South Africa| ಜೊಹಾನ್ಸ್ಬರ್ಗ್ನಲ್ಲಿ ಬಂದೂಕುಧಾರಿಗಳಿಂದ ಗುಂಡಿನ ದಾಳಿ: 12ಕ್ಕೂ ಹೆಚ್ಚು ಮಂದಿ ಮೃತ್ಯು; 9 ಮಂದಿಗೆ ಗಾಯ

Photo Credit : AP
ಜೊಹಾನ್ಸ್ಬರ್ಗ್: ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 12 ಮಂದಿ ಮೃತಪಟ್ಟು, ಒಂಬತ್ತು ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಆಫ್ರಿಕಾದ ಪೂರ್ವ ಜೊಹಾನ್ಸ್ಬರ್ಗ್ನ ಕ್ಲೀವ್ಲ್ಯಾಂಡ್ನಲ್ಲಿ ನಡೆದಿದೆ.
ಜಂಪರ್ಸ್ ಅನಧಿಕೃತ ವಸಾಹತಿನ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸುತ್ತಿದ್ದಾರೆ ಎಂಬ ಮಾಹಿತಿಯನ್ನು ಮಂಗಳವಾರ ರಾತ್ರಿ ಸುಮಾರು 11.10 ಗಂಟೆಗೆ ಪೊಲೀಸರು ಸ್ವೀಕರಿಸಿದ್ದಾರೆ. ಸ್ಥಳಕ್ಕೆ ತೆರಳಿದಾಗ, ಆ ಪ್ರದೇಶದಲ್ಲಿ ಹಲವರು ಮೃತಪಟ್ಟಿರುವುದು ಪೊಲೀಸರಿಗೆ ಕಂಡು ಬಂದಿದೆ.
ಈ ಘಟನೆಯಲ್ಲಿ ಎಂಟು ಮಂದಿ ಪುರುಷರು ಹಾಗೂ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.
10ಕ್ಕೂ ಹೆಚ್ಚು ಮಂದಿ ಶಂಕಿತ ಆರೋಪಿಗಳನ್ನು ಟೊಯೋಟಾ ಕ್ವಾಂಟಂ ವಾಹನದಲ್ಲಿ ವಸಾಹತಿನ ಬಳಿ ಬಿಟ್ಟು ಹೋಗಲಾಗಿದೆ. ಎರಡು ಪ್ರವೇಶ ದ್ವಾರಗಳ ಮೂಲಕ ವಸಾಹತಿನೊಳಗೆ ನುಗ್ಗಿರುವ ದಾಳಿಕೋರರು, ಅಲ್ಲಿನ ನಿವಾಸಿಗಳ ಮೇಲೆ ಗುಂಡಿನ ಮಳೆಗೆರೆದಿದ್ದಾರೆ. ಬಳಿಕ ಅದೇ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಪೊಲೀಸರು, "ಸುಮಾರು 10ಕ್ಕೂ ಹೆಚ್ಚು ಮಂದಿ ಶಂಕಿತ ಆರೋಪಿಗಳನ್ನು ಕ್ಲೀವ್ ಲ್ಯಾಂಡ್ನಲ್ಲಿರುವ ಪೆಟ್ರೋಲ್ ಪಂಪ್ ಒಂದರ ಬಳಿ ಟೊಯೋಟಾ ಕ್ವಾಂಟಂ ವಾಹನದಲ್ಲಿ ಬಿಟ್ಟು ಹೋಗಲಾಗಿದೆ ಎಂದು ಆರೋಪಿಸಲಾಗಿದೆ" ಎಂದು ಹೇಳಿದ್ದಾರೆ.
ಈ ಘಟನೆಯ ಹಿಂದಿನ ಕಾರಣ ಇದುವರೆಗೂ ತಿಳಿದು ಬಂದಿಲ್ಲ. ಈ ಸಂಬಂಧ ಈವರೆಗೆ ಯಾರನ್ನೂ ಬಂಧಿಸಿಲ್ಲ. ಆರೋಪಿಗಳ ಪತ್ತೆಗಾಗಿ ಬಲೆ ಬೀಸಿರುವ ಪೊಲೀಸರು, ಆರೋಪಿಗಳ ಕುರಿತು ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.






