ಡಿ.16ರಂದು ಬಾಂಗ್ಲಾದೇಶಕ್ಕೆ ಮರಳುವೆ: ಶೇಖ್ ಹಸೀನಾ ಘೋಷಣೆ

ಶೇಖ್ ಹಸೀನಾ (Photo: PTI)
ಹೊಸದಿಲ್ಲಿ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಿಂದ ಡಿಸೆಂಬರ್ 16ರಂದು ತಾಯ್ನಾಡಿಗೆ ಮರಳುವುದಾಗಿ ಘೋಷಿಸಿದ್ದಾರೆ. ಬಾಂಗ್ಲಾದೇಶದಲ್ಲಿ ರಾಜಕೀಯ ಮತ್ತು ಕಾನೂನು ಸಂಘರ್ಷಗಳು ತೀವ್ರಗೊಳ್ಳುತ್ತಿರುವ ನಡುವೆಯೇ, ಇದೇ ಮೊದಲ ಬಾರಿಗೆ ಅವರು ತಮ್ಮ ವಾಪಸಾತಿಗೆ ಸಂಬಂಧಿಸಿ ನಿರ್ದಿಷ್ಟ ದಿನಾಂಕವನ್ನು ಘೋಷಿಸಿದ್ದಾರೆ.
1971ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶ ವಿಮೋಚನೆಗೊಂಡ ನೆನಪಿಗಾಗಿ ಡಿಸೆಂಬರ್ 16ರಂದು ಬಾಂಗ್ಲಾದೇಶದಲ್ಲಿ ವಿಜಯ ದಿನವನ್ನು ಆಚರಿಸಲಾಗುತ್ತದೆ. ಅದೇ ದಿನ ಅವರು ಮರಳುವುದಾಗಿ ಘೋಷಿಸಿದ್ದಾರೆ.
ಮಂಗಳವಾರ ರಾಯಿಟರ್ಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹಸೀನಾ ಅವರ ವಕ್ತಾರ ಸೈಯದ್ ಮೊಝಮ್ಮಲ್ ಅಲಿ, ಮಾಜಿ ಪ್ರಧಾನಿ ಡಿಸೆಂಬರ್ 16ರಂದು ಢಾಕಾಗೆ ಮರಳಲು ಉದ್ದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ದಂಗೆಯ ಬಳಿಕ ಅವರು ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಬಂದಿದ್ದರು. ಈ ಮೂಲಕ 15 ವರ್ಷಗಳ ಅವರ ಆಡಳಿತ ಕೊನೆಗೊಂಡಿತ್ತು.
ಢಾಕಾಗೆ ವಾಪಾಸ್ಸಾಗಲು ಬಿಮಾನ್ ಬಾಂಗ್ಲಾದೇಶ ಏರ್ಲೈನ್ಸ್ ವಿಮಾನದ ವ್ಯವಸ್ಥೆ ಮಾಡುವಂತೆ ಶೇಖ್ ಹಸೀನಾ ಬಾಂಗ್ಲಾದೇಶ ಸರಕಾರವನ್ನು ಒತ್ತಾಯಿಸಿದ್ದಾರೆ. ತಮ್ಮ ವಾಪಸಾತಿಗೆ ಅನುಕೂಲ ಮಾಡಿಕೊಡುವ ಜವಾಬ್ದಾರಿ ಸರಕಾರಕ್ಕಿದೆ ಎಂದು ವಾದಿಸಿದ್ದಾರೆ.
ತಾಯ್ನಾಡಿಗೆ ಮರಳಲು ಅನುಕೂಲವಾಗುವಂತೆ ಹೊಸ ಬಾಂಗ್ಲಾದೇಶಿ ಪಾಸ್ಪೋರ್ಟ್ ಮತ್ತು ಗುರುತಿನ ಚೀಟಿ ನೀಡುವಂತೆ ಹಸೀನಾ ಈ ಮೊದಲು ಬಾಂಗ್ಲಾದೇಶ ಸರಕಾರಕ್ಕೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೆ ಹಸೀನಾ ಬಾಂಗ್ಲಾದೇಶಕ್ಕೆ ತೆರಳುವ ದಿನಾಂಕವನ್ನು ಘೋಷಿಸಲಾಗಿದೆ.
2024ರ ಆಗಸ್ಟ್ನಲ್ಲಿ ಭಾರತಕ್ಕೆ ಪಲಾಯನ ಮಾಡಿದ ನಂತರ ಅವರ ಹಿಂದಿನ ಪಾಸ್ಪೋರ್ಟ್ ಮತ್ತು ಗುರುತಿನ ದಾಖಲೆಗಳನ್ನು ರದ್ದುಗೊಳಿಸಲಾಗಿತ್ತು.






