ಕಾನೂನು ಪ್ರಕ್ರಿಯೆ ಮೂಲಕ ಶೇಖ್ ಹಸೀನಾರನ್ನು ವಾಪಾಸ್ಸು ಕರೆತರಲು ಬಾಂಗ್ಲಾದೇಶ ಪ್ರಯತ್ನ

ಶೇಖ್ ಹಸೀನಾ | Photo Credit : PTI
ಢಾಕಾ, ಮೇ 22: ಮಾಜಿ ಪ್ರಧಾನಿ ಶೇಖ್ ಹಸೀನಾ ಕಾನೂನು ಪ್ರಕ್ರಿಯೆಯಗಳ ಮೂಲಕ ದೇಶಕ್ಕೆ ಮರಳಬೇಕೆಂದು ತಮ್ಮ ಸರಕಾರ ಬಯಸುತ್ತಿದೆ ಎಂದು ಬಾಂಗ್ಲಾದೇಶದ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್ ಹೇಳಿದ್ದಾರೆ.
ಸ್ವದೇಶಕ್ಕೆ ಅತೀ ಶೀಘ್ರ ಹಿಂದಿರುಗುವ ಭರವಸೆಯಿದೆ ಎಂದು ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಹ್ಮದ್ `ಹಸೀನಾ ಸ್ವದೇಶಕ್ಕೆ ಮರಳಲು ಯಾವುದೇ ಕಾನೂನು ಅಡೆತಡೆಗಳ ಬಗ್ಗೆ ತನಗೆ ತಿಳಿದಿಲ್ಲ. ಕಾನೂನು ಪ್ರಕ್ರಿಯೆಗಳ ಮೂಲಕ ಅವರು ಮರಳಬೇಕೆಂದು ಬಯಸುತ್ತೇವೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
ಈ ಮಧ್ಯೆ, ಹಸೀನಾ ಬಾಂಗ್ಲಾದೇಶಕ್ಕೆ ಹಿಂದಿರುಗಿದರೆ ಅವರ ವಿರುದ್ಧ ಯಾವುದೇ ನ್ಯಾಯಾಂಗೇತರ ಕ್ರಮಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಆದರೆ ಹಸೀನಾ ನ್ಯಾಯಾಂಗಕ್ಕೆ ಶರಣಾಗಬೇಕು ಮತ್ತು ತನ್ನ ವಿರುದ್ಧದ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬಾಂಗ್ಲಾ ಪ್ರಧಾನಿಯವರ ಮಾಹಿತಿ ವ್ಯವಹಾರಗಳ ಸಲಹೆಗಾರ ಜಹೇದುರ್ ರಹ್ಮಾನ್ ಹೇಳಿದ್ದಾರೆ.




