ಹಾರ್ಮುಝ್ ಮೂಲಕ ಹಡಗುಗಳ ಸಂಚಾರ ಆರಂಭ : ವಿಶ್ವಸಂಸ್ಥೆ ಏಜೆನ್ಸಿ ಮಾಹಿತಿ

Photo Credit : AP
ಲಂಡನ್, ಜೂ. 24 : ಸಂಘರ್ಷದ ಹಿನ್ನೆಲೆಯಲ್ಲಿ ಸಿಲುಕಿಕೊಂಡಿದ್ದ ಹಡಗುಗಳನ್ನು ಸ್ಥಳಾಂತರಿಸಲು ವಿಶ್ವಸಂಸ್ಥೆಯ ಹಡಗು ಯಾನ ಸಂಸ್ಥೆ ರೂಪಿಸಿರುವ ಹೊಸ ಯೋಜನೆಯಡಿ, ಹಡಗುಗಳು ಹಾರ್ಮುಝ್ ಜಲಸಂಧಿಯ ಮೂಲಕ ಸಂಚಾರ ಆರಂಭಿಸಿವೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹಲವು ತಿಂಗಳುಗಳೇ ಬೇಕಾಯಿತು. ಗಲ್ಫ್ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಸುಮಾರು 11,000 ನಾವಿಕರನ್ನು ಒಳಗೊಂಡ ನೂರಾರು ಹಡಗುಗಳು ಹಾರ್ಮುಝ್ ಮೂಲಕ ಸಂಚರಿಸಲು ಈ ಉಪಕ್ರಮವು ಸಹಾಯ ಮಾಡಲಿದೆ ಎಂದು ಅಂತರರಾಷ್ಟ್ರೀಯ ಕಡಲ ಸಂಸ್ಥೆ ((ಐಎಂಒ) ತಿಳಿಸಿದೆ. ಯೋಜನೆಯಡಿ ಹಡಗುಗಳು ಈಗಾಗಲೇ ಸಂಚರಿಸಲು ಪ್ರಾರಂಭಿಸಿವೆ ಎಂದು ಐಎಂಒ ವಕ್ತಾರರು ತಿಳಿಸಿದ್ದಾರೆ.
ರಾಯಿಟರ್ಸ್ ಸಂಸ್ಥೆಯು ಹಡಗುಗಳ ಚಲನವಲನದ ಆಧಾರದ ಮೇಲೆ ನಡೆಸಿದ ವಿಶ್ಲೇಷಣೆಯ ಪ್ರಕಾರ ಕನಿಷ್ಠ 35 ವಾಣಿಜ್ಯ ಹಡಗುಗಳು ಜಲಸಂಧಿಯ ಮೂಲಕ ಸಂಚರಿಸಲು ಸಿದ್ಧತೆ ನಡೆಸುತ್ತಿವೆ.
ಅಮೆರಿಕ ಮತ್ತು ಇರಾನ್ ಕದನ ವಿರಾಮದ ಚೌಕಟ್ಟನ್ನು ತಲುಪಿದ ನಂತರ ಈ ಯೋಜನೆ ಪ್ರಾರಂಭಿಸಲು ಸಾಧ್ಯವಾಯಿತು ಎಂದು ಐಎಂಒ ತಿಳಿಸಿದೆ. ಇದರ ಅಡಿಯಲ್ಲಿ ಹಡಗುಗಳು ಹೊರಹೋಗಲು ಎರಡು ಮಾರ್ಗಗಳನ್ನು ಬಳಸಬಹುದು - ಇರಾನ್ ಜಲಪ್ರದೇಶದ ಮೂಲಕ ಉತ್ತರದ ಮಾರ್ಗ ಮತ್ತು ಒಮನ್ /ಅಮೆರಿಕ ಸಮನ್ವಯದ ಜಲಪ್ರದೇಶದ ಮೂಲಕ ದಕ್ಷಿಣದ ಮಾರ್ಗ. ಹಡಗುಗಳು ಮುಂದೆ ಸಾಗುವ ಮುನ್ನ ಸೂಚನೆಗಳಿಗಾಗಿ ಕಾಯಬೇಕು' ಎಂದು ಐಎಂಒ ಬುಧವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.






