ಪೋಲೆಂಡ್ ನಲ್ಲಿ ಗುಂಡಿನ ದಾಳಿ; 6 ಮಂದಿ ಮೃತ್ಯು
ದಾಳಿಕೋರನ ಮನೆಯಲ್ಲಿ ಮತ್ತೆ ಮೂವರ ಮೃತದೇಹ ಪತ್ತೆ

Photo: x.com/GlobalOSINTHQ
ಕ್ರಾಕೋವ್: ಪೋಲೆಂಡ್ ನ ದಕ್ಷಿಣ ಭಾಗದ ಪ್ರಮುಖ ನಗರ ಕ್ರಾಕೋವ್ ನ ಐತಿಹಾಸಿಕ ಮುಖ್ಯ ಮಾರುಕಟ್ಟೆ ವೃತ್ತದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ದಾಳಿ ನಡೆಸಿದ 24 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದು, ಆತನ ಮನೆಯಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನ ಮೃತದೇಹಗಳು ಪತ್ತೆಯಾಗಿವೆ ಎಂದು ಪ್ರಧಾನಿ ಡೊನಾಲ್ಡ್ ಟಸ್ಕ್ ತಿಳಿಸಿದ್ದಾರೆ.
ಕ್ರಾಕೋವ್ ನಿಂದ ಉತ್ತರಕ್ಕೆ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಆಸ್ಟ್ರೋವಿಯೆಕ್ ಸ್ವಿಯೆಟೊಕ್ರ್ಜಿಸ್ಕಿ ಪ್ರದೇಶದಲ್ಲಿ ಆರೋಪಿಯ ಮನೆ ಇದೆ. ಮೃತರು ಆತನ ನಿಕಟ ಕುಟುಂಬ ಸದಸ್ಯರಾಗಿರುವ ಸಾಧ್ಯತೆಯಿದೆ ಎಂದು ಟಸ್ಕ್ ಹೇಳಿದ್ದಾರೆ.
ಆರೋಪಿಯು ತೀವ್ರ ಬಲಪಂಥೀಯ ಸಿದ್ಧಾಂತದಿಂದ ಪ್ರಭಾವಿತನಾಗಿರುವ ಶಂಕೆಯಿದೆ. ಈ ಆಯಾಮದಲ್ಲಿಯೂ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಮಾರ್ಸಿನ್ ಕಿಯರ್ವಿನ್ಸ್ಕಿ ತಿಳಿಸಿದ್ದಾರೆ.
ಪೋಲೆಂಡ್ ನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕ್ರಾಕೋವ್ ನ ಐತಿಹಾಸಿಕ ವೃತ್ತದಲ್ಲಿ ರಕ್ತದ ಕಲೆಗಳು ಮತ್ತು ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯಗಳು ದೇಶಾದ್ಯಂತ ಆಘಾತ ಮೂಡಿಸಿವೆ. ಪಶ್ಚಿಮ ಯುರೋಪಿನ ನೆರೆಯ ರಾಷ್ಟ್ರಗಳಲ್ಲಿ ಈ ಹಿಂದೆ ಇಂತಹ ದಾಳಿಗಳು ನಡೆದಿದ್ದರೂ, ತಮ್ಮ ದೇಶ ಹೆಚ್ಚು ಸುರಕ್ಷಿತವಾಗಿದೆ ಎಂಬ ಭಾವನೆ ಪೋಲೆಂಡ್ ನಲ್ಲಿ ದೀರ್ಘಕಾಲದಿಂದ ಇತ್ತು.
ಇತ್ತೀಚಿನ ಸಾಮೂಹಿಕ ಗುಂಡಿನ ದಾಳಿಯು ದೇಶದಲ್ಲಿ ಭದ್ರತೆಯ ಕುರಿತ ಆತಂಕವನ್ನು ಹೆಚ್ಚಿಸಿದೆ. ಅಕ್ಟೋಬರ್ ನಲ್ಲಿ ಶಾಲೆಗಳಲ್ಲಿ ನಡೆದಿದ್ದ ಸರಣಿ ಚಾಕು ದಾಳಿಗಳಿಂದಲೂ ಆತಂಕ ಉಂಟಾಗಿತ್ತು. ಆ ಘಟನೆಗಳಿಗೆ ಆನ್ಲೈನ್ ನಲ್ಲಿನ ಹಿಂಸಾತ್ಮಕ ಮತ್ತು ತೀವ್ರಗಾಮಿ ವಿಷಯಗಳು ಪ್ರೇರಣೆಯಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದರು.
ಮೃತರಲ್ಲಿ ನಾಲ್ವರು ಮಹಿಳೆಯರು
ಗುಂಡಿನ ದಾಳಿಯಲ್ಲಿ ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದ್ದಾರೆ. ಮೃತರಲ್ಲಿ ಒಬ್ಬರು ಬ್ರಿಟಿಷ್ ಪ್ರಜೆ ಎಂದು ಪೊಲೀಸರು ಗುರುತಿಸಿದ್ದಾರೆ. ಗಾಯಗೊಂಡ ಐವರು ವಿದೇಶಿ ಪ್ರಜೆಗಳು ಆಸ್ಟ್ರಿಯಾ, ಜರ್ಮನಿ, ಪೋರ್ಚುಗಲ್, ರಷ್ಯಾ ಮತ್ತು ಬ್ರಿಟನ್ ನವರು ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳೂ ಗಾಯಗೊಂಡಿದ್ದಾರೆ.
"ದಾಳಿಕೋರನು ತೀವ್ರ ಬಲಪಂಥೀಯ ಸಿದ್ಧಾಂತದಿಂದ ಪ್ರಭಾವಿತನಾಗಿದ್ದಾನೆ ಎಂಬುದಕ್ಕೆ ಎಲ್ಲ ಸಾಕ್ಷ್ಯಗಳು ಸೂಚಿಸುತ್ತಿವೆ. ಈ ಕುರಿತು ತನಿಖೆ ನಡೆಸಲಾಗುವುದು" ಎಂದು ಗೃಹ ಸಚಿವ ಮಾರ್ಸಿನ್ ಕಿಯರ್ವಿನ್ಸ್ಕಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ಪೊಲೀಸರು ಮತ್ತು ಆಂತರಿಕ ಭದ್ರತಾ ಸಂಸ್ಥೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿಕೋರನ ಕುಟುಂಬದ ಮನೆಯಲ್ಲಿ ಕೂಡ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಮನೆಯಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹ
ಆರೋಪಿಯ ಮನೆಯಲ್ಲಿ ಭದ್ರತಾ ಬೆದರಿಕೆ ಇರುವ ಸಾಧ್ಯತೆಯಿದ್ದ ಕಾರಣ, ಮನೆಯ ಒಳಭಾಗವನ್ನು ಪರಿಶೀಲಿಸಲು ಡ್ರೋನ್ ಬಳಸಲಾಗಿದೆ ಎಂದು ಪ್ರಧಾನಿ ಡೊನಾಲ್ಡ್ ಟಸ್ಕ್ ಹೇಳಿದ್ದಾರೆ. ಮನೆಯಲ್ಲಿ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳು ಇರಬಹುದು ಎಂಬ ಮಾಹಿತಿ ಲಭ್ಯವಾಗಿದೆ ಎಂದೂ ತಿಳಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಆರೋಪಿಯು ವಾಸಿಸುತ್ತಿದ್ದ ಕಟ್ಟಡದಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಕಟ್ಟಡದೊಳಗೆ ಪ್ರವೇಶಿಸಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೇವೆಗಳ ಸಮನ್ವಯ ಸಚಿವ ಟೊಮಾಸ್ಜ್ ಸಿಯೆಮೊನಿಯಾಕ್ ಅವರು ಪ್ರಧಾನಿ ಜತೆ ಮಾತನಾಡಿದ್ದು, ಪೋಲೆಂಡ್ ನ ಆಂತರಿಕ ಭದ್ರತಾ ಸಂಸ್ಥೆ (ABW) ಮತ್ತು ಮಿಲಿಟರಿ ಕೌಂಟರ್ ಇಂಟೆಲಿಜೆನ್ಸ್ ಸೇವೆ (SKW) ತನಿಖೆಗೆ ನೆರವು ನೀಡುತ್ತಿವೆ ಎಂದು ತಿಳಿಸಿದ್ದಾರೆ.
ಎಆರ್-15 ರೈಫಲ್ ಬಳಕೆ
ದಾಳಿಯ ವೇಳೆ ಆರೋಪಿಯು ಮಿಲಿಟರಿ ಶೈಲಿಯ ಉಡುಪು ಧರಿಸಿದ್ದ. ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಬಳಸಿದ್ದ ಆತನ ವಾಹನದಲ್ಲಿಯೂ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಪತ್ತೆಯಾಗಿವೆ ಎಂದು ಸ್ಥಳೀಯ ಪೊಲೀಸ್ ವಕ್ತಾರೆ ಕತಾರ್ಜಿನಾ ಸಿಸ್ಲೋ ತಿಳಿಸಿದ್ದಾರೆ.
ಆರೋಪಿಯು ಎಆರ್-15 (AR-15) ರೈಫಲ್ ಬಳಸಿದ್ದಾನೆ. ಆತನ ಬಳಿ ಬಂದೂಕು ಹೊಂದಲು ಪರವಾನಗಿಯೂ ಇತ್ತು ಎಂದು ಪೊಲೀಸ್ ವಕ್ತಾರ ಆಂಡ್ರೆಜ್ ಫಿಜೋಲೆಕ್ ಖಾಸಗಿ ಸುದ್ದಿವಾಹಿನಿ ಟಿವಿಎನ್ 24ಗೆ ತಿಳಿಸಿದ್ದಾರೆ.
ಆರೋಪಿ 24 ವರ್ಷದ ಪೋಲಿಷ್ ಪ್ರಜೆಯಾಗಿದ್ದಾನೆ. ಈ ಪ್ರಕರಣದಲ್ಲಿ ಆತನೇ ಏಕೈಕ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ. "ಘಟನೆಗೆ ಸಂಬಂಧಿಸಿದ ಏಕೈಕ ಶಂಕಿತ ವ್ಯಕ್ತಿ ಈಗ ಪೊಲೀಸ್ ವಶದಲ್ಲಿದ್ದಾನೆ" ಎಂದು ಪೊಲೀಸರು ಎಕ್ಸ್ ನಲ್ಲಿ ಪ್ರಕಟಿಸಿದ್ದಾರೆ. ಆದರೆ, ದಾಳಿಗೆ ನಿಖರ ಕಾರಣವೇನು ಎಂಬುದನ್ನು ಬಹಿರಂಗಪಡಿಸಿಲ್ಲ.
ಪೋಲೆಂಡ್ಯನ ಎರಡನೇ ಅತಿದೊಡ್ಡ ನಗರವಾದ ಕ್ರಾಕೋವ್ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ನಗರದ ಮುಖ್ಯ ಚೌಕದಲ್ಲಿ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ಜನರ ಮೇಲೆ ಮನಬಂದಂತೆ ಗುಂಡು ಹಾರಿಸುತ್ತಿದ್ದಾನೆ ಎಂಬ ಮಾಹಿತಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪೊಲೀಸರಿಗೆ ಲಭಿಸಿತ್ತು.
ಗುಂಡಿನ ಸದ್ದು ಕೇಳಿ ದಿಕ್ಕಾಪಾಲಾಗಿ ಓಡಿದ ಜನರು
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ, ವಿಡಿಯೊಗಳಲ್ಲಿ ಗುಂಡಿನ ಸದ್ದು ಮತ್ತು ಪೊಲೀಸ್ ಸೈರನ್ ಕೇಳುತ್ತಿದ್ದಂತೆ ಜನರು ಸ್ಥಳದಿಂದ ಓಡಿಹೋಗುತ್ತಿರುವುದು ಕಂಡುಬಂದಿದೆ. ಮತ್ತೊಂದು ವಿಡಿಯೊದಲ್ಲಿ ರಕ್ತಸಿಕ್ತ ರಸ್ತೆಯ ಮೇಲೆ ಇಬ್ಬರು ಬಿದ್ದಿದ್ದು, ಅಲ್ಲಿದ್ದವರು ಅವರಿಗೆ ಪುನಶ್ಚೇತನ ನೀಡಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ. ಮತ್ತೊಬ್ಬ ವ್ಯಕ್ತಿ ಹತ್ತಿರದಲ್ಲೇ ಅಲುಗಾಡದೆ ಬಿದ್ದಿರುವುದು ದೃಶ್ಯಗಳಲ್ಲಿ ದಾಖಲಾಗಿದೆ.
ದಾಳಿಯನ್ನು ಕಣ್ಣಾರೆ ಕಂಡ ಕಾನ್ರಾಡ್ ಎಂಬ ವ್ಯಕ್ತಿ ಸ್ಥಳೀಯ ಸುದ್ದಿ ಜಾಲತಾಣ ಇಂಟೆರಿಯಾಗೆ ಘಟನೆ ವಿವರಿಸಿದ್ದಾರೆ.
"ಚಾಲಕನ ಬದಿಯ ಕಿಟಕಿಯಿಂದ ಗುಂಡು ಹಾರಿಸುವುದನ್ನು ನೋಡಿದೆ. ಆ ಕಡೆಯಿಂದ ಹೊಗೆ ಬರುತ್ತಿತ್ತು. ತಕ್ಷಣ ಮುಖ್ಯ ಮಾರುಕಟ್ಟೆ ವೃತ್ತದಲ್ಲಿದ್ದ ಪೊಲೀಸ್ ಠಾಣೆಯತ್ತ ಓಡಿದೆ. ಅಲ್ಲಿಗೆ ತಲುಪಿದಾಗ ಒಳಗೆ ನೆಲದ ಮೇಲೆ ಅಡಗಿಕೊಂಡಿದ್ದ ಜನರು ತುಂಬಿದ್ದರು" ಎಂದು ಅವರು ತಿಳಿಸಿದ್ದಾರೆ.
ಜುಲೆಕ್ ಎಂಬ 67 ವರ್ಷದ ವ್ಯಕ್ತಿ ರಾಯಿಟರ್ಸ್ ಸುದ್ದಿಸಂಸ್ಥೆಗೆ ನೀಡಿದ ಹೇಳಿಕೆಯ ಪ್ರಕಾರ, ಇದ್ದಕ್ಕಿದ್ದಂತೆ ಕಪ್ಪು ಬಣ್ಣದ ಕಾರೊಂದು ಅಲ್ಲಿಗೆ ಬಂದಿದೆ. ಅದರಲ್ಲಿದ್ದ ಚಾಲಕ ಜನರ ಗುಂಪಿನತ್ತ ಗುಂಡು ಹಾರಿಸಿ ಬಳಿಕ ಕಾರಿನಲ್ಲಿ ಪರಾರಿಯಾಗಿದ್ದಾನೆ.
"ನಾವು ಇನ್ನೂ ಎರಡು ನಿಮಿಷ ಮುಂಚಿತವಾಗಿ ಅಲ್ಲಿಗೆ ಬಂದಿದ್ದರೆ ಬಹುಶಃ ನಮಗೂ ಗುಂಡು ತಗುಲುತ್ತಿತ್ತು" ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊಗಳಲ್ಲಿ ಪ್ರವಾಸಿಗರ ಆಕರ್ಷಣೆಯಾಗಿರುವ ಸಾಂಪ್ರದಾಯಿಕ ಕುದುರೆ ಗಾಡಿಗಳು ಸಂಚರಿಸುವ ಅಥವಾ ನಿಲ್ಲಿಸುವ ಮೇನ್ ಮಾರ್ಕೆಟ್ ಸ್ಕ್ವೇರ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿರುವುದು ಕಾಣಿಸುತ್ತದೆ. ಚೌಕದ ಸುತ್ತಲಿನ ರೆಸ್ಟೋರೆಂಟ್ ಗಳು ಮತ್ತು ಕೆಫೆಗಳ ಪೈಕಿ ಒಂದರಲ್ಲಿ ವ್ಯಕ್ತಿಯೊಬ್ಬರು ಪ್ರಾಣ ರಕ್ಷಣೆಗಾಗಿ ಅಡಗಿಕೊಂಡಿರುವ ದೃಶ್ಯವೂ ವಿಡಿಯೊದಲ್ಲಿದೆ.
ನ. 8, 9ರಂದು ರಾಷ್ಟ್ರೀಯ ಶೋಕಾಚರಣೆ
ಆರೋಪಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳ ಧೈರ್ಯವನ್ನು ಗೃಹ ಸಚಿವ ಮಾರ್ಸಿನ್ ಕಿಯರ್ವಿನ್ಸ್ಕಿ ಶ್ಲಾಘಿಸಿದ್ದಾರೆ.
"ಪೊಲೀಸರು ಸಂಭವಿಸಬಹುದಾಗಿದ್ದ ಮತ್ತಷ್ಟು ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ದಾಳಿಯ ಮಾಹಿತಿ ಲಭಿಸಿದ ಕೇವಲ ಮೂರು ನಿಮಿಷಗಳಲ್ಲಿಯೇ ಅವರು ಆರೋಪಿಯತ್ತ ಗುಂಡು ಹಾರಿಸಿ ಆತನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು" ಎಂದು ಹೇಳಿದ್ದಾರೆ.
ಅಧ್ಯಕ್ಷ ಕರೋಲ್ ನವ್ರೋಕಿ ಅವರ ವಕ್ತಾರರು ನವೆಂಬರ್ 8 ಮತ್ತು 9ರಂದು ದೇಶದಲ್ಲಿ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.
ಯುರೋಪಿನಾದ್ಯಂತ ಈ ದಾಳಿಗೆ ಆಘಾತ ವ್ಯಕ್ತವಾಗಿದ್ದು, ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗುಂಡಿನ ದಾಳಿಯನ್ನು 'ಆಘಾತಕಾರಿ' ಎಂದು ಹೇಳಿದ್ದಾರೆ. "ಉಕ್ರೇನ್ ಜನರ ಪರವಾಗಿ ಮತ್ತು ವೈಯಕ್ತಿಕವಾಗಿ ಸಂತ್ರಸ್ತರ ಕುಟುಂಬಗಳು ಹಾಗೂ ಅವರ ಆಪ್ತರಿಗೆ ಸಂತಾಪ ಸೂಚಿಸುತ್ತೇನೆ" ಎಂದು ಅವರು ಎಕ್ಸ್ನಲ್ಲಿ ಬರೆದಿದ್ದಾರೆ.
ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥೆ ಕಜಾ ಕಲ್ಲಾಸ್ ಕೂಡ ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. "ಇದು ಪೋಲೆಂಡ್ನ ಗಡಿಗಳನ್ನು ಮೀರಿ ಎಲ್ಲೆಡೆ ನೋವುಂಟುಮಾಡುವ ದುರಂತ" ಎಂದು ಅವರು ಹೇಳಿದ್ದಾರೆ.






