ಇಸ್ರೇಲ್ ನಿಂದ ವಾಣಿಜ್ಯ ಸರಕುಗಳ ಸಾಗಣೆ ಸ್ಥಗಿತ; ಗಾಝಾದಲ್ಲಿ ಆಹಾರದ ಬಿಕ್ಕಟ್ಟು ತೀವ್ರ
ಎರಡೇ ದಿನಗಳಲ್ಲಿ ಗಗನಕ್ಕೇರಿದ ಬೆಲೆ

ಗಾಝಾ ನಗರ, ಅ. 19: ವಾಣಿಜ್ಯ ಸರಕುಗಳ ಆಮದಿಗೆ ಇಸ್ರೇಲ್ ನಿರ್ಬಂಧ ಹೇರಿರುವುದರಿಂದ ಗಾಝಾದಲ್ಲಿ ಆಹಾರದ ಬಿಕ್ಕಟ್ಟು ತೀವ್ರಗೊಳ್ಳುವ ಆತಂಕ ಎದುರಾಗಿದೆ. ಗಡಿ ಮಾರ್ಗಗಳು ಮುಚ್ಚಿದ ಎರಡರಿಂದ ಮೂರು ದಿನಗಳಲ್ಲೇ ಅಗತ್ಯ ಆಹಾರ ಪದಾರ್ಥಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಈಗಾಗಲೇ ಬಡತನ ಮತ್ತು ದಿಗ್ಬಂಧನದ ಸಂಕಷ್ಟದಲ್ಲಿರುವ ಕುಟುಂಬಗಳು ತುತ್ತಿನ ಚೀಲ ತುಂಬಿಸಿಕೊಳ್ಳಲೂ ಪರದಾಡುತ್ತಿವೆ ಎಂದು Aljazeera ವರದಿ ಮಾಡಿದೆ.
ಬೆಲೆ ಮತ್ತಷ್ಟು ಏರಬಹುದು ಎಂಬ ಆತಂಕದಿಂದ ಜನರು ಲಭ್ಯವಿರುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಒಂದು ದಿನದ ಊಟಕ್ಕೂ ಹಣ ಹೊಂದಿಸಲಾಗದ ಅನೇಕ ಕುಟುಂಬಗಳಿಗೆ ಹೆಚ್ಚುವರಿ ಆಹಾರ ಖರೀದಿಸುವುದು ಅಸಾಧ್ಯವಾಗಿದೆ. ಗಡಿ ಮಾರ್ಗಗಳು ದೀರ್ಘಕಾಲ ಮುಚ್ಚಲ್ಪಟ್ಟರೆ ಪರಿಸ್ಥಿತಿ ಮತ್ತಷ್ಟು ಹದಗೆಡುವ ಭೀತಿ ಎದುರಾಗಿದೆ.
ವಾಣಿಜ್ಯ ಸರಕುಗಳು ಇನ್ನು ಮುಂದೆ ಗಾಝಾ ಪ್ರವೇಶಿಸುವುದಿಲ್ಲ ಎಂದು ಇಸ್ರೇಲ್ ಬುಧವಾರ ಘೋಷಿಸಿದ ಬಳಿಕ ಹಿಟ್ಟು, ಮೊಟ್ಟೆ, ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಫೆಲೆಸ್ತೀನಿನ ವ್ಯಾಪಾರಿಗಳು ಮತ್ತು ಗಾಝಾದಲ್ಲಿ ಇನ್ನೂ ಸ್ವಲ್ಪ ಮಟ್ಟಿನ ಪ್ರಭಾವ ಹೊಂದಿರುವ ಹಮಾಸ್ ನಡುವಿನ ಶುಲ್ಕ ವಿವಾದ ಈ ಬೆಳವಣಿಗೆಗೆ ಕಾರಣವಾಗಿದೆ.
2023ರ ಅಕ್ಟೋಬರ್ ನಲ್ಲಿ ಇಸ್ರೇಲ್ ಗಾಝಾದ ಮೇಲೆ ಯುದ್ಧ ಆರಂಭಿಸಿದ ಬಳಿಕ ಲಕ್ಷಾಂತರ ಫೆಲೆಸ್ತೀನಿಯನ್ನರು ತೀವ್ರ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. ಯುದ್ಧ ಮತ್ತು ದಿಗ್ಬಂಧನದಿಂದ ಜನರ ಆದಾಯ ಕುಸಿದಿದ್ದು, ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಹಣದ ಕೊರತೆಯಿಂದಾಗಿ ಜನರು ಒಟ್ಟಿಗೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಖರೀದಿಸಲು ಸಾಧ್ಯವಾಗುತ್ತಿಲ್ಲ.
ಮೊಟ್ಟೆ, ಈರುಳ್ಳಿ ಬೆಲೆಯೂ ದುಬಾರಿ
ಉತ್ತರ ಗಾಝಾದ ಜಬಾಲಿಯಾದ 52 ವರ್ಷದ ಇಸ್ಮಾಯಿಲ್ ಅಲ್-ಬರಾವಿ ಅವರು, ಗಡಿ ಮಾರ್ಗಗಳು ಮುಚ್ಚಲ್ಪಟ್ಟ ಎರಡರಿಂದ ಮೂರು ದಿನಗಳಲ್ಲೇ ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಏರಿರುವುದನ್ನು ಗಮನಿಸಿದ್ದಾರೆ. ಗಡಿ ಮಾರ್ಗಗಳ ಸ್ಥಿತಿಗತಿಗಳ ಕುರಿತು ಅನಿಶ್ಚಿತತೆ ಉಂಟಾದಾಗಲೆಲ್ಲಾ ಬೆಲೆಗಳು ಏರುತ್ತವೆ ಎಂದು ಅವರು ಹೇಳಿದ್ದಾರೆ.
ಹಿಂದೆ 35 ಶೆಕೆಲ್ ಗಳಿಗೆ (11.34 ಡಾಲರ್) ಸಿಗುತ್ತಿದ್ದ ಒಂದು ಪೆಟ್ಟಿಗೆ ಮೊಟ್ಟೆಗಳ ಬೆಲೆ ಈಗ 60ರಿಂದ 70 ಶೆಕೆಲ್ ಗಳಿಗೆ (18ರಿಂದ 21 ಡಾಲರ್) ಏರಿಕೆಯಾಗಿದೆ. ಒಂದು ಕಿಲೋಗ್ರಾಂ ಈರುಳ್ಳಿಯ ಬೆಲೆ 5ರಿಂದ 6 ಶೆಕೆಲ್ ಗಳಿಂದ 8ರಿಂದ 10 ಶೆಕೆಲ್ ಗಳಿಗೆ ಹೆಚ್ಚಾಗಿದೆ. ಅವಕಾಡೊ ಹಣ್ಣಿನ ಬೆಲೆಯೂ ಕಿಲೋಗ್ರಾಂಗೆ 7ರಿಂದ 8 ಶೆಕೆಲ್‌ಗಳಿಂದ ಸುಮಾರು 15 ಶೆಕೆಲ್ ಗಳಿಗೆ ಏರಿದೆ.
‘ಕೇವಲ ಎರಡರಿಂದ ಮೂರು ದಿನಗಳಲ್ಲಿ ಈ ಬೆಲೆ ಏರಿಕೆಯಾಗಿದೆ. ಗಡಿ ಮಾರ್ಗಗಳು ಇನ್ನೂ 10ರಿಂದ 15 ದಿನಗಳವರೆಗೆ ಮುಚ್ಚಲ್ಪಟ್ಟರೆ ಬೆಲೆಗಳು ಎಲ್ಲಿಗೆ ತಲುಪಬಹುದು ಎಂಬ ಆತಂಕವಿದೆ’ ಎಂದು ಅಲ್-ಬರಾವಿ ಹೇಳಿದ್ದಾರೆ.
ಬೆಲೆ ಏರಿಕೆಯಿಂದಾಗಿ ಹಿಂದೆ 30 ಮೊಟ್ಟೆಗಳ ಪೂರ್ಣ ಪೆಟ್ಟಿಗೆಯನ್ನು ಖರೀದಿಸುತ್ತಿದ್ದ ಅವರು, ಈಗ ನಾಲ್ಕು ಅಥವಾ ಐದು ಮೊಟ್ಟೆಗಳನ್ನು ಮಾತ್ರ ಖರೀದಿಸುವ ಸ್ಥಿತಿಗೆ ತಲುಪಿದ್ದಾರೆ.
‘ಜನರ ಸಂಕಷ್ಟದ ಲಾಭವನ್ನು ಎಲ್ಲರೂ ಪಡೆಯುತ್ತಿದ್ದಾರೆ. ಇಲ್ಲಿ ಯಾರಲ್ಲೂ ಕರುಣೆಯಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಡಿ ಮಾರ್ಗಗಳು ಮುಚ್ಚಬಹುದು ಎಂಬ ಸುದ್ದಿ ಕೇಳಿದ ಕೂಡಲೇ ವ್ಯಾಪಾರಿಗಳು ಬೆಲೆ ಏರಿಸುತ್ತಾರೆ. ಇದರಿಂದ ಸರಕುಗಳ ಕೊರತೆಯ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಗಡಿ ಮಾರ್ಗಗಳು ದೀರ್ಘಕಾಲ ಮುಚ್ಚಲ್ಪಟ್ಟರೆ, 50 ಕೆ.ಜಿ. ಹಿಟ್ಟಿನ ಚೀಲದ ಬೆಲೆ 200ರಿಂದ 300 ಶೆಕೆಲ್ ಗಳಷ್ಟು ಏರಬಹುದು ಎಂದು ಅಲ್-ಬರಾವಿ ಅಂದಾಜಿಸಿದ್ದಾರೆ.
ತಮ್ಮ ಮದುವೆಯಾದ ಹೆಣ್ಣುಮಕ್ಕಳು ಮತ್ತು ಅವರ ಮಕ್ಕಳನ್ನೂ ಒಳಗೊಂಡಂತೆ ಸುಮಾರು 11ರಿಂದ 12 ಸದಸ್ಯರಿರುವ ವಿಸ್ತೃತ ಕುಟುಂಬಕ್ಕೆ ಆಹಾರ ಒದಗಿಸುವ ಜವಾಬ್ದಾರಿ ಅವರ ಮೇಲಿದೆ. ಹಣ ಸಿಕ್ಕಾಗಲೆಲ್ಲಾ ಹಿಟ್ಟು, ಅಕ್ಕಿ, ಅಡುಗೆ ಎಣ್ಣೆ, ಈರುಳ್ಳಿ ಮತ್ತು ಆಲೂಗಡ್ಡೆಯಂತಹ ಅಗತ್ಯ ವಸ್ತುಗಳನ್ನು ಖರೀದಿಸಲು ಅವರು ಆದ್ಯತೆ ನೀಡುತ್ತಾರೆ.
‘ಕೆಲವರಿಗೆ ಒಂದು ದಿನದ ಊಟಕ್ಕೂ ಹಣವಿರುವುದಿಲ್ಲ. ಹಣವೇ ಇಲ್ಲದಿರುವಾಗ ಅವರು ಹೇಗೆ ಆಹಾರ ಸಂಗ್ರಹಿಸಿಡಲು ಸಾಧ್ಯ?’ ಎಂದು ಅವರು ಪ್ರಶ್ನಿಸಿದ್ದಾರೆ.
ಆಹಾರ ಸಂಗ್ರಹಿಸಿಡುವುದಕ್ಕೂ ಮಿತಿಗಳಿವೆ. ತಾಜಾ ತರಕಾರಿಗಳು ಕೆಲವೇ ದಿನಗಳಲ್ಲಿ ಹಾಳಾಗುತ್ತವೆ. ವಿದ್ಯುತ್ ಪೂರೈಕೆ ಅಸ್ಥಿರವಾಗಿರುವುದರಿಂದ ಮಾಂಸವನ್ನು ದೀರ್ಘಕಾಲ ಸಂಗ್ರಹಿಸಿಡುವುದೂ ಕಷ್ಟಕರವಾಗಿದೆ.
ಶುಲ್ಕ ವಿವಾದ: ಇಸ್ರೇಲ್ ವಿರುದ್ಧ ಗಾಝಾ ಅಧಿಕಾರಿಗಳ ಆರೋಪ
ವಾಣಿಜ್ಯ ಟ್ರಕ್ ಗಳ ಮೇಲೆ ತೆರಿಗೆ ಅಥವಾ ಸರ್ಕಾರಿ ಶುಲ್ಕ ವಿಧಿಸಲಾಗಿದೆ ಎಂಬ ಇಸ್ರೇಲ್ ನ ಆರೋಪವನ್ನು ಗಾಝಾದ ಸರ್ಕಾರಿ ಮಾಧ್ಯಮ ಕಚೇರಿ ಗುರುವಾರ ತಿರಸ್ಕರಿಸಿದೆ.
ಇಸ್ರೇಲ್ ಉಲ್ಲೇಖಿಸಿರುವ 10,000 ಶೆಕೆಲ್ ಗಳ ಮೊತ್ತವು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವು ನೀಡಲು ಮತ್ತು ಆರ್ಥಿಕ ಪರಿಹಾರ ಯೋಜನೆಗಳನ್ನು ಬೆಂಬಲಿಸಲು ರೂಪಿಸಿರುವ ಸ್ವಯಂಪ್ರೇರಿತ ಸಮುದಾಯ ನಿಧಿಗೆ ಸಂಬಂಧಿಸಿದೆ ಎಂದು ಕಚೇರಿ ಸ್ಪಷ್ಟಪಡಿಸಿದೆ.
ನಗದು ಲಭ್ಯತೆಯ ಕೊರತೆ ಮತ್ತು ಹಳೆಯ ನೋಟುಗಳ ಚಲಾವಣೆಯಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಲು ವಾಣಿಜ್ಯ ಮಂಡಳಿಯೊಂದಿಗೆ ಸಮಾಲೋಚಿಸಿ ನಗದು ವಹಿವಾಟುಗಳ ಮೇಲೆ ಶೇ. 30ರಷ್ಟು ದರ ವಿಧಿಸುವ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಅದು ತಿಳಿಸಿದೆ.
ಗಾಝಾಕ್ಕೆ ಸರಕುಗಳ ಪೂರೈಕೆಯ ಮೇಲೆ ಮತ್ತಷ್ಟು ನಿರ್ಬಂಧ ಹೇರಲು ಇಸ್ರೇಲ್ ಈ ವಿವಾದವನ್ನು ಬಳಸಿಕೊಳ್ಳುತ್ತಿದೆ ಎಂದು ಕಚೇರಿ ಆರೋಪಿಸಿದೆ. 2007ರಿಂದ ಇಸ್ರೇಲ್ ನ ದಿಗ್ಬಂಧನಕ್ಕೆ ಒಳಗಾಗಿರುವ ಗಾಝಾಕ್ಕೆ ಸರಕು ಸಾಗಿಸುವ ಟ್ರಕ್ ಗಳ ಪ್ರವೇಶ ಕಡಿಮೆಯಾಗಿರುವುದಕ್ಕೆ ಅಲ್ಲಿನ ಅಧಿಕಾರಿಗಳು ಕಾರಣರಲ್ಲ ಎಂದೂ ಹೇಳಿದೆ.
ಅಸ್ತಿತ್ವದಲ್ಲಿರುವ ಒಪ್ಪಂದಗಳ ಪ್ರಕಾರ ಪ್ರತಿದಿನ 600 ಟ್ರಕ್‌ಗಳು ಗಾಝಾ ಪ್ರವೇಶಿಸಲು ಅವಕಾಶ ಕಲ್ಪಿಸುವಂತೆ ಮಧ್ಯವರ್ತಿಗಳು ಮತ್ತು ಅಂತರರಾಷ್ಟ್ರೀಯ ಸಮುದಾಯದ ಪ್ರತಿನಿಧಿಗಳಿಗೆ ಮನವಿ ಮಾಡಿದೆ. ನಿರ್ಬಂಧಗಳು ಮುಂದುವರಿದರೆ ಮಾನವೀಯ ಮತ್ತು ಆರ್ಥಿಕ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದೆ.
ಆಹಾರ ಬೆಲೆ ಶೇ. 204ರಷ್ಟು ಹೆಚ್ಚಳ
ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (OCHA) ವರದಿ ಪ್ರಕಾರ, 2026ರ ಸೆಪ್ಟೆಂಬರ್ ವೇಳೆಗೆ ಗಾಝಾದಲ್ಲಿ ಆಹಾರ ಪದಾರ್ಥಗಳ ಬೆಲೆಗಳು 2023ರ ಅಕ್ಟೋಬರ್ ಗಿಂತ ಮುಂಚಿನ ಮಟ್ಟಕ್ಕೆ ಹೋಲಿಸಿದರೆ ಸರಾಸರಿ ಶೇ. 204ರಷ್ಟು ಹೆಚ್ಚಾಗಿವೆ.
ಹೊಸ ಗಡಿ ನಿರ್ಬಂಧಗಳನ್ನು ವಿಧಿಸುವುದಕ್ಕೂ ಮುನ್ನ, ಅಕ್ಟೋಬರ್ 2ರಂದು OCHA ಬಿಡುಗಡೆ ಮಾಡಿದ್ದ ಪರಿಸ್ಥಿತಿ ವರದಿಯು ಗಾಝಾ ನಿವಾಸಿಗಳು ಎದುರಿಸುತ್ತಿರುವ ವ್ಯಾಪಕ ಮಾನವೀಯ ಸಂಕಷ್ಟಗಳನ್ನು ದಾಖಲಿಸಿತ್ತು.
‘ಹಿಟ್ಟು ಖರೀದಿಸಲೂ ಸಾಧ್ಯವಾಗುತ್ತಿಲ್ಲ’
ಉತ್ತರ ಗಾಝಾದ ಬೀಟ್ ಲಾಹಿಯಾದಲ್ಲಿ ವಾಸಿಸುತ್ತಿರುವ, ಸ್ಥಳಾಂತರಗೊಂಡ 50 ವರ್ಷದ ಇಮಾನ್ ಅಥಲ್ಲಾ ಅವರಿಗೆ ಆಹಾರ ಪೂರೈಕೆ ಸ್ಥಗಿತಗೊಂಡಿರುವುದು 2025ರಲ್ಲಿ ಈ ಪ್ರದೇಶವನ್ನು ಕಾಡಿದ್ದ ಮಾನವ ನಿರ್ಮಿತ ಕ್ಷಾಮದ ನೆನಪುಗಳನ್ನು ಮರುಕಳಿಸಿದೆ.
ಗಡಿ ಮಾರ್ಗಗಳು ಮುಚ್ಚುವ ಮೊದಲು ಒಂದು ಚೀಲ ಹಿಟ್ಟಿನ ಬೆಲೆ 25ರಿಂದ 35 ಶೆಕೆಲ್ ಗಳಷ್ಟಿತ್ತು. ಈಗ ಅದು ಸುಮಾರು 80 ಶೆಕೆಲ್ ಗಳಿಗೆ ಏರಿಕೆಯಾಗಿದೆ. ಆದಾಯದ ಕೊರತೆ ಮತ್ತು ಕುಟುಂಬದ ಜವಾಬ್ದಾರಿಯಿಂದಾಗಿ ಅಗತ್ಯ ಆಹಾರ ಪದಾರ್ಥಗಳನ್ನು ಖರೀದಿಸುವುದೂ ಕಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
‘ಗಡಿಗಳು ಮುಚ್ಚುವ ಮೊದಲು ಹಿಟ್ಟು ಕೈಗೆಟುಕುವ ದರದಲ್ಲಿತ್ತು. ಹೇಗೋ ಖರೀದಿಸಲು ಸಾಧ್ಯವಾಗುತ್ತಿತ್ತು. ಈಗ ಅದರ ಬೆಲೆ 80 ಶೆಕೆಲ್‌ಗಳಿಗೆ ಏರಿದೆ’ ಎಂದು ಅಥಲ್ಲಾ ಹೇಳಿದ್ದಾರೆ.
ಸಹಾಯ ವಿತರಣೆಯ ಮೂಲಕ ಕುಟುಂಬಕ್ಕೆ ದೊರೆಯುವ ಹಿಟ್ಟು ಒಂದು ತಿಂಗಳಿಗೂ ಕಡಿಮೆ ಅವಧಿಗೆ ಸಾಕಾಗುತ್ತದೆ. ತಾಜಾ ಹಣ್ಣುಗಳು ಮತ್ತು ಮೊಟ್ಟೆಗಳನ್ನು ಖರೀದಿಸುವುದು ಅಸಾಧ್ಯವಾಗಿದೆ.
‘ಹಿಂದೆ ನಾವು ಹೆಚ್ಚು ಆಹಾರ ಸೇವಿಸುತ್ತಿದ್ದೆವು. ಮಕ್ಕಳಿಗಾಗಿ ಮೊಟ್ಟೆಗಳನ್ನು ಖರೀದಿಸಲು ಸಾಧ್ಯವಾಗುತ್ತಿತ್ತು. ಈಗ ಆ ವಸ್ತುಗಳನ್ನೆಲ್ಲಾ ತ್ಯಜಿಸಬೇಕಾಗಿದೆ’ ಎಂದು ಅವರು ಹೇಳಿದ್ದಾರೆ.
ಅವರ ಕುಟುಂಬ ಈಗ ಅಕ್ಕಿ ಮತ್ತು ಬೇಳೆಕಾಳುಗಳನ್ನು ಅವಲಂಬಿಸಿದೆ. ಸ್ವಲ್ಪ ಪ್ರಮಾಣದ ಬ್ರೆಡ್ ಖರೀದಿಸಲು ಮಾತ್ರ ಸಾಧ್ಯವಾಗುತ್ತಿದೆ. ಕೆಲವೊಮ್ಮೆ ಬೆಳಗಿನ ಉಪಾಹಾರ ಅಥವಾ ರಾತ್ರಿಯ ಊಟವನ್ನು ಬಿಟ್ಟು, ಮಧ್ಯಾಹ್ನದ ಊಟವನ್ನೇ ದಿನದ ಮುಖ್ಯ ಊಟವನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚುವರಿ ಆಹಾರ ಖರೀದಿಸಿ ಸಂಗ್ರಹಿಸಿಡಲು ಸಾಧ್ಯವಾಗದ ಅನೇಕ ಕುಟುಂಬಗಳಲ್ಲಿ ಅಥಲ್ಲಾ ಅವರ ಕುಟುಂಬವೂ ಒಂದಾಗಿದೆ.
‘ನಮಗೆ ಯಾವುದೇ ಆದಾಯವಿಲ್ಲದ ಕಾರಣ ಆಹಾರ ಸಂಗ್ರಹಿಸಿಡಲು ಸಾಧ್ಯವಾಗುತ್ತಿಲ್ಲ. ಗಡಿಗಳು 10ರಿಂದ 15 ದಿನಗಳವರೆಗೆ ಮುಚ್ಚಲ್ಪಟ್ಟರೆ ಎಲ್ಲವೂ ವಿಪರೀತ ದುಬಾರಿಯಾಗುತ್ತವೆ. ಹಣವಿರುವವರು ಆಹಾರ ಸಂಗ್ರಹಿಸಿಡುತ್ತಾರೆ. ಆದರೆ ಹಣವಿಲ್ಲದವರು ನೋಡುತ್ತಾ ಕೂರಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ಸೌಜನ್ಯ: Aljazeera.com






