ವಂಚನೆ ಆರೋಪಗಳ ನಡುವೆ WHO ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕರ ಸ್ಥಾನಕ್ಕೆ ಶೇಖ್ ಹಸೀನಾ ಪುತ್ರಿ ಸೈಮಾ ವಾಝೆದ್ ರಾಜೀನಾಮೆ

Photo credit | X/drSaimaWazed
ಹೊಸದಿಲ್ಲಿ: ವಿಶ್ವ ಆರೋಗ್ಯ ಸಂಸ್ಥೆಯ (WHO) ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕರ ಸ್ಥಾನಕ್ಕೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರಿ ಸೈಮಾ ವಾಝೆದ್ ಅವರು ರಾಜೀನಾಮೆ ನೀಡಿದ್ದಾರೆ.
UN ಆರೋಗ್ಯ ಸಂಸ್ಥೆ ಮತ್ತು ಬಾಂಗ್ಲಾದೇಶದ ಅಧಿಕಾರಿಗಳು ನಡೆಸುತ್ತಿರುವ ವಂಚನೆ ಪ್ರಕರಣಗಳ ತನಿಖೆಯ ಮಧ್ಯೆ ಈ ಬೆಳವಣಿಗೆ ನಡೆದಿದೆ ಎಂದು Reuters ವರದಿ ಮಾಡಿದೆ.
2024ರ ಆರಂಭದಲ್ಲಿ WHO ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕಿಯಾಗಿ 5 ವರ್ಷಗಳ ಅವಧಿಗೆ ಅಧಿಕಾರ ಸ್ವೀಕರಿಸಿದ್ದ ವಾಝೆದ್, ಕಳೆದ ವರ್ಷದಿಂದ ವೇತನರಹಿತ ರಜೆಯಲ್ಲಿದ್ದರು. ಹಣಕಾಸು ವಂಚನೆ, ಶೈಕ್ಷಣಿಕ ಅರ್ಹತೆ, ಬಾಂಗ್ಲಾದೇಶದಲ್ಲಿ ಜಮೀನು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದ ಆರೋಪಗಳು ಅವರ ವಿರುದ್ಧ ಕೇಳಿಬಂದಿವೆ.
Reuters ವರದಿ ಪ್ರಕಾರ, ವಾಝೆದ್ ಅವರು ಬುಧವಾರ WHO ಮಹಾನಿರ್ದೇಶಕ ಟೆಡ್ರೋಸ್ ಅಧನೋಮ್ ಘೆಬ್ರೆಯೆಸಸ್ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
WHO ನಾಯಕತ್ವದ ಮೇಲಿನ ವಿಶ್ವಾಸ ಕಳೆದುಕೊಂಡಿದ್ದೇನೆ: ವಾಝೆದ್
ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿರುವುದಾಗಿ ವಾಝೆದ್ ತಿಳಿಸಿದ್ದಾರೆ.
“ನನ್ನ ಪ್ರಾದೇಶಿಕ ವ್ಯಾಪ್ತಿಯ ದೇಶಗಳಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ನನ್ನನ್ನು ಪ್ರಾದೇಶಿಕ ನಿರ್ದೇಶಕಿಯ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಆ ಜವಾಬ್ದಾರಿಯನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಟೆಡ್ರೋಸ್ ಅವರ ನಾಯಕತ್ವದ ಮೇಲಿನ ಎಲ್ಲಾ ನಂಬಿಕೆ ಮತ್ತು ವಿಶ್ವಾಸವನ್ನು ಕಳೆದುಕೊಂಡಿದ್ದೇನೆ. ವೇತನರಹಿತ ರಜೆಯಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಮತ್ತು ಹುದ್ದೆಯಿಂದ ಹಿಂದೆ ಸರಿಯಲು ನಿರ್ಧರಿಸಿರುವುದಾಗಿ ವಾಝೆದ್ ಹೇಳಿದ್ದಾರೆ.
ವಾಝೆದ್ ಅವರು ರಾಜೀನಾಮೆ ನೀಡುವ ಮುನ್ನವೇ, ಅವರನ್ನು ಹುದ್ದೆಯಿಂದ ಅಧಿಕೃತವಾಗಿ ತೆಗೆದುಹಾಕಲು WHO ಸಿದ್ಧತೆ ನಡೆಸುತ್ತಿತ್ತು ಎಂದು ಮೂಲಗಳು ತಿಳಿಸಿರುವ ಬಗ್ಗೆ Reuters ವರದಿ ಮಾಡಿದೆ.






