ಜಿ20 ಅಧ್ಯಕ್ಷತೆಯನ್ನು ಅಮೆರಿಕದ ಪ್ರತಿನಿಧಿಗೆ ಹಸ್ತಾಂತರಿಸುವುದಿಲ್ಲ: ದಕ್ಷಿಣ ಆಫ್ರಿಕಾ

PC : PTI \ AP
ಜೊಹಾನ್ಸ್ ಬರ್ಗ್, ನ.23: ಜಿ20 ಗುಂಪಿನ ಮುಂದಿನ ಅಧ್ಯಕ್ಷತೆಯನ್ನು ಅಮೆರಿಕ ರಾಯಭಾರಿ ಕಚೇರಿಯ `ಕಿರಿಯ ಅಧಿಕಾರಿಗೆ' ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ ಹಸ್ತಾಂತರಿಸುವುದಿಲ್ಲ ಎಂದು ಅಧ್ಯಕ್ಷರ ಕಚೇರಿ ರವಿವಾರ ಹೇಳಿದೆ.
ನವೆಂಬರ್ 22ರಂದು ಜೊಹಾನ್ಸ್ ಬರ್ಗ್ ನಲ್ಲಿ ಆರಂಭಗೊಂಡ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದರು ಮತ್ತು ದಕ್ಷಿಣ ಆಫ್ರಿಕಾದಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯ ಅಧಿಕಾರಿ ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದಿದ್ದರು.
`ಅಧ್ಯಕ್ಷರು ಜಿ20 ಅಧ್ಯಕ್ಷತೆಯನ್ನು ರಾಯಭಾರಿ ಕಚೇರಿಯ ಅಧಿಕಾರಿಗೆ ಹಸ್ತಾಂತರಿಸುವುದಿಲ್ಲ. ಅಮೆರಿಕವು ಜಿ20ರ ಸದಸ್ಯನಾಗಿದೆ ಮತ್ತು ಅವರು ದೇಶವನ್ನು ಪ್ರತಿನಿಧಿಸಲು ಅಧ್ಯಕ್ಷರು ನೇಮಿಸಿದ ವಿಶೇಷ ಪ್ರತಿನಿಧಿ ಅಥವಾ ಸಚಿವರಂತಹ ಉನ್ನತ ಮಟ್ಟದ ಅಧಿಕಾರಿಯನ್ನು ಕಳುಹಿಸಬೇಕಿತ್ತು. ಇಲ್ಲದಿದ್ದರೆ ಸರ್ಕಾರಿ ಕಚೇರಿಯಲ್ಲಿ ಸಮಾನ ಶ್ರೇಣಿಯ ಅಧಿಕಾರಿಗಳ ನಡುವೆ ಅಧಿಕಾರ ಹಸ್ತಾಂತರ ನಡೆಯುತ್ತದೆ' ಎಂದು ದಕ್ಷಿಣ ಆಫ್ರಿಕಾದ ವಿದೇಶಾಂಗ ಸಚಿವ ರೊನಾಲ್ಡ್ ಲಮೋಲಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಅಮೆರಿಕ 2026ರಲ್ಲಿ ಜಿ20ರ ಅಧ್ಯಕ್ಷತೆ ವಹಿಸಲಿದೆ. ತನ್ನ ಅನುಪಸ್ಥಿತಿಯಲ್ಲಿ ಜೊಹಾನ್ಸ್ ಬರ್ಗ್ನಲ್ಲಿ ನಡೆಯುವ ಶೃಂಗಸಭೆಯಲ್ಲಿ ಯಾವುದೇ ಜಂಟಿ ಘೋಷಣೆ ಅಂಗೀಕರಿಸುವುದಕ್ಕೆ ತನ್ನ ಆಕ್ಷೇಪವಿದೆ ಎಂದು ಅಮೆರಿಕ ಹೇಳಿತ್ತು. ಅಮೆರಿಕದ ವಿರೋಧದ ಹೊರತಾಗಿಯೂ ಜಿ20 ಗುಂಪಿನ ಜಾಗತಿಕ ನಾಯಕರು ಜಿ20 ಶೃಂಗಸಭೆಯ ಪ್ರಾರಂಭದಲ್ಲಿ ಘೋಷಣೆಯನ್ನು ಅಂಗೀಕರಿಸಿದ್ದು ಒಂದು ದೇಶದಿಂದ ನಮ್ಮನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷರ ವಕ್ತಾರ ವಿನ್ಸೆಂಟ್ ಮಗ್ವೆನ್ಯಾ ಹೇಳಿದ್ದಾರೆ.
ಜಿ20 ಶೃಂಗಸಭೆಯ ಘೋಷಣೆ `. ಸುಡಾನ್, ಕಾಂಗೋ, ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶ ಮತ್ತು ಉಕ್ರೇನ್ನಲ್ಲಿ ನ್ಯಾಯಯುತ, ಸಮಗ್ರ ಮತ್ತು ಶಾಶ್ವತ ಶಾಂತಿಗಾಗಿ ಕೆಲಸ ಮಾಡುವುದಾಗಿ' ಪ್ರತಿಜ್ಞೆ ಮಾಡಿದೆ.







