ಇರಾನ್ ಅನ್ನು ಮತ್ತೊಂದು ವೆನೆಜುವೆಲಾವನ್ನಾಗಿ ಮಾಡಲು ಅಮೆರಿಕ ಬಯಸಿತ್ತು: ಮಸೂದ್ ಪೆಝೆಶ್ಕಿಯನ್

ಮಸೂದ್ ಪೆಝೆಶ್ಕಿಯನ್ | Photo Credit : PTI
ವಾಶಿಂಗ್ಟನ್: ಅಮೆರಿಕದೊಂದಿಗಿನ ಪ್ರಸ್ತುತ ಸಂಘರ್ಷದ ನಡುವೆಯೂ ಇರಾನ್ ಜನರು ತೋರಿದ ಸ್ಥಿರತೆಯನ್ನು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯನ್ ಶ್ಲಾಘಿಸಿದ್ದಾರೆ. ಇರಾನ್ ಸಹ ವೆನೆಜುವೆಲಾದಂತಹ ಪರಿಸ್ಥಿತಿಯನ್ನು ಎದುರಿಸಬಹುದು ಎಂಬ ನಿರೀಕ್ಷೆಗಳ ನಡುವೆಯೂ ಟೆಹರಾನ್ ಧೈರ್ಯವಾಗಿ ದೃಢವಾಗಿ ನಿಂತಿದೆ ಎಂದು ಅವರು ಹೇಳಿದ್ದಾರೆ.
`ಅವರು (ಅಮೆರಿಕ) ಇರಾನ್ ಅನ್ನು ಮತ್ತೊಂದು ವೆನೆಜುವೆಲಾವನ್ನಾಗಿ ಮಾಡಲು ಬಯಸಿದ್ದರು. ಆದರೆ ಅದಕ್ಕೆ ಬದಲಾಗಿ, ಇರಾನ್ ತನ್ನ ಪ್ರತಿರೋಧ, ಒಗ್ಗಟ್ಟು ಮತ್ತು ಐಕ್ಯತೆಯಿಂದ ಜಗತ್ತನ್ನೇ ವಿಸ್ಮಯಗೊಳಿಸಿದ ಒಂದು ಮಹಾನ್ ಶಕ್ತಿಯಾಗಿ ಹೊರಹೊಮ್ಮಿದೆ. ನಮ್ಮ ಜನಸಮುದಾಯವು ಅತ್ಯಂತ ಅದ್ಭುತವಾದ ಸಾಧನೆ ಮಾಡಿದೆ' ಎಂದು ಅಧ್ಯಕ್ಷ ಪೆಝೆಶ್ಕಿಯನ್ರನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ `ಪ್ರೆಸ್ ಟಿವಿ' ವರದಿ ಮಾಡಿದೆ.
ಅಮೆರಿಕ-ಇಸ್ರೇಲ್ ಯುದ್ಧದ ಸಮಯದಲ್ಲಿ ಒಟ್ಟಾಗಿ ನಿಂತಂತೆ ಶತ್ರುಗಳ ಸಂಪೂರ್ಣ ಆರ್ಥಿಕ ಯುದ್ಧದ ವಿರುದ್ಧ ನಾವು ಈಗಲೂ ಒಂದಾಗಿ ನಿಲ್ಲಬೇಕು ಎಂದವರು ಜನರಿಗೆ ಕರೆ ನೀಡಿದ್ದಾರೆ.
ಅಮೆರಿಕದೊಂದಿಗಿನ ತಿಳುವಳಿಕಾ ಪತ್ರವನ್ನು (ಎಂಯು) ಸಮರ್ಥಿಸಿಕೊಂಡ ಪೆಝೆಶ್ಕಿಯನ್, ಇದು ಈ ನಿಂತುಹೋಗಿರುವ ಸಂಘರ್ಷದಿಂದ ಹೊರಬರಲು ಇರುವ ಅತ್ಯುತ್ತಮ ಮಾರ್ಗವಾಗಿದೆ, ಇದು ಇರಾನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಪೂರಕವಾಗಿದೆ ಮತ್ತು ಇದು ಯಾವುದೇ ರೀತಿಯ ಶರಣಾಗತಿಯಲ್ಲ. ಇರಾನ್ ಮಾತುಕತೆ ಮತ್ತು ತರ್ಕಬದ್ಧ ಚರ್ಚೆಯನ್ನು ಸದಾ ಸ್ವಾಗತಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.






