ಅಮೆರಿಕದಲ್ಲಿ ತಂತ್ರಜ್ಞಾನ ವ್ಯವಸ್ಥೆಗಳ ಸರಣಿ ಕುಸಿತ; ಆ್ಯಪಲ್, NSA ಜಾಲಕ್ಕೂ ಅಡ್ಡಿ!
178 ಸಂಸ್ಥೆಗಳ ವೆಬ್‌ಸೈಟ್ ಗಳಲ್ಲಿ ಹಾನಿಕಾರಕ ಕೋಡ್ ಪತ್ತೆ; ಬ್ಯಾಂಕಿಂಗ್, ವಿಮಾನಯಾನ, ಹೋಟೆಲ್ ಸೇವೆಗಳೂ ಅಸ್ತವ್ಯಸ್ತ

ವಾಶಿಂಗ್ಟನ್: ಅಮೆರಿಕದಲ್ಲಿ ಪ್ರಮುಖ ತಂತ್ರಜ್ಞಾನ ವ್ಯವಸ್ಥೆಗಳ ವೈಫಲ್ಯಗಳ ಸರಣಿ ಮುಂದುವರಿದಿದ್ದು, ಮಂಗಳವಾರ ಆಪಲ್ ನ ಐಕ್ಲೌಡ್, ಆಪ್ ಸ್ಟೋರ್, ಆಪಲ್ ಪೇ ಸೇರಿದಂತೆ ಹಲವು ಪ್ರಮುಖ ಸೇವೆಗಳು ಸ್ಥಗಿತಗೊಂಡಿವೆ. ಮತ್ತೊಂದೆಡೆ, ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯ (NSA) ಅತ್ಯಂತ ರಹಸ್ಯ ಸಂವಹನ ಜಾಲದಲ್ಲೂ ತಾಂತ್ರಿಕ ವ್ಯತ್ಯಯ ಉಂಟಾಗಿದೆ. ಮ್ಯಾರಿಯಟ್ ಹೋಟೆಲ್ ಸಮೂಹ, ಪ್ರಮುಖ ಬ್ಯಾಂಕ್ ಗಳು ಮತ್ತು ವಿಮಾನಯಾನ ಸಂಸ್ಥೆಗಳ ಸೇವೆಗಳೂ ಇತ್ತೀಚಿನ ದಿನಗಳಲ್ಲಿ ಅಡಚಣೆಗೆ ಒಳಗಾಗಿವೆ.
ಮಂಗಳವಾರ ಸಾವಿರಾರು ಆಪಲ್ ಬಳಕೆದಾರರು ಏಕಾಏಕಿ ಸೇವೆಗಳ ಸ್ಥಗಿತದಿಂದ ಪರದಾಡಿದರು. ಐಕ್ಲೌಡ್, ಆಪ್ ಸ್ಟೋರ್, ಆಪಲ್ ಪೇ ಮತ್ತು ಆಪಲ್ ಬೆಂಬಲ ಸೇರಿದಂತೆ ಹಲವು ಸೇವೆಗಳು ಕಾರ್ಯನಿರ್ವಹಿಸದೆ ಬಳಕೆದಾರರಿಗೆ ತೊಂದರೆಯಾಯಿತು.
ಆಪಲ್ ನ ಆಂತರಿಕ ಸಾಫ್ಟ್‌ವೇರ್ ನವೀಕರಣದಿಂದ ಈ ಸಮಸ್ಯೆ ಉಂಟಾಗಿತ್ತು. ಬಹುತೇಕ ವ್ಯವಸ್ಥೆಗಳನ್ನು ಪುನಃಸ್ಥಾಪಿಸಲಾಗಿದ್ದು, ಉಳಿದ ಸೇವೆಗಳನ್ನೂ ಸಹಜ ಸ್ಥಿತಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಕಂಪೆನಿ ತಿಳಿಸಿದೆ. ಈ ಅಡಚಣೆಗೆ ಸೈಬರ್ ದಾಳಿ ಕಾರಣವಲ್ಲ ಎಂದೂ ಸ್ಪಷ್ಟಪಡಿಸಿದೆ.
'ಮಂಗಳವಾರ ಬೆಳಗ್ಗೆ ಕೆಲವು ಸೇವೆಗಳ ಸ್ಥಗಿತಕ್ಕೆ ಕಾರಣವಾದ ಆಂತರಿಕ ನವೀಕರಣದ ಬಳಿಕ ನಮ್ಮ ಹಲವು ವ್ಯವಸ್ಥೆಗಳು ಮತ್ತೆ ಕಾರ್ಯನಿರ್ವಹಿಸುತ್ತಿವೆ. ಉಳಿದ ವ್ಯವಸ್ಥೆಗಳನ್ನೂ ಆದಷ್ಟು ಬೇಗ ಪುನಃ ಕಾರ್ಯಾರಂಭಗೊಳಿಸಲು ಪ್ರಯತ್ನಿಸುತ್ತಿದ್ದೇವೆ' ಎಂದು ಆಪಲ್ ವಕ್ತಾರರು 'ನ್ಯೂಯಾರ್ಕ್ ಪೋಸ್ಟ್'ಗೆ ತಿಳಿಸಿದ್ದಾರೆ.
ಸ್ಥಗಿತಗಳನ್ನು ಪತ್ತೆಹಚ್ಚುವ ಡೌನ್‌ಡೆಕ್ಟರ್ ವೇದಿಕೆಯಲ್ಲಿ ಅಮೆರಿಕದ ಪೂರ್ವ ಕರಾವಳಿ ಸಮಯದ ಪ್ರಕಾರ ಮಧ್ಯಾಹ್ನದ ಬಳಿಕ ದೂರುಗಳು ಹೆಚ್ಚಾಗಿದ್ದವು. ಬಳಕೆದಾರರು ತಮ್ಮ ಖಾತೆಗಳಿಗೆ ಸೈನ್ ಇನ್ ಮಾಡಲು, ಕ್ಲೌಡ್ ಸೇವೆಗಳನ್ನು ಬಳಸಲು ಹಾಗೂ ಹೊಸ ಸಾಧನಗಳನ್ನು ಸಕ್ರಿಯಗೊಳಿಸಲು ಸಾಧ್ಯವಾಗದೆ ತೊಂದರೆ ಅನುಭವಿಸಿದರು. ಆಪಲ್ ವಾಲೆಟ್ ಮತ್ತು ಆಪಲ್ ಮ್ಯೂಸಿಕ್ ಸೇವೆಗಳಲ್ಲೂ ಸಂಪರ್ಕ ದೋಷಗಳು ಹಾಗೂ ಪದೇಪದೇ ಸೈನ್ ಇನ್ ವೈಫಲ್ಯಗಳು ಕಾಣಿಸಿಕೊಂಡವು.
ಅಮೆರಿಕಕ್ಕೆ ಮಾತ್ರ ಸೀಮಿತವಾಗದೆ ಈ ಅಡಚಣೆ ಇತರ ದೇಶಗಳಿಗೂ ವ್ಯಾಪಿಸಿತ್ತು. ಬ್ರೆಝಿಲ್, ಗ್ರೀಸ್ ಮತ್ತು ಲಾಟ್ವಿಯಾ ಸೇರಿದಂತೆ ಹಲವು ದೇಶಗಳ ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಿದ್ದರು ಎಂದು 'ನ್ಯೂಯಾರ್ಕ್ ಪೋಸ್ಟ್' ತಿಳಿಸಿದೆ.
ಬಳಕೆದಾರರಿಂದ ದೂರುಗಳು ಹೆಚ್ಚಾಗುತ್ತಿದ್ದರೂ ಆಪಲ್ ನ ಸಿಸ್ಟಮ್ ಸ್ಟೇಟಸ್ ಪುಟದಲ್ಲಿ ಆರಂಭದಲ್ಲಿ ಹಲವು ಸೇವೆಗಳು ಸುಗಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತೋರಿಸಲಾಗಿತ್ತು. ಬಳಿಕ ಆಪಲ್ ಮ್ಯೂಸಿಕ್, ಆಪ್ ಸ್ಟೋರ್ ಮತ್ತು ಆಪಲ್ ಕೇರ್ ಸೇವೆಗಳ ಸಂಪೂರ್ಣ ಸ್ಥಗಿತವನ್ನು ಕಂಪೆನಿ ಒಪ್ಪಿಕೊಂಡಿತು. ಐಕ್ಲೌಡ್ ಸೈನ್ ಇನ್ ವ್ಯವಸ್ಥೆಯಲ್ಲೂ ಸಮಸ್ಯೆ ಕಾಣಿಸಿಕೊಂಡಿತ್ತು. ಅಡಚಣೆಯ ನಿಖರ ವ್ಯಾಪ್ತಿ ಹಾಗೂ ಎಲ್ಲ ಸೇವೆಗಳನ್ನು ಪುನಃಸ್ಥಾಪಿಸಲು ತೆಗೆದುಕೊಂಡ ಸಮಯದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ, ಮಂಗಳವಾರ ನಿಯಮಿತ ನಿರ್ವಹಣಾ ಕಾರ್ಯದ ವೇಳೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯ (NSA) ಅತ್ಯಂತ ರಹಸ್ಯ ಸಂವಹನ ಜಾಲವೂ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
NSA ಉದ್ಯೋಗಿಗಳು ವರ್ಗೀಕೃತ ಮಾಹಿತಿಯನ್ನು ಸುರಕ್ಷಿತವಾಗಿ ವಿನಿಮಯ ಮಾಡಿಕೊಳ್ಳಲು ಬಳಸುವ 'NSA ನೆಟ್' ಎಂಬ ಆಂತರಿಕ ಸಂವಹನ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿತ್ತು ಎಂದು ಅಮೆರಿಕದ ಅಧಿಕಾರಿಯೊಬ್ಬರು 'ನ್ಯೂಯಾರ್ಕ್ ಪೋಸ್ಟ್'ಗೆ ತಿಳಿಸಿದ್ದಾರೆ.
'ಕೆಲವು ಆಂತರಿಕ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಿದ್ದರೂ, ಕಾರ್ಯಾಚರಣೆಗೆ ನಿರ್ಣಾಯಕವಾದ ಸಾಮರ್ಥ್ಯಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ನಮ್ಮ ಸಾಮರ್ಥ್ಯಕ್ಕೆ ಯಾವುದೇ ಧಕ್ಕೆಯಾಗಿಲ್ಲ' ಎಂದು ಅಧಿಕಾರಿ ಹೇಳಿದ್ದಾರೆ.
ಯೋಜಿತ ನಿರ್ವಹಣೆ ಅಥವಾ ಅನಿರೀಕ್ಷಿತ ಅಡಚಣೆಗಳ ಸಂದರ್ಭದಲ್ಲೂ ಕಾರ್ಯಾಚರಣೆ ಮುಂದುವರಿಸಲು NSA ಮೂಲಸೌಕರ್ಯದಲ್ಲಿ ಹಲವು ಹಂತಗಳ ಪರ್ಯಾಯ ವ್ಯವಸ್ಥೆಗಳಿವೆ ಎಂದು ಅವರು ತಿಳಿಸಿದ್ದಾರೆ.
ಈ ಸಮಸ್ಯೆಯ ಕುರಿತು ಮೊದಲು CNN ವರದಿ ಮಾಡಿತ್ತು. ಸಮಸ್ಯೆಯ ವ್ಯಾಪ್ತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ತುರ್ತು ಕಾರ್ಯಗಳಿಗೆ ಸಂಬಂಧಿಸದ ಸಿಬ್ಬಂದಿಗೆ ಕಚೇರಿಗೆ ಆಗಮಿಸುವ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಸಂಸ್ಥೆ ಸೂಚಿಸಿತ್ತು.
178 ಸಂಸ್ಥೆಗಳ ವೆಬ್‌ಸೈಟ್ ಗಳಿಗೆ ಸೈಬರ್ ಭದ್ರತಾ ಬೆದರಿಕೆ
ತಂತ್ರಜ್ಞಾನ ಕ್ಷೇತ್ರದ ಆತಂಕವನ್ನು ಮತ್ತಷ್ಟು ಹೆಚ್ಚಿಸಿರುವ ಪ್ರತ್ಯೇಕ ಘಟನೆಯಲ್ಲಿ, 178 ಸಂಸ್ಥೆಗಳ ವೆಬ್‌ಸೈಟ್ ಗಳಲ್ಲಿ ಹಾನಿಕಾರಕ ಜಾವಾಸ್ಕ್ರಿಪ್ಟ್ ಕೋಡ್ ಪತ್ತೆಯಾಗಿದೆ. ವೆಬ್‌ಸೈಟ್ ಗಳ ಕಾರ್ಯಕ್ಷಮತೆ ಸುಧಾರಿಸುವ ಆಪ್ಟಿಮೈಸ್ಲಿ ವೇದಿಕೆಯಲ್ಲಿನ ಭದ್ರತಾ ದೌರ್ಬಲ್ಯವನ್ನು ಬಳಸಿಕೊಂಡು ಈ ಕೋಡ್ ಸೇರಿಸಲಾಗಿದೆ ಎಂದು ಭದ್ರತಾ ಸಂಶೋಧಕ ಸ್ಕಾಟ್ ಹೆಲ್ಮ್ ಬಹಿರಂಗಪಡಿಸಿದ್ದಾರೆ.
ಪರಿಣಾಮಕ್ಕೊಳಗಾದ ಸಂಸ್ಥೆಗಳಲ್ಲಿ ಝೂಮ್, HSBC, ಈಕ್ವಿಫ್ಯಾಕ್ಸ್, CNN, ಸೇಲ್ಸ್‌ಫೋರ್ಸ್ ಮತ್ತು ಐಕಿಯಾ ಸೇರಿವೆ.
ವೆಬ್‌ಸೈಟ್ ಗಳ ಮೂಲಕ ಬಳಕೆದಾರರ ಕ್ರಿಪ್ಟೊಕರೆನ್ಸಿ ಮತ್ತು ಪಾವತಿ ವಿವರಗಳನ್ನು ಕದಿಯುವುದು, ಕುಕೀಗಳು ಹಾಗೂ ಸ್ಕ್ರೀನ್‌ಶಾಟ್ ಗಳನ್ನು ಸೆರೆಹಿಡಿಯುವುದು ಮತ್ತು ಐಫೋನ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದು ಈ ಹಾನಿಕಾರಕ ಕೋಡ್ ನ ಉದ್ದೇಶವಾಗಿತ್ತು ಎಂದು ಸ್ಕಾಟ್ ಹೆಲ್ಮ್ ತಿಳಿಸಿದ್ದಾರೆ.
ಕ್ರಿಪ್ಟೊಕರೆನ್ಸಿ ಪಾವತಿಗಳ ವಿಳಾಸಗಳನ್ನು ದಾಳಿಕೋರರ ನಿಯಂತ್ರಣದಲ್ಲಿರುವ ವಿಳಾಸಗಳೊಂದಿಗೆ ಬದಲಾಯಿಸುವ ಪ್ರಯತ್ನವೂ ನಡೆದಿತ್ತು.
ತನ್ನ ಪ್ರಾಯೋಗಿಕ ಉತ್ಪನ್ನದಲ್ಲಿನ ಭದ್ರತಾ ದೌರ್ಬಲ್ಯವನ್ನು ಬಳಸಿಕೊಂಡು ಅನಧಿಕೃತ ವ್ಯಕ್ತಿಯೊಬ್ಬರು ಕೆಲವು ಗ್ರಾಹಕರ ಯೋಜನೆಗಳಲ್ಲಿ ಹಾನಿಕಾರಕ ಜಾವಾಸ್ಕ್ರಿಪ್ಟ್ ಕೋಡ್ ಸೇರಿಸಿರುವುದನ್ನು ಆಪ್ಟಿಮೈಸ್ಲಿ ದೃಢಪಡಿಸಿದೆ.
ಮ್ಯಾರಿಯಟ್ ನಿಂದ ಬ್ಯಾಂಕ್‌ಗಳವರೆಗೆ ತಾಂತ್ರಿಕ ಅಡಚಣೆ
ಇತ್ತೀಚಿನ ತಂತ್ರಜ್ಞಾನ ವೈಫಲ್ಯಗಳ ಸರಣಿಯಿಂದ ಅಮೆರಿಕದ ಪ್ರಮುಖ ಹೋಟೆಲ್ ನಿರ್ವಹಣಾ ಸಂಸ್ಥೆಯಾದ ಮ್ಯಾರಿಯಟ್ ಇಂಟರ್‌ನ್ಯಾಷನಲ್ ಕೂಡ ಹೊರತಾಗಿಲ್ಲ. ಮಂಗಳವಾರ ಸಂಸ್ಥೆಯ ತಾಂತ್ರಿಕ ವ್ಯವಸ್ಥೆಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಕೊಠಡಿಗಳ ಕಾಯ್ದಿರಿಸುವಿಕೆ ಮತ್ತು ಚೆಕ್‌ಇನ್ ಪ್ರಕ್ರಿಯೆಯಲ್ಲಿ ಅಡಚಣೆಯಾಗಿದೆ ಎಂದು ಅತಿಥಿಗಳು ದೂರಿದ್ದಾರೆ.
ಬಳಕೆದಾರರು ರೆಡ್ಡಿಟ್ ನಲ್ಲಿ ಈ ಸಮಸ್ಯೆಯ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಡೌನ್‌ಡೆಕ್ಟರ್ ನಲ್ಲೂ ಸ್ಥಗಿತದ ವರದಿಗಳು ಹೆಚ್ಚಾಗಿದ್ದವು. ಮ್ಯಾರಿಯಟ್ ತನ್ನ ವಿವಿಧ ಬ್ರ್ಯಾಂಡ್ ಗಳ ಅಡಿಯಲ್ಲಿ ಸುಮಾರು 10,200 ಹೋಟೆಲ್‌ಗಳನ್ನು ಹಾಗೂ 18 ಲಕ್ಷಕ್ಕೂ ಅಧಿಕ ಕೊಠಡಿಗಳನ್ನು ನಿರ್ವಹಿಸುತ್ತಿದೆ. ಈ ಕುರಿತು ಅಸೋಸಿಯೇಟೆಡ್ ಪ್ರೆಸ್ ಕೇಳಿದ ಪ್ರಶ್ನೆಗಳಿಗೆ ಸಂಸ್ಥೆ ಪ್ರತಿಕ್ರಿಯಿಸಿಲ್ಲ.
ಸೋಮವಾರ ಯುನೈಟೆಡ್ ಏರ್‌ಲೈನ್ಸ್ ನ ತಾಂತ್ರಿಕ ವ್ಯವಸ್ಥೆಯಲ್ಲಿ 90 ನಿಮಿಷಗಳಿಗೂ ಹೆಚ್ಚು ಕಾಲ ವ್ಯತ್ಯಯ ಉಂಟಾಗಿತ್ತು. ಇದರಿಂದ ವಿಮಾನಗಳ ನಿರ್ಗಮನ ವಿಳಂಬವಾಗಿತ್ತು. ಈ ಸಮಸ್ಯೆ ಸೈಬರ್ ಭದ್ರತೆಗೆ ಸಂಬಂಧಿಸಿದ್ದಲ್ಲ ಎಂದು ಚಿಕಾಗೊ ಮೂಲದ ವಿಮಾನಯಾನ ಸಂಸ್ಥೆ ತಿಳಿಸಿತ್ತು.
ಇದಕ್ಕೂ ಮೊದಲು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ನ (FAA) ನೆಟ್‌ವರ್ಕ್ ನಲ್ಲಿನ ದೋಷದಿಂದ ಅಮೆರಿಕದಾದ್ಯಂತ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ ನೂರಾರು ವಿಮಾನಗಳು ವಿಳಂಬಗೊಂಡು, ದೇಶಾದ್ಯಂತ ಲಕ್ಷಾಂತರ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು.
ಸೋಮವಾರವೇ ಚೇಸ್, ಬ್ಯಾಂಕ್ ಆಫ್ ಅಮೆರಿಕ, ವೆಲ್ಸ್ ಫಾರ್ಗೊ ಮತ್ತು ಯುಎಸ್ ಬ್ಯಾಂಕ್ ಸೇರಿದಂತೆ ಪ್ರಮುಖ ಅಮೆರಿಕದ ಬ್ಯಾಂಕ್‌ಗಳ ಆನ್‌ಲೈನ್ ಖಾತೆಗಳನ್ನು ಬಳಸುವಾಗ ಸಾವಿರಾರು ಗ್ರಾಹಕರು ಸಮಸ್ಯೆ ಎದುರಿಸಿದ್ದರು. ಹಣ ವರ್ಗಾವಣೆ ಸೇವೆಯಾದ ಝೆಲ್ಲೆಯಲ್ಲೂ ವ್ಯತ್ಯಯ ಉಂಟಾಗಿತ್ತು.
ಜೆಪಿ ಮೋರ್ಗನ್ ಚೇಸ್ ನಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಹಣಕಾಸು ವ್ಯವಸ್ಥೆಯ ಇತರ ಭಾಗಗಳ ಮೇಲೂ ಪರಿಣಾಮ ಉಂಟಾಗಿತ್ತು. ಈ ಸ್ಥಗಿತಕ್ಕೆ ಸೈಬರ್ ದಾಳಿ ಕಾರಣವಲ್ಲ ಎಂದು ಚೇಸ್ ಸ್ಪಷ್ಟಪಡಿಸಿತ್ತು. ಮಂಗಳವಾರ ತನ್ನ ವ್ಯವಸ್ಥೆಗಳು ಮತ್ತೆ ಸಹಜ ಸ್ಥಿತಿಗೆ ಮರಳಿವೆ ಎಂದು ಬ್ಯಾಂಕ್ ದೃಢಪಡಿಸಿದೆ.
ಮೈಕ್ರೋಸಾಫ್ಟ್ ಸೇವೆಗಳೂ ಸ್ಥಗಿತ
ಕಳೆದ ವಾರ ಜಾಗತಿಕ ಮಟ್ಟದಲ್ಲಿ ಮೈಕ್ರೋಸಾಫ್ಟ್ ಸೇವೆಗಳಲ್ಲೂ ವ್ಯತ್ಯಯ ಉಂಟಾಗಿತ್ತು. ಔಟ್‌ಲುಕ್, ಟೀಮ್ಸ್ ಮತ್ತು AI ಸಹಾಯಕ ಕೋಪೈಲಟ್ ಸೇರಿದಂತೆ ಕಚೇರಿ ಬಳಕೆಯ ಹಲವು ಸಾಧನಗಳು ಹಾಗೂ ಇಮೇಲ್ ಸೇವೆಗಳು ಸ್ಥಗಿತಗೊಂಡಿದ್ದವು. ಇದರಿಂದ ಉದ್ಯಮ ಸಂಸ್ಥೆಗಳು, ಆಸ್ಪತ್ರೆಗಳು, ಫೆಡರಲ್ ನ್ಯಾಯಾಲಯಗಳು ಸೇರಿದಂತೆ ಹಲವು ಸಂಸ್ಥೆಗಳ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರಿತ್ತು.
ಈ ಸ್ಥಗಿತಕ್ಕೆ ಹಾನಿಕಾರಕ ಚಟುವಟಿಕೆ ಕಾರಣ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಮೈಕ್ರೋಸಾಫ್ಟ್ ತಿಳಿಸಿತ್ತು. ಸೈಬರ್ ದಾಳಿ ಅಥವಾ ಕೃತಕ ಬುದ್ಧಿಮತ್ತೆ ಏಜೆಂಟ್‌ಗಳು ಈ ಸಮಸ್ಯೆಗೆ ಕಾರಣವಾಗಿಲ್ಲ ಎಂದೂ ಕಂಪೆನಿ ಸ್ಪಷ್ಟಪಡಿಸಿತ್ತು.
ಇತ್ತೀಚಿನ ದಿನಗಳಲ್ಲಿ ಒಂದರ ನಂತರ ಒಂದರಂತೆ ಸಂಭವಿಸುತ್ತಿರುವ ಈ ತಾಂತ್ರಿಕ ವೈಫಲ್ಯಗಳು ಡಿಜಿಟಲ್ ಮೂಲಸೌಕರ್ಯದ ಮೇಲಿನ ಹೆಚ್ಚುತ್ತಿರುವ ಅವಲಂಬನೆಯ ಅಪಾಯಗಳನ್ನು ಎತ್ತಿ ತೋರಿಸಿವೆ. ಬ್ಯಾಂಕಿಂಗ್, ವಿಮಾನಯಾನ, ಹೋಟೆಲ್ ನಿರ್ವಹಣೆ ಮತ್ತು ರಾಷ್ಟ್ರೀಯ ಭದ್ರತೆಯಂತಹ ನಿರ್ಣಾಯಕ ಕ್ಷೇತ್ರಗಳು ತಂತ್ರಜ್ಞಾನ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿರುವುದರಿಂದ, ಸಣ್ಣ ತಾಂತ್ರಿಕ ದೋಷವೂ ವ್ಯಾಪಕ ಪರಿಣಾಮ ಬೀರಬಲ್ಲದು ಎಂಬುದನ್ನು ಈ ಘಟನೆಗಳು ಮತ್ತೆ ಮುನ್ನೆಲೆಗೆ ತಂದಿವೆ.







