ಬೆನಿನ್ ನಲ್ಲಿ ಮಿಲಿಟರಿ ದಂಗೆ

ಬೆನಿನ್ ಅಧ್ಯಕ್ಷ ಪ್ಯಾಟ್ರಿಸ್ ತಲೋನ್ - Photo Credit: AP
ಪೋರ್ಟೊ-ನೊವೊ: ಪಶ್ಚಿಮ ಆಫ್ರಿಕಾದ ಬೆನಿನ್ ರಾಷ್ಟ್ರದಲ್ಲಿ ಮಿಲಿಟರಿ ದಂಗೆಯ ಬಳಿಕ ಸರಕಾರವನ್ನು ವಿಸರ್ಜಿಸಲಾಗಿದೆ ಎಂದು ರವಿವಾರ ಯೋಧರ ಗುಂಪೊಂದು ಸರಕಾರಿ ಸ್ವಾಮ್ಯದ ಟಿವಿ ವಾಹಿನಿಯ ಮೂಲಕ ಘೋಷಿಸಿದೆ.
ಅಧ್ಯಕ್ಷರನ್ನು ಪದಚ್ಯುತಗೊಳಿಸಲು ತಾವು ನಿರ್ಧರಿಸಿದ್ದೇವೆ. ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ವಿಸರ್ಜಿಸಿರುವುದಾಗಿ `ಮರು ಸ್ಥಾಪನೆಗಾಗಿ ಮಿಲಿಟರಿ ಸಮಿತಿ' ಎಂದು ತನ್ನನ್ನು ಕರೆಸಿಕೊಂಡ ಗುಂಪು ಘೋಷಿಸಿದೆ. ಲೆಫ್ಟಿನೆಂಟ್ ಕರ್ನಲ್ ಪಾಸ್ಕಲ್ ಟಿಗ್ರಿ ಮಿಲಿಟರಿ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿರುವುದಾಗಿ ಯೋಧರು ಹೇಳಿದ್ದಾರೆ.
2016ರಿಂದಲೂ ಅಧಿಕಾರದಲ್ಲಿರುವ ಅಧ್ಯಕ್ಷ ಪ್ಯಾಟ್ರಿಸ್ ತಲೋನ್ ಮುಂದಿನ ಎಪ್ರಿಲ್ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಬಳಿಕ ಕೆಳಗಿಳಿಯಬೇಕಿತ್ತು. ಚುನಾವಣೆಯಲ್ಲಿ ವಿರೋಧ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ರೆನಾಡ್ ಅಗ್ಬೊಜೊ ಅವರಿಗೆ ಸಾಕಷ್ಟು ಅನುಮೋದಕರು ಇಲ್ಲ ಎಂಬ ಕಾರಣಕ್ಕೆ ಚುನಾವಣಾ ಆಯೋಗ ಅವರ ಉಮೇದುವಾರಿಕೆಯನ್ನು ತಿರಸ್ಕರಿಸಿದ್ದರಿಂದ ತಲೋನ್ ಪಕ್ಷದ ಆಯ್ಕೆ, ಮಾಜಿ ವಿತ್ತಸಚಿವ ರೊಮುಲಾಡ್ ವಡಾಗ್ನಿ ಚುನಾವಣೆಯಲ್ಲಿ ಗೆಲ್ಲುವ ನೆಚ್ಚಿನವರಾಗಿದ್ದರು.
ಅಧ್ಯಕ್ಷರು ಸುರಕ್ಷಿತವಾಗಿದ್ದು ಸೇನೆ ಮರಳಿ ನಿಯಂತ್ರಣ ಪಡೆಯುತ್ತಿದೆ. ಸಣ್ಣ ಗುಂಪೊಂದು ಟಿವಿ ವಾಹಿನಿಯನ್ನು ವಶಕ್ಕೆ ಪಡೆದುಕೊಂಡಿದೆ ಅಷ್ಟೇ. ನಗರ ಮತ್ತು ರಾಷ್ಟ್ರ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಅಧ್ಯಕ್ಷರ ಕಚೇರಿಯನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ರಾಜಧಾನಿಯಲ್ಲಿರುವ ಅಧ್ಯಕ್ಷರ ಅಧಿಕೃತ ನಿವಾಸದ ಬಳಿ ಗುಂಡಿನ ಸದ್ದು ಕೇಳಿಸಿದೆ ಎಂದು ಫ್ರಾನ್ಸ್ ನ ರಾಯಭಾರಿ ಕಚೇರಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದು ಬೆನಿನ್ ನಲ್ಲಿರುವ ಎಲ್ಲಾ ಫ್ರೆಂಚ್ ಪ್ರಜೆಗಳೂ ಭದ್ರತೆಗಾಗಿ ಮನೆಯೊಳಗೇ ಇರುವಂತೆ ಸೂಚಿಸಿದೆ.
ದಂಗೆ ವಿಫಲವಾಗಿದೆ ಎಂದ ಸಚಿವ:
ಬೆನಿನ್ ನಲ್ಲಿ ಘೋಷಿಸಲಾದ ದಂಗೆಯನ್ನು ವಿಫಲಗೊಳಿಸಲಾಗಿದೆ ಎಂದು ಆಂತರಿಕ ಸಚಿವ ಅಲಾಸೆನ್ ಸೆಯಿದೊವ್ `ಫೇಸ್ಬುಕ್'ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಹೇಳಿದ್ದಾರೆ.
ಸೈನಿಕರ ಒಂದು ಸಣ್ಣ ಗುಂಪು ರಾಷ್ಟ್ರ ಮತ್ತು ಅದರ ಸಂಸ್ಥೆಗಳನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ರವಿವಾರ ಬೆಳಿಗ್ಗೆ ದಂಗೆಯನ್ನು ಪ್ರಾರಂಭಿಸಿತು. ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದ ಸಶಸ್ತ್ರ ಪಡೆಗಳು ಮತ್ತು ಅದರ ಮುಖ್ಯಸ್ಥರು ದೇಶಕ್ಕೆ ತಮ್ಮ ಬದ್ಧತೆಯನ್ನು ಎತ್ತಿಹಿಡಿದಿದ್ದಾರೆ' ಎಂದವರು ಪೋಸ್ಟ್ ಮಾಡಿದ್ದಾರೆ. ಎಲ್ಲವೂ ಚೆನ್ನಾಗಿದೆ. ಯಾವುದೇ ಸಮಸ್ಯೆಯಿಲ್ಲ ಎಂದು ಸರಕಾರದ ವಕ್ತಾರ ವಿಲ್ಫ್ರೆಡ್ ಹೌಂಗ್ಬೆಡ್ಜಿ ಹೇಳಿರುವುದಾಹಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಫ್ರಾನ್ಸ್ ನಿಂದ 1960ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಬೆನಿನ್ ಹಲವು ದಂಗೆಗಳಿಗೆ ಸಾಕ್ಷಿಯಾಗಿದೆ.







