ಸೊರೊಸ್ 10 ಬಿಲಿಯನ್ ಡಾಲರ್ ಹೂಡಿಕೆ ಪ್ರಸ್ತಾಪ | ‘ಭಾರತದ ಕಲ್ಯಾಣವೋ, ವಿದೇಶಿ ಕಾರ್ಯಸೂಚಿಯೋ?’: ಪಿತ್ರೋಡಾ ಹೇಳಿಕೆಗೆ ಬಿಜೆಪಿ ಕಿಡಿ
‘ಕಾಂಗ್ರೆಸ್ ಗೆ ದೇಶದ ಹಿತಾಸಕ್ತಿಗಿಂತ ವಿದೇಶಿ ಕಾರ್ಯಸೂಚಿಯೇ ಮುಖ್ಯವೇ?’

ಜಾರ್ಜ್ ಸೊರೊಸ್ | Photo Credit : AP
ಹೊಸದಿಲ್ಲಿ: ಅಮೆರಿಕದ ಉದ್ಯಮಿ ಜಾರ್ಜ್ ಸೊರೊಸ್ 10 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾದರೆ ಅದನ್ನು ಪರಿಗಣಿಸಬಹುದು ಎಂಬ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಸೊರೊಸ್ ಅವರ ಪ್ರಭಾವದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂಬ ಪಿತ್ರೋಡಾ ಅವರ ನಿಲುವನ್ನು ಪ್ರಶ್ನಿಸಿರುವ ಬಿಜೆಪಿ, ‘ಕಾಂಗ್ರೆಸ್ ಗೆ ಭಾರತದ ಕಲ್ಯಾಣ ಮುಖ್ಯವೋ ಅಥವಾ ವಿದೇಶಿ ಶಕ್ತಿಗಳ ಕಾರ್ಯಸೂಚಿಯೋ?’ ಎಂದು ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ರಾಹುಲ್ ಗಾಂಧಿ ಅವರ ಮಾರ್ಗದರ್ಶಕರೆಂದು ಗುರುತಿಸಿಕೊಂಡಿರುವ ಪಿತ್ರೋಡಾ, ಐಎಎನ್ಎಸ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ‘ಒಳ್ಳೆಯ ಕೆಲಸವೊಂದನ್ನು ಮಾಡಲು ಜಾರ್ಜ್ ಸೊರೊಸ್ 10 ಬಿಲಿಯನ್ ಡಾಲರ್ ಹೂಡಿಕೆ ತರುತ್ತಾರೆ ಎಂದಾದರೆ, ಅದನ್ನು ಪರಿಗಣಿಸಬಹುದು’ ಎಂದು ಹೇಳಿದ್ದಾರೆ.
ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಜಯ್ ಪಾಂಡಾ, ಸೊರೊಸ್ ಅವರ ಪ್ರಭಾವದಲ್ಲಿ ಆತಂಕಕಾರಿ ಅಂಶಗಳು ಕಾಣಿಸದಿರುವುದು ಕಾಂಗ್ರೆಸ್ಮನ ರಾಜಕೀಯ ನಿಲುವುಗಳ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ಹೇಳಿದ್ದಾರೆ.
‘ಭಾರತದ ರಾಜಕೀಯ ಮತ್ತು ನೀತಿಗಳನ್ನು ತಮ್ಮ ನಕಾರಾತ್ಮಕ ಕಾರ್ಯಸೂಚಿಗಳಿಗಾಗಿ ದುರ್ಬಲಗೊಳಿಸಲು ಪ್ರಯತ್ನಿಸುವ ಶಕ್ತಿಗಳೊಂದಿಗೆ ಕೈಜೋಡಿಸುವುದು ಸಾಮಾನ್ಯ ಸಂಗತಿಯಲ್ಲ. ಆಡಳಿತ ಬದಲಾವಣೆಯ ಚಳವಳಿಗಳೊಂದಿಗೆ ನಂಟು ಹೊಂದಿರುವ ವಿದೇಶಿ ಪ್ರಭಾವಗಳಿಗೆ ಭಾರತದ ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಿಗೊಡಲು ಸಾಧ್ಯವಿಲ್ಲ’ ಎಂದು ಪಾಂಡಾ ಹೇಳಿದ್ದಾರೆ.
‘ಖಾಸಗಿ ಸಭೆಗಳಲ್ಲಿ ಏನು ಚರ್ಚೆ?’
ಬಿಜೆಪಿ ವಕ್ತಾರ ರೋಹನ್ ಗುಪ್ತಾ ಕೂಡ ಪಿತ್ರೋಡಾ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಸೊರೊಸ್ ಅವರಿಂದ 10 ಬಿಲಿಯನ್ ಡಾಲರ್ ಹೂಡಿಕೆಯನ್ನು ಪರಿಗಣಿಸುವ ಕುರಿತು ಪಿತ್ರೋಡಾ ನೀಡಿರುವ ಹೇಳಿಕೆ ಕಾಂಗ್ರೆಸ್ ನ ಉದ್ದೇಶಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದಾರೆ.
‘ಕಾಂಗ್ರೆಸ್ ಪಕ್ಷದ ಆದ್ಯತೆ ಭಾರತದ ಕಲ್ಯಾಣವೇ ಅಥವಾ ವಿದೇಶಿ ಶಕ್ತಿಗಳ ಕಾರ್ಯಸೂಚಿಗಳಿಗೆ ಪ್ರಾಮುಖ್ಯತೆ ನೀಡುವುದೇ?’ ಎಂದು ಗುಪ್ತಾ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಾಯಕರು ಸಾರ್ವಜನಿಕ ವೇದಿಕೆಗಳಲ್ಲಿ ಇಂತಹ ಹೇಳಿಕೆಗಳನ್ನು ನೀಡುತ್ತಿರುವಾಗ, ದೇಶದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಕುರಿತು ಖಾಸಗಿ ಸಭೆಗಳಲ್ಲಿ ಯಾವ ರೀತಿಯ ಚರ್ಚೆಗಳು ನಡೆಯುತ್ತಿರಬಹುದು ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ.






