ಅಮೆರಿಕದ ಗೃಹಭದ್ರತಾ ಇಲಾಖೆಯ ‘ಮಿಸ್ಟರ್ ಸಿಂಗ್’ ಪೋಸ್ಟ್ ಬೆನ್ನಲ್ಲೇ ಸಿಖ್ ಚಾಲಕನಿಗೆ 17 ಬಾರಿ ಚಾಕು ಇರಿತ

Photo Credit: timesofindia
ಅಮೃತಸರ: ಅಮೆರಿಕದ ಗೃಹಭದ್ರತಾ ಇಲಾಖೆ (DHS) ‘ಮಿಸ್ಟರ್ ಸಿಂಗ್’ ಎಂದು ಉಲ್ಲೇಖಿಸಿ ವಲಸೆ ಜಾರಿ ಕುರಿತ ವಿವಾದಾತ್ಮಕ ಪೋಸ್ಟ್ ಪ್ರಕಟಿಸಿದ ನಾಲ್ಕೇ ದಿನಗಳ ಬಳಿಕ, ವ್ಯೋಮಿಂಗ್ನಲ್ಲಿ ಸಿಖ್ ಟ್ರಕ್ ಚಾಲಕ ಗುರ್ವಿಂದರ್ ಸಿಂಗ್ ಅವರ ಮೇಲೆ ಚಾಕುವಿನಿಂದ ದಾಳಿ ನಡೆದಿದೆ.
ಸೆಪ್ಟೆಂಬರ್ 13ರಂದು ಇಂಟರ್ ಸ್ಟೇಟ್ 80 ಹೆದ್ದಾರಿಯ ಬಿಟರ್ ಕ್ರೀಕ್ ರೆಸ್ಟ್ ಏರಿಯಾದಲ್ಲಿ ಈ ಘಟನೆ ನಡೆದಿದೆ. ಸಿಂಗ್ ಅವರ ಕುತ್ತಿಗೆ ಮತ್ತು ಎದೆ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಒಟ್ಟು 17 ಇರಿತದ ಗಾಯಗಳಾಗಿವೆ ಎಂದು ‘ಕೌಬಾಯ್ ಸ್ಟೇಟ್ ಡೇಲಿ’ ಉಲ್ಲೇಖಿಸಿರುವ ಆರೋಪಪಟ್ಟಿ ದಾಖಲೆಗಳು ತಿಳಿಸಿವೆ.
ದಾಳಿಯಲ್ಲಿ ಜನಾಂಗೀಯ ಅಥವಾ ಧಾರ್ಮಿಕ ದ್ವೇಷದ ಕಾರಣವಿದೆಯೇ ಎಂಬುದನ್ನು ತನಿಖೆ ನಡೆಸಬೇಕು ಎಂದು ಸಿಖ್ ಅಮೆರಿಕನ್ನರು ಅಮೆರಿಕದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಅಮೆರಿಕನ್ ಸಿಖ್ ಕೌನ್ಸಿಲ್ (ASC) ಕೂಡ ಆಗ್ರಹಿಸಿದೆ.
ರೆಸ್ಟ್ ಏರಿಯಾದಲ್ಲಿದ್ದ ಕುಟುಂಬವೊಂದಕ್ಕೆ ಕಿರುಚಾಟದ ಶಬ್ದ ಕೇಳಿದೆ. ಬಳಿಕ ದಾಳಿಕೋರ ಅಲ್ಲಿಂದ ಓಡಿಹೋಗುವುದನ್ನು ಕುಟುಂಬದವರು ನೋಡಿದ್ದಾರೆ. ಶಂಕಿತನ ಟ್ರಕ್ ಅನ್ನು ಅವರು ಹಿಂಬಾಲಿಸಿದ್ದಾರೆ. ವಾಹನವನ್ನು ಗುರುತಿಸಲು ನೆರವಾಗುವ ವಿವರಗಳನ್ನು ಛಾಯಾಚಿತ್ರ ತೆಗೆದು ತನಿಖಾಧಿಕಾರಿಗಳಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.
ಆರೋಪಿ ಆಂಡ್ರ್ಯೂ ಕ್ರಿಸ್ ಬ್ಜ್ಡಾಕ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಪ್ರಥಮ ಕೊಲೆಗೆ ಯತ್ನ ಆರೋಪ ಹೊರಿಸಲಾಗಿದೆ. ದಾಳಿಯ ಉದ್ದೇಶ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
DHS ಪೋಸ್ಟ್ ನಲ್ಲಿ ಏನಿತ್ತು?
ದಾಳಿಗೆ ನಾಲ್ಕು ದಿನಗಳ ಮುನ್ನ DHS ಒಂದು ಪೋಸ್ಟ್ ಪ್ರಕಟಿಸಿತ್ತು. ಅದರಲ್ಲಿ ಕಂದು ಚರ್ಮದ, ಗಡ್ಡಧಾರಿ ವ್ಯಕ್ತಿಯ ಕಾಲ್ಪನಿಕ AI-ರಚಿತ ಚಿತ್ರವನ್ನು ಬಳಸಲಾಗಿತ್ತು. ಆ ವ್ಯಕ್ತಿಯನ್ನು ‘ಮಿಸ್ಟರ್ ಸಿಂಗ್’ ಎಂದು ಕರೆಯಲಾಗಿತ್ತು.
“ಅಮೆರಿಕನ್ನರಿಗಾಗಿ ಅಮೆರಿಕ. ನಮ್ಮ ರಸ್ತೆಗಳಿಂದ ಹೊರಬನ್ನಿ; ನಿಮಗೆ ಹೇಗೆ ವಾಹನ ಚಲಾಯಿಸಬೇಕೆಂದು ತಿಳಿದಿಲ್ಲ, ಮಿಸ್ಟರ್ ಸಿಂಗ್” ಎಂಬ ಸಂದೇಶವನ್ನು ಪೋಸ್ಟ್ ನಲ್ಲಿ ನೀಡಲಾಗಿತ್ತು.
ಈ ಪೋಸ್ಟ್ಗೆ ಸಿಖ್ ಮತ್ತು ಭಾರತೀಯ-ಅಮೆರಿಕನ್ ಸಂಘಟನೆಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಬಳಿಕ DHS ಪೋಸ್ಟ್ ಅನ್ನು ತೆಗೆದುಹಾಕಿತ್ತು. ಸರ್ಕಾರದ ಪೋಸ್ಟ್ ಪ್ರಕಟವಾದ ನಾಲ್ಕೇ ದಿನಗಳಲ್ಲಿ ಹಿಂಸಾತ್ಮಕ ದಾಳಿ ನಡೆದಿರುವುದು ಸಿಖ್ ಮತ್ತು ದಕ್ಷಿಣ ಏಷ್ಯಾ ಮೂಲದ ಅಮೆರಿಕನ್ನರಲ್ಲಿ ಆತಂಕ ಹೆಚ್ಚಿಸಿದೆ ಎಂದು ASC ಹೇಳಿದೆ.
ಗುರ್ವಿಂದರ್ ಸಿಂಗ್ ಅವರನ್ನು ಅವರ ಜನಾಂಗ, ಧರ್ಮ ಅಥವಾ ಗುರುತಿನ ಕಾರಣದಿಂದ ಗುರಿಯಾಗಿಸಲಾಗಿತ್ತೇ ಎಂಬುದನ್ನು ತನಿಖಾಧಿಕಾರಿಗಳು ನಿರ್ದಿಷ್ಟವಾಗಿ ಪರಿಶೀಲಿಸಬೇಕು ಎಂದು ಕೌನ್ಸಿಲ್ ಒತ್ತಾಯಿಸಿದೆ.






