ಅಮೆರಿಕದ ICE ಬಂಧನ ಕೇಂದ್ರದಲ್ಲಿ ಸರಣಿ ಸಾವು: ವಿಶ್ವಸಂಸ್ಥೆ ಕಳವಳ

ಸಾಂದರ್ಭಿಕ ಚಿತ್ರ | Photo Credit : magnific.com
ಜೆನೀವಾ, ಸೆ. 7: ಅಮೆರಿಕದ ವಲಸೆ ಬಂಧನ ಕೇಂದ್ರದಲ್ಲಿ ಸಂಭವಿಸುತ್ತಿರುವ ಸರಣಿ ಸಾವುಗಳ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಲ್ಕರ್ ಟರ್ಕ್ ಸೋಮವಾರ ಕಳವಳ ವ್ಯಕ್ತಪಡಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಜವಾಬ್ದಾರಿ ನಿಗದಿಪಡಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಜನರು ‘ಗಂಭೀರ ಹಾನಿ ಅಥವಾ ಅಪಾಯವನ್ನು’ ಎದುರಿಸುವ ಸ್ಥಳಗಳಿಗೆ ವಾಪಸ್ ಕಳುಹಿಸುವುದನ್ನು ತಕ್ಷಣವೇ ನಿಲ್ಲಿಸುವಂತೆ ಅಮೆರಿಕಕ್ಕೆ ಮನವಿ ಮಾಡಿದ್ದಾರೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ಟರ್ಕ್, ‘ಅಮೆರಿಕದ ವಲಸೆ ಬಂಧನ ಕೇಂದ್ರದಲ್ಲಿ 2026ರಲ್ಲೇ ಒಟ್ಟು 23 ಸಾವುಗಳು ಸಂಭವಿಸಿವೆ. ಈ ಸಾವುಗಳಿಗೆ ಸೂಕ್ತ ಜವಾಬ್ದಾರಿ ಮತ್ತು ಹೊಣೆಗಾರಿಕೆ ನಿಗದಿಯಾಗಬೇಕಾಗಿದೆ’ ಎಂದು ಪ್ರತಿಪಾದಿಸಿದರು.
ಹೈಟಿ ಸೇರಿದಂತೆ ಸರಿಪಡಿಸಲಾಗದ ಹಾನಿಯನ್ನು ಎದುರಿಸಬಹುದಾದ ಸ್ಥಳಗಳಿಗೆ ಜನರನ್ನು ವಾಪಸ್ ಕಳುಹಿಸುವುದನ್ನು ತಡೆಹಿಡಿಯುವಂತೆ ಮತ್ತು ಮೂರನೇ ದೇಶಗಳಿಗೆ ಕಳುಹಿಸುವ ಪ್ರತಿಯೊಂದು ಪ್ರಕ್ರಿಯೆಯಲ್ಲೂ ಸೂಕ್ತ ಕಾನೂನು ನಿಯಮಗಳನ್ನು ಅನುಸರಿಸುವಂತೆ ಅಮೆರಿಕಕ್ಕೆ ಮನವಿ ಮಾಡುವುದಾಗಿ ಟರ್ಕ್ ತಿಳಿಸಿದರು.
ಅಲ್ಲದೆ, ವಲಸೆ ಜಾರಿ ಏಜೆಂಟ್ ಗಳಿಗೆ ‘ಎಲೆಕ್ಟ್ರಿಕ್ ಶಾಕ್ ಗ್ಲೌಸ್ಗಳನ್ನು’ ಒದಗಿಸಲು ICE ಯೋಜಿಸುತ್ತಿರುವ ವರದಿಗಳ ಬಗ್ಗೆ ಟರ್ಕ್ ಕಳವಳ ವ್ಯಕ್ತಪಡಿಸಿದ್ದು, ಇಂತಹ ಸಾಧನಗಳ ಬಳಕೆಯಿಂದ ಬಲಪ್ರಯೋಗ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಅಕ್ರಮ ವಲಸೆಯ ವಿರುದ್ಧದ ಕಾರ್ಯಾಚರಣೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅವಧಿಯ ಪ್ರಮುಖ ಆದ್ಯತೆಯನ್ನಾಗಿ ಮಾಡಿಕೊಂಡಿದ್ದು, ಅಧಿಕಾರಿಗಳು ಸಾವಿರಾರು ಜನರನ್ನು ಬಂಧಿಸಿ ವಶಕ್ಕೆ ಪಡೆಯುತ್ತಿದ್ದಾರೆ ಮತ್ತು ಬಂಧನ ಕೇಂದ್ರಗಳನ್ನು ವಿಸ್ತರಿಸುತ್ತಿದ್ದಾರೆ.
‘ಹ್ಯೂಮನ್ ರೈಟ್ಸ್ ವಾಚ್’ ಮತ್ತು ‘ಫಿಸಿಶಿಯನ್ಸ್ ಫಾರ್ ಹ್ಯೂಮನ್ ರೈಟ್ಸ್’ ಜಂಟಿಯಾಗಿ ನೀಡಿದ ಜೂನ್ ವರದಿಯ ಪ್ರಕಾರ, ಟ್ರಂಪ್ ಅವರ ಕಟ್ಟುನಿಟ್ಟಿನ ಕ್ರಮಗಳ ಬಳಿಕ ‘ICE’ (ವಲಸೆ ಮತ್ತು ಸುಂಕ ಜಾರಿ ಸಂಸ್ಥೆ) ಬಂಧನದಲ್ಲಿ ಜನರು ಸಾಯುವ ಪ್ರಮಾಣವು ಕಳೆದ ದಶಕದಲ್ಲೇ ಅತ್ಯಂತ ಗರಿಷ್ಠ ಮಟ್ಟವನ್ನು ತಲುಪಿದೆ.
ಜಾರಿ ಕಾರ್ಯಾಚರಣೆಯ ಸಂದರ್ಭದಲ್ಲಿ ನಡೆದ ಸರಣಿ ಮಾರಣಾಂತಿಕ ಗುಂಡಿನ ದಾಳಿಗಳಿಗಾಗಿ ICE ತೀವ್ರ ಟೀಕೆಗೆ ಗುರಿಯಾಗಿದೆ.
ವಲಸಿಗರನ್ನು ವಶಕ್ಕೆ ಪಡೆಯಲು ICE ಏಜೆಂಟ್ ಗಳು ಬಳಸುತ್ತಿರುವ ಹಿಂಸಾತ್ಮಕ ತಂತ್ರಗಳು ಮತ್ತು ಹೊಸದಾಗಿ ಸೇರ್ಪಡೆಗೊಂಡ ಸಿಬ್ಬಂದಿಗೆ ತರಬೇತಿಯ ಗುಣಮಟ್ಟ ಕುಸಿದಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.






