ಪಾಕಿಸ್ತಾನಕ್ಕೆ ಹಿನ್ನಡೆ: ಪಿಎಸ್ಎಲ್ ಆಯೋಜನೆಗೆ ಯುಎಇ ನಕಾರ

Photo credit: X
ದುಬೈ : ಪಾಕಿಸ್ತಾನ ಸೂಪರ್ ಲೀಗ್ನ ಉಳಿಕೆ ಪಂದ್ಯಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಆಯೋಜಿಸಲು ಅವಕಾಶ ನೀಡಬೇಕು ಎಂಬ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮನವಿಯನ್ನು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ನಿರಾಕರಿಸುವ ಸಾಧ್ಯತೆ ನಿಚ್ಚಳವಾಗಿದೆ. ಭಾರತ- ಪಾಕಿಸ್ತಾನ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಎಮಿರೇಟ್ಸ್ ಈ ನಿರ್ಧಾರಕ್ಕೆ ಬಂದಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮನವಿಯನ್ನು ತಿರಸ್ಕರಿಸಲು ಮಂಡಳಿ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. ಪಿಎಸ್ಎಲ್ನ ಉಳಿಕೆ ಪಂದ್ಯಗಳು ಯುಎಇನಲ್ಲಿ ನಡೆಯಲಿವೆ ಎಂದು ಪಾಕಿಸ್ತಾನ ಘೋಷಿಸಿತ್ತು. ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ ಭದ್ರತಾ ಕಾರಣಗಳಿಂದಾಗಿ ಯುಎಇ ಈ ನಿರ್ಧಾರ ಕೈಗೊಂಡಿದೆ.
ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಇತ್ತೀಚಿನ ವರ್ಷಗಳಲ್ಲಿ ಬಿಸಿಸಿಐ ಜತೆಗೆ ಗಟ್ಟಿ ಸಂಬಂಧವನ್ನು ಹೊಂದಿದ್ದು, ಐಸಿಸಿ, ಟಿ20, ವಿಶ್ವಕಪ್-2021ರ ಭಾರತ ಆವೃತ್ತಿಯನ್ನು, ಐಪಿಎಲ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ-2025ರ ಪಂದ್ಯಗಳನ್ನು ಆಯೋಜಿಸಿತ್ತು ಎಂದು ಮೂಲಗಳು ವಿವರಿಸಿವೆ.
ದುಬೈ ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಕೇಂದ್ರಸ್ಥಾನವೂ ಆಗಿದ್ದು, ಬಿಸಿಸಿಐನ ಮಾಜಿ ಕಾರ್ಯದರ್ಶಿ ಜಯ್ ಶಾ ಅವರು ಇದರ ಮುಖ್ಯಸ್ಥರಾಗಿದ್ದಾರೆ.
"ಯುಎಇ ಕ್ರಿಕೆಟ್ ಆಸ್ವಾದಿಸುವ ದಕ್ಷಿಣ ಏಷ್ಯಾದ ವೈವಿಧ್ಯಮಯ ಜನಸಮೂಹವನ್ನು ಹೊಂದಿದೆ. ಇಂಥ ಉದ್ವಿಗ್ನ ಸ್ಥಿತಿಯಲ್ಲಿ ಪಿಎಸ್ಎಲ್ನಂಥ ಟೂರ್ನಿ ಆಯೋಜಿಸುವುದು ಸಾಮರಸ್ಯವನ್ನು ಕದಡಲು ಕಾರಣವಾಗಲಿದೆ ಹಾಗೂ ಭದ್ರತಾ ಅಪಾಯಕ್ಕೆ ಮತ್ತು ಅನಗತ್ಯವಾಗಿ ಸಮುದಾಯಗಳ ನಡುವೆ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಮೂಲಗಳು ವಿವರಿಸಿವೆ.