ಸೌದಿಯಲ್ಲಿ ಹಿಮಧಾರೆ | ದೇಶದ ವಿವಿಧೆಡೆ ಹಿಮಾವೃತಗೊಂಡ ಬೆಟ್ಟಪ್ರದೇಶಗಳು

Photo Credit : NDTV
ರಿಯಾದ್,ಡಿ.25: ಅತಿಯಾದ ತಾಪಮಾನ ಹಾಗೂ ವಿಶಾಲವಾದ ಮರುಭೂಮಿಗಳಿಗೆ ಹೆಸರಾದ ಸೌದಿ ಆರೇಬಿಯವು ಪ್ರಸಕ್ತ ಚಳಿಗಾಲದಲ್ಲಿ ದೇಶಧ ವಿವಿದ ಭಾಗಗಳಲ್ಲಿ ಹಿಮಧಾರೆ, ಅಧಿಕ ಮಳೆ ಹಾಗೂ ಉಷ್ಣಾಂಶ ಇಳಿಕೆಗೆ ಸಾಕ್ಷಿಯಾಗಿದೆ.
ಅಚ್ಚರಿಯೆಂಬಂತೆ ಸೋಮವಾರ ಉತ್ತರ ಸೌದಿ ಆರೇಬಿಯದ ತಬೂಕ್ ಪ್ರಾಂತದಲ್ಲಿ ಪರ್ವತ ಶ್ರೇಣಿಗಳಲ್ಲಿ ಹಿಮಸುರಿದಿದೆ. ಸಾಗರಮಟ್ಟದಿಂದ 2600 ಮೀಟರ್ ಎತ್ತರದಲ್ಲಿರುವ ಜೆಬೆಲ್ ಅಲ್ಲಾವಝ್ ಪ್ರದೇಶದಲ್ಲಿರುವ ಎತ್ತರಪ್ರದೇಶವಾದ ಟ್ರೊಜೆನಾವನ್ನು ಹಿಮ ಆವರಿಸಿದ್ದು, ಜೊತೆಗೆ ಲಘುವಾದ ಮಳೆ ಸುರಿದಿದೆ. ಹಾಯಿಲ್ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಹಿಮಸುರಿದಿರುವುದಾಗಿ ವರದಿಯಾಗಿದೆ.
ಸೋಮವಾರ ಮುಂಜಾನೆಯ ತಾಸುಗಳಲ್ಲಿ ಕೆಲವೆಡೆ ತಾಪಮಾನವು ಶೂನ್ಯ ಸೆಂಟಿಗ್ರೇಡ್ ಗೆ ಇಳಿದಿದ್ದುದು, ಎತ್ತರದ ಪ್ರದೇಶಗಳಲ್ಲಿ ಹಿಮಹೆಪ್ಪುಗಟ್ಟುವುದಕ್ಕೆ ಅನುಕೂಲಕರ ವಾತಾವರಣವನ್ನು ನಿರ್ಮಿಸಿತ್ತೆಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಚಳಿಗಾಲದಲ್ಲಿ ಸೌದಿಯಲ್ಲಿ ಹಿಮಧಾರೆಯಾಗಿರುವ ಜೊತೆಗೆ ಯುಎಇನಲ್ಲಿ ಅನಿರೀಕ್ಷಿತ ಮಳೆ, ದಕ್ಷಿಣ ಏಶ್ಯದ ದಾಖಲೆಯ ಉಷ್ಣಮಾರುತದ ಹಾವಳಿ, ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ದಿಢೀರ್ ಪ್ರವಾಹ, ಯುರೋಪ್ ಹಾಗೂ ಉತ್ತರ ಆಫ್ರಿಕದ ಕೆಲವು ಭಾಗಗಳಲ್ಲಿ ಅಸಹಜವಾಗಿ ಹಿಮಧಾರೆಯಾಗಿರುವುದು, ಹವಾಮಾನ ಬದಲಾವಣೆಯಿಂದಾಗಿ ಜಗತ್ತಿನಾದ್ಯಂತ ಹವಾಮಾನ ಅನಿಶ್ಚಿತತೆಯೆಡೆಗೆ ತಿರುಗಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.







