ಜಗತ್ತಿನಾದ್ಯಂತ 9 ರಾಷ್ಟ್ರಗಳಲ್ಲಿ ಒಟ್ಟು 12,241 ಅಣ್ವಸ್ತ್ರಗಳು: ಎಸ್ಐಪಿಆರ್ಐ ವರದಿ

PC : NDTV
ಸ್ಟಾಕ್ಹೋಮ್: ಜಗತ್ತಿನಾದ್ಯಂತ ಒಟ್ಟು 9 ದೇಶಗಳು ಸುಮಾರು 12,241 ಅಣ್ವಸ್ತ್ರಗಳನ್ನು ಹೊಂದಿವೆಯೆಂದು 'ದಿ ಸ್ಟಾಕ್ಹೋಮ್ ಇಂಟರ್ನ್ಯಾಶನಲ್ ಪೀಸ್' ಸಂಶೋಧನಾ ಸಂಸ್ಥೆ (ಎಸ್ಐಪಿಆರ್ಐ) ತನ್ನ 2025ರ ಸಾಲಿನ ವಾರ್ಷಿಕ ಹೊತ್ತಿಗೆಯಲ್ಲಿ ತಿಳಿಸಿದೆ.
ಇರಾನ್ನ ಅಣ್ವಸ್ತ್ರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆ ದೇಶದ ಮೇಲೆ ಇಸ್ರೇಲ್ ದಾಳಿ ನಡೆಸಿರುವ ಸಂದರ್ಭದಲ್ಲಿಯೇ ಈ ವರದಿ ಪ್ರಕಟವಾಗಿದೆ.
ಜಗತ್ತಿನಲ್ಲಿ ಅಣ್ವಸ್ತ್ರ ನಿಯಂತ್ರಣ ವ್ಯವಸ್ಥೆ ತೀವ್ರವಾಗಿ ದುರ್ಬಲಗೊಂಡಿರುವ ಸಮಯದಲ್ಲಿಯೇ ನೂತನ ಅಣ್ವಸ್ತ್ರ ಪೈಪೋಟಿಯು ಅಪಾಯಕಾರಿ ಮಟ್ಟವನ್ನು ತಲುಪಿದೆಯೆಂದು ಎಸ್ಐಪಿಆರ್ಐನ ವಾರ್ಷಿಕ ವರದಿ ತಿಳಿಸಿದೆ. 2025ನೇ ಇಸವಿಯ ವೇಳೆಗೆ ಒಟ್ಟು 9 ರಾಷ್ಟ್ರಗಳು ಅಣ್ವಸ್ತ್ರವನ್ನು ಹೊಂದಿರುವುದಾಗಿ ವರದಿಯು ಗಮನಸೆಳೆದಿದೆ.
‘‘2025ರ ಆರಂಭದಲ್ಲಿ 9 ದೇಶಗಳು ಒಟ್ಟಾಗಿ ಸುಮಾರು 12,241 ಅಣ್ವಸ್ತ್ರಗಳನ್ನು ಹೊಂದಿವೆ. ಅವುಗಳಲ್ಲಿ 9614 ಅಣ್ವಸ್ತ್ರಗಳು ಕಾರ್ಯಾಚರಣೆಗೆ ಲಭ್ಯವಿರುವ ಸಾಧ್ಯತೆಯನ್ನು ಹೊಂದಿವೆಯೆಂದು ವರದಿ ತಿಳಿಸಿದೆ.
ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿರುವ ದೇಶಗಳು
ಅಮೆರಿಕ: 5177, ರಶ್ಯ: 5459, ಚೀನಾ: 600, ಫ್ರಾನ್ಸ್: 290, ಬ್ರಿಟನ್: 225, ಭಾರತ:180, ಪಾಕಿಸ್ತಾನ: 170, ಇಸ್ರೇಲ್:90, ಉತ್ತರ ಕೊರಿಯ: 50.
ಈ ದೇಶಗಳು 2024ರಲ್ಲಿ ಅಣ್ವಸ್ತ್ರ ಆಧುನೀಕರಣ ಕಾರ್ಯಕ್ರಮವನ್ನು ತೀವ್ರವಾಗಿ ಮುಂದುವರಿಸಿವೆ ಹಾಗೂ ಈಗ ಇರುವ ಅಸ್ತ್ರಗಳನ್ನು ಮೇಲ್ದರ್ಜೆಗೇರಿಸಿವೆ ಹಾಗೂ ತಮ್ಮ ಅಣ್ವಸ್ತ್ರ ಬತ್ತಳಿಕೆಗೆ ನೂತನ ಆವೃತ್ತಿಗಳನ್ನು ಸೇರ್ಪಡೆಗೊಳಿಸಿವೆ.
ಈ ಪೈಕಿ 3912 ಸಿಡಿತಲೆಗಳನ್ನು ಕ್ಷಿಪಣಿಗಳು ಹಾಗೂ ವೈಮಾನಿಕದಳದಲ್ಲಿ ನಿಯೋಜಿಸಲಾಗಿದೆ ಹಾಗೂ ಉಳಿದವನ್ನು ಕೇಂದ್ರೀಯ ಸಂಗ್ರಹಾಗಾರಗಳಲ್ಲಿ ಇರಿಸಲಾಗಿದೆ. ಸುಮಾರು 2100 ನಿಯೋಜಿತ ಸಿಡಿತಲೆಗಳನ್ನು ಅತ್ಯಧಿಕ ಕಾರ್ಯಾಚರಣೆ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಇವುಗಳ ಪೈಕಿ ಅರ್ಧದಷ್ಟು ಪಾಲನ್ನು ರಶ್ಯ ಅಥವಾ ಅಮೆರಿಕ ಹೊಂದಿವೆ. ಚೀನಾ ಕೂಡಾ ಶಾಂತಿ ಕಾಲದಲ್ಲಿಯೂ ಕೆಲವು ಅಣ್ವಸ್ತ್ರ ಸಿಡಿತಲೆಗಳನ್ನು ಕ್ಷಿಪಣಿಗಳಲ್ಲಿ ನಿಯೋಜಿಸಿರುವ ಸಾಧ್ಯತೆಯಿದೆ.
ಆದಾಗ್ಯೂ ರಶ್ಯ ಹಾಗೂ ಅಮೆರಿಕ ದೇಶಗಳು ಹಳೆಯ ಸಿಡಿತಲೆಗಳನ್ನು ನಿಷ್ಕ್ರಿಯಗೊಳಿಸಿರುವುದರಿಂದ ಜಗತ್ತಿನಾದ್ಯಂತ ಒಟ್ಟು ಅಣ್ವಸ್ತ್ರಗಳ ಸಂಗ್ರಹದಲ್ಲಿ ಇಳಿಕೆಯುಂಟಾಗಿದೆ ಎಂದು ಎಸ್ಐಪಿಆರ್ಐ ವರದಿ ತಿಳಿಸಿದೆ.







