ದಕ್ಷಿಣ ಆಫ್ರಿಕಾದ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಝೋಲಾನಿ ಟೆಟೆ ಹತ್ಯೆ

ಜೊಹಾನ್ಸ್ಬರ್ಗ್, ಆ.22: ದಕ್ಷಿಣ ಆಫ್ರಿಕಾದ ಈಸ್ಟರ್ನ್ ಕೇಪ್ನಲ್ಲಿರುವ ತಮ್ಮ ನಿವಾಸದ ಹೊರಗೆ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಝೋಲಾನಿ ಟೆಟೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಎಂಬಂಟ್ಸೇನ್ನಲ್ಲಿ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 38 ವರ್ಷದ ಟೆಟೆ ಅವರ ಮೇಲೆ ದಾಳಿ ನಡೆದಿದ್ದು, ಅವರೊಂದಿಗೆ ಪ್ರಯಾಣಿಸುತ್ತಿದ್ದ 27 ವರ್ಷದ ಮಹಿಳೆಗೂ ಗುಂಡೇಟು ಬಿದ್ದು ತೀವ್ರ ಗಾಯಗೊಂಡಿದ್ದಾರೆ. `ಲಾಸ್ಟ್ ಬಾರ್ನ್' ಎಂದೇ ಪ್ರಸಿದ್ಧರಾಗಿದ್ದ ಟೆಟೆ, 2007 ರಿಂದ 2008 ರವರೆಗೆ ಡಬ್ಲ್ಯೂಬಿಎಫ್ ಫ್ಲೈವೇಟ್ ವಿಶ್ವ ಪ್ರಶಸ್ತಿಯನ್ನು ಹೊಂದಿದ್ದರು. ನಂತರ 2017 ರಲ್ಲಿ ಡಬ್ಲ್ಯೂಬಿಒ ಬ್ಯಾಂಟಮ್ವೇಟ್ ಕಿರೀಟವನ್ನು ಗೆದ್ದು 2019 ರವರೆಗೆ ಅದನ್ನು ಉಳಿಸಿಕೊಂಡರು. ಟೆಟೆ 2017 ರಲ್ಲಿ ದಕ್ಷಿಣ ಆಫ್ರಿಕಾದ ಸಹ-ಸ್ಪರ್ಧಿ ಸಿಬೊನಿಸೊ ಗೊನ್ಯಾ ಅವರನ್ನು ಕೇವಲ 11 ಸೆಕೆಂಡುಗಳಲ್ಲಿ ನಾಕೌಟ್ ಮಾಡುವ ಮೂಲಕ ವಿಶ್ವ ಪ್ರಶಸ್ತಿ ಪಂದ್ಯದಲ್ಲೇ ಅತಿ ವೇಗದ ನಾಕೌಟ್ ದಾಖಲೆಯನ್ನು ನಿರ್ಮಿಸಿದ್ದರು.
ಜುಲೈ 2022ರ ಪಂದ್ಯದ ನಂತರ ನಿಷೇಧಿತ ಮಾದಕ ವಸ್ತು ಸೇವನೆಯ ಕಾರಣಕ್ಕಾಗಿ ಅವರಿಗೆ 4 ವರ್ಷಗಳ ನಿಷೇಧ ಹೇರಲಾಗಿತ್ತು. ಈ ನಿಷೇಧವು ಜುಲೈ 29, 2026 ರಂದು ಮುಕ್ತಾಯಗೊಂಡ ಬಳಿಕ ಟೆಟೆ ಬಾಕ್ಸಿಂಗ್ ರಿಂಗ್ಗೆ ಮರಳಲು ಸಿದ್ಧತೆ ನಡೆಸುತ್ತಿದ್ದರು. ದಾಳಿಕೋರರು ಘಟನಾ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಸಚಿವ ಗೇಟನ್ ಮೆಕೆಂಜಿ ಬಾಕ್ಸರ್ಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಅವರ ಸಾವು ದೇಶಕ್ಕೆ ಆದ ದೊಡ್ಡ ನಷ್ಟ ಎಂದು ಬಣ್ಣಿಸಿದ್ದಾರೆ.






