ಜಿ20 ಘೋಷಣೆ ಬಹುಪಕ್ಷೀಯತೆಗೆ ಬದ್ಧತೆಯನ್ನು ಪ್ರತಿಬಿಂಬಿಸಿದೆ: ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ

ಸಿರಿಲ್ ರಮಫೋಸ | PC : AP \ PTI
ಜೊಹಾನ್ಸ್ ಬರ್ಗ್, ನ.23: ಜಿ20 ನಾಯಕರು ಒಮ್ಮತದಿಂದ ಅನುಮೋದಿಸಿದ ಶೃಂಗಸಭೆಯ ಘೋಷಣೆಯು `ಬಹುಪಕ್ಷೀಯ ಸಹಕಾರಕ್ಕೆ ನವೀಕೃತ ಬದ್ಧತೆಯನ್ನು ಪ್ರತಿಬಿಂಬಿಸಿದೆ ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ ರವಿವಾರ ಹೇಳಿದ್ದಾರೆ.
ಜೊಹಾನ್ಸ್ ಬರ್ಗ್ ನಲ್ಲಿ ನಡೆದ ಶೃಂಗಸಭೆಯನ್ನು ಬಹಿಷ್ಕರಿಸಿದ್ದ ಅಮೆರಿಕದ ತೀವ್ರ ಆಕ್ಷೇಪಣೆ ಮತ್ತು ವಿರೋಧದ ಹೊರತಾಗಿಯೂ ಹವಾಮಾನ ಬಿಕ್ಕಟ್ಟಿನಂತಹ ಜಾಗತಿಕ ಸವಾಲುಗಳನ್ನು ಪರಿಹರಿಸಲು ಕರೆ ನೀಡುವ ಘೋಷಣೆಯನ್ನು ಸಭೆ ಅನುಮೋದಿಸಿದೆ.
ಎಲ್ಲಾ ಮೂಲಗಳಿಂದ ಹವಾಮಾನ ನಿಧಿಗಳನ್ನು ವಿಸ್ತರಿಸುವ ಅಗತ್ಯವನ್ನು ಜಿ20 ಶೃಂಗಸಭೆ ಪರಿಗಣಿಸಿದೆ. ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸಲು ಜಿ20 ಧೈರ್ಯದಿಂದ ಕಾರ್ಯನಿರ್ವಹಿಸಬೇಕು ಎಂದು ರಮಫೋಸ ಪ್ರತಿಪಾದಿಸಿದ್ದಾರೆ.
► ಜಿ20 ಶೃಂಗಸಭೆಯಲ್ಲಿ ಒಮ್ಮತದಿಂದ ಅಂಗೀಕರಿಸಿದ ನಿರ್ಣಯದ ಪ್ರಮುಖ ಅಂಶಗಳು:
► ಯಾವುದೇ ರಾಷ್ಟ್ರದ ಪ್ರಾದೇಶಿಕ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಬೆದರಿಕೆ ಅಥವಾ ಬಲ ಪ್ರಯೋಗದ ಬಳಕೆಯಿಂದ ದೂರ ಇರಬೇಕು.
► ಆಕ್ರಮಿತ ಫೆಲೆಸ್ತೀನಿಯನ್ ಪ್ರಾಂತ, ಉಕ್ರೇನ್, ಸುಡಾನ್, ಕಾಂಗೋ ಗಣರಾಜ್ಯದಲ್ಲಿ `ನ್ಯಾಯಯುತ, ಸಮಗ್ರ ಮತ್ತು ಶಾಶ್ವತ ಶಾಂತಿ' ನೆಲೆಸಲು ಜಾಗತಿಕ ಸಮುದಾಯ ಪ್ರಯತ್ನಿಸಬೇಕು.
► ಭೌಗೋಳಿಕ, ರಾಜಕೀಯ ಉದ್ವಿಗ್ನತೆಗಳು, ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯೂಟಿಒ) ನಿಯಮಗಳಿಗೆ ವಿರುದ್ಧವಾದ ಏಕಪಕ್ಷೀಯ ವ್ಯಾಪಾರ ಕ್ರಮಗಳು, ಸಾಂಕ್ರಾಮಿಕ ರೋಗಗಳು ಅಥವಾ ನೈಸರ್ಗಿಕ ವಿಕೋಪಗಳು ನಿರ್ಣಾಯಕ, ವಿರಳ ಖನಿಜಗಳ ಜಾಗತಿಕ ಪೂರೈಕೆ ಸರಪಳಿಗೆ ಅಡ್ಡಿಯಾಗದಂತೆ ಸೂಕ್ತ ಕ್ರಮದ ಅಗತ್ಯವಿದೆ.
ವಿರಳ, ನಿರ್ಣಾಯಕ ಖನಿಜಗಳ ಪೂರೈಕೆಯಲ್ಲಿ ಚೀನಾದ ಪ್ರಾಬಲ್ಯವು ಜಾಗತಿಕ ಕೈಗಾರಿಕಾ ಕ್ಷೇತ್ರದಲ್ಲಿ ಕಳವಳಕ್ಕೆ ಕಾರಣವಾಗಿದೆ.
► ದೇಶದೊಳಗೆ ಮತ್ತು ದೇಶಗಳ ನಡುವೆ ಸಂಪತ್ತು ಮತ್ತು ಅಭಿವೃದ್ಧಿಯಲ್ಲಿನ ಅಸಮಾನತೆಯನ್ನು ಪರಿಹರಿಸುವ ಅಗತ್ಯವನ್ನು ಘೋಷಣೆ ಒತ್ತಿಹೇಳಿದೆ.







