈಲ್ವೆ ನಿಲ್ದಾಣದ ಮೇಲ್ಛಾವಣಿ ಕುಸಿದು 16 ಜನರು ಸಾವನ್ನಪ್ಪಿದ ಘಟನೆಯ ಬಳಿಕ, ಸುಮಾರು ಎರಡು ವರ್ಷಗಳಿಂದ ನಡೆದ ಸರಕಾರ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ಕ್ಷಿಪ್ರ ಚುನಾವಣೆ ನಡೆದಿದೆ. ದುರಂತಕ್ಕೆ ಭ್ರಷ್ಟಾಚಾರವೇ ಕಾರಣ ಎಂದು ವ್ಯಾಪಕವಾಗಿ ಆರೋಪಿಸಲಾಗಿದ್ದು, ಸೆರ್ಬಿಯಾದಲ್ಲಿ ಕಂಡ ಅತ್ಯಂತ ದೊಡ್ಡ ಪ್ರತಿಭಟನೆಗಳಿಗೆ ಇದು ಕಾರಣವಾಯಿತು.
ರವಿವಾರ ಮತದಾರರು ಭಾರಿ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದು, ಮತದಾನ ಮುಕ್ತಾಯಗೊಂಡ ಎರಡು ಗಂಟೆಗಳ ಒಳಗಾಗಿ ವುಚಿಕ್ ತಮ್ಮ ಸೋಲನ್ನು ಒಪ್ಪಿಕೊಂಡರು. ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ವುಚಿಕ್, ಪ್ರಾಥಮಿಕ ಅಂಕಿಅಂಶಗಳ ಪ್ರಕಾರ ವಿದ್ಯಾರ್ಥಿ ಚಳವಳಿಯು 135ರಿಂದ 140 ಸ್ಥಾನಗಳನ್ನು ಗೆಲ್ಲಬಹುದು. ಇದು 250 ಸದಸ್ಯರ ಸಂಸತ್ತಿನಲ್ಲಿ ಅದಕ್ಕೆ ಸ್ಪಷ್ಟ ಬಹುಮತವನ್ನು ನೀಡುತ್ತದೆ ಎಂದು ಹೇಳಿದರು. ತಮ್ಮ ಆಡಳಿತಾವಧಿಯುದ್ದಕ್ಕೂ ರಶ್ಯದೊಂದಿಗೆ ನಿಕಟ ಬಾಂಧವ್ಯವನ್ನು ಕಾಯ್ದುಕೊಂಡಿದ್ದ 56 ವರ್ಷದ ನಾಯಕ, ಈ ಫಲಿತಾಂಶಕ್ಕೆ ವಿದೇಶಿ ಶಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡಿದರು.
ಯುರೋಪಿಯನ್ ಯೂನಿಯನ್ ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯನ್ ಮತ್ತು ಹಂಗೇರಿಯ ಪ್ರಧಾನಿ ಪೀಟರ್ ಮಗ್ಯಾರ್ ಅವರು ‘ಸ್ಟೂಡೆಂಟ್ ಲಿಸ್ಟ್’ಗೆ ಗೆಲುವಿಗಾಗಿ ಅಭಿನಂದನೆ ಸಲ್ಲಿಸಿದರು.






