ಈ ವಿಜಯ ದಕ್ಷಿಣ ಆಫ್ರಿಕದ ಮುಂದಿನ ಯಶಸ್ಸಿಗೆ ನಾಂದಿಯಾಗಬೇಕು: ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ನಾಯಕ ಟೆಂಬಾ ಬವುಮ

ನಾಯಕ ಟೆಂಬಾ ಬವುಮ | PC : ICC
ಲಂಡನ್: ಮುಂದಿನ ದಿನಗಳಲ್ಲಿ ನನ್ನ ತಂಡದ ಯಶಸ್ಸಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ವಿಜಯವು ನಾಂದಿಯಾಗಬೇಕೆಂದು ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ನಾಯಕ ಟೆಂಬಾ ಬವುಮ ಬಯಸಿದ್ದಾರೆ.
ಈ ಹಿಂದಿನ 18 ಏಕದಿನ ಮತ್ತು ಟಿ20 ವಿಶ್ವಕಪ್ ಗಳಲ್ಲಿ ದಕ್ಷಿಣ ಆಫ್ರಿಕಕ್ಕೆ ಒಂದು ಬಾರಿ ಮಾತ್ರ ಪೈನಲ್ ತಲುಪಲು ಸಾಧ್ಯವಾಗಿದೆ. ಅದು ಕಳೆದ ವರ್ಷ ಬಾರ್ಬಡೋಸ್ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ಆಡಿದೆ. ಟ್ರೋಫಿ ಗೆಲ್ಲಲು ಅದಕ್ಕೆ ಕೊನೆಯ 30 ಎಸೆತಗಳಲ್ಲಿ 30 ರನ್ಗಳನ್ನು ಮಾಡಬೇಕಾಗಿತ್ತು ಮತ್ತು ಆರು ವಿಕೆಟ್ಗಳಿದ್ದವು. ಆದಾಗ್ಯೂ ಅದು ಭಾರತದ ವಿರುದ್ಧ 7 ರನ್ಗಳಿಂದ ಸೋತಿತು.
ಆದರೆ, ಲಾರ್ಡ್ಸ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಫೈನಲ್ನಲ್ಲಿ ಅಂಥ ಹೃದಯವಿದ್ರಾವಕ ಸಂದರ್ಭ ದಕ್ಷಿಣ ಆಫ್ರಿಕಕ್ಕೆ ಎದುರಾಗಲಿಲ್ಲ. ಏಡನ್ ಮರ್ಕ್ರಾಮ್ ದ್ವಿತೀಯ ಇನಿಂಗ್ಸ್ನಲ್ಲಿ 136 ರನ್ಗಳನ್ನು ಗಳಿಸಿದರು ಮತ್ತು ಬವುಮ 66 ರನ್ಗಳನ್ನು ಮಾಡಿದರು. ದಕ್ಷಿಣ ಆಫ್ರಿಕವು ಶನಿವಾರ 282 ರನ್ಗಳ ಗೆಲುವಿನ ಗುರಿಯನ್ನು ಬೆಂಬತ್ತಿತು ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯವನ್ನು ಐದು ವಿಕೆಟ್ಗಳಿಂದ ಸೋಲಿಸಿತು.
ನನ್ನ ತಂಡವು ದಕ್ಷಿಣ ಆಫ್ರಿಕದ ರಗ್ಬಿ ತಂಡ ಸ್ಪ್ರಿಂಗ್ ಬಾಕ್ಸ್ ನಿಂದ ಪ್ರೇರಣೆ ಪಡೆದುಕೊಂಡಿದೆ ಎಂದು ನಾಯಕ ಟೆಂಬಾ ಬವುಮ ಹೇಳಿದರು. ಸ್ಪ್ರಿಂಗ್ ಬಾಕ್ಸ್ ನಾಲ್ಕು ರಗ್ಬಿ ವಿಶ್ವಕಪ್ಗಳನ್ನು ಗೆದ್ದಿದೆ. ಅವುಗಳ ಪೈಕಿ ಎರಡು ತೀರಾ ಇತ್ತೀಚಿನವುಗಳು.
‘‘ಇದು ನನ್ನ ತಂಡ, ನನಗೆ ಮತ್ತು ನನ್ನ ದೇಶಕ್ಕೆ ವಿಶೇಷವಾಗಿದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಬವುಮ ಹೇಳಿದರು. ‘‘ನಾವು ಹೆಚ್ಚೆಚ್ಚು ಟೆಸ್ಟ್ ಕ್ರಿಕೆಟ್ ಆಡಲು ಬಯಸಿದ್ದೇವೆ. ನಾವು ದೊಡ್ಡ ದೇಶಗಳ ವಿರುದ್ಧ ಆಡಲು ಬಯಸುತ್ತೇವೆ. ಯಾಕೆಂದರೆ ಇದು ನಮ್ಮನ್ನು ಆಕರ್ಷಣೀಯವಾಗಿಸುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ಅದೇ ವೇಳೆ, ಸಣ್ಣ ದೇಶಗಳು ಎಂಬುದಾಗಿ ಕರೆಯಲ್ಪಡುವ ದೇಶಗಳ ವಿರುದ್ಧವೂ ಆಡಲು ಬಯಸುತ್ತೇವೆ’’ ಎಂದು ಬವುಮ ನುಡಿದರು.







