ಸೊಮಾಲಿಯಾ: ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 10 ಮಂದಿ ಮೃತ್ಯು
ಸೇನಾ ನೇಮಕಾತಿ ಅಭಿಯಾನದ ಸಂದರ್ಭ ಸ್ಫೋಟ

PC : X \ @AJEnglish
ಮೊಗದಿಶು: ಸೊಮಾಲಿಯಾದ ರಾಜಧಾನಿ ಮೊಗದಿಶುವಿನಲ್ಲಿ ರವಿವಾರ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಮೊಗದಿಶು ನಗರದ ದಮಾನ್ಯೊ ಸೇನಾ ನೆಲೆಯಲ್ಲಿ ಸೇನಾ ನೇಮಕಾತಿ ಪ್ರಕ್ರಿಯೆಗೆ ನೋಂದಣಿ ಮಾಡಿಕೊಳ್ಳಲು ಯುವಜನತೆ ಸರದಿ ಸಾಲಿನಲ್ಲಿ ನಿಂತಿದ್ದಾಗ ಸಾಲಿನತ್ತ ನುಗ್ಗಿದ ಆತ್ಮಹತ್ಯಾ ಬಾಂಬರ್ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ
. ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದ ಸೇನಾ ನೆಲೆಯ ಮುಖ್ಯ ಕಟ್ಟಡದ ಬಳಿ ಕಾರಿನಲ್ಲಿ ಬಂದಿಳಿದ ವ್ಯಕ್ತಿಯೊಬ್ಬ ಸರತಿ ಸಾಲಿನತ್ತ ನುಗ್ಗಿ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ. ಸರತಿ ಸಾಲಿನಲ್ಲಿ ನೂರಕ್ಕೂ ಅಧಿಕ ಯುವಜನರು ನಿಂತಿದ್ದರು . 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಸಾವು-ನೋವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಮಿಲಿಟರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೇಳಿದ್ದಾರೆ. ದಾಳಿಯ ಹೊಣೆಯನ್ನು ಇದುವರೆಗೆ ಯಾರೂ ವಹಿಸಿಕೊಂಡಿಲ್ಲ ಎಂದು ರಾಯ್ಟರ್ಸ್ ವರದಿ ಮಾಡಿದೆ.





