ದಕ್ಷಿಣ ಅಮೆರಿಕ: ಹಿಮ ಬಿರುಗಾಳಿಗೆ 4 ಮಂದಿ ಬಲಿ, 2,200 ವಿಮಾನ ರದ್ದು

PC : NDTV
ವಾಷಿಂಗ್ಟನ್ : ಅಮೆರಿಕದ ದಕ್ಷಿಣ ಭಾಗವು ತೀವ್ರವಾದ ಚಳಿಗಾಲದ ಚಂಡಮಾರುತ ಮತ್ತು ಹಿಮಪಾತದಿಂದ ತತ್ತರಿಸಿದ್ದು ಕನಿಷ್ಟ 4 ಮಂದಿ ಸಾವನ್ನಪ್ಪಿದ್ದಾರತೆ. ಟೆಕ್ಸಾಸ್ನಲ್ಲಿ ಹೆದ್ದಾರಿಗಳು ಹಾಗೂ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದ್ದು ನೈಋತ್ಯ ಲೂಸಿಯಾನಾದಲ್ಲಿ ಮೊದಲ ಹಿಮಪಾತದ ಎಚ್ಚರಿಕೆಯನ್ನು ಜಾರಿಗೊಳಿಸಲಾಗಿದೆ.
ಹಿಮ ಬಿರುಗಾಳಿಗೆ ಇದುವರೆಗೆ 4 ಮಂದಿ ಮೃತಪಟ್ಟಿದ್ದು ಇದರಲ್ಲಿ ಇಬ್ಬರು ಜಾರ್ಜಿಯಾ ಮತ್ತು ಮಿಲ್ವಾಕಿಯಲ್ಲಿ ಲಘೂಷ್ಣತೆಯಿಂದ ಸಾವನ್ನಪ್ಪಿದ್ದಾರೆ. ಮತ್ತೊಂದು ಹಿಮ ಬಿರುಗಾಳಿ ನ್ಯೂಯಾರ್ಕ್ನ ಭಾಗಗಳಿಗೆ ಅಪ್ಪಳಿಸಿದ್ದು ಮನೆಗಳು, ರಸ್ತೆಗಳು 18 ಇಂಚುಗಳಷ್ಟು ಹಿಮದಿಂದ ಆವೃತಗೊಂಡಿದೆ. ಮಂಗಳವಾರ ದೇಶದಾದ್ಯಂತ 2,200ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು 3000ಕ್ಕೂ ಅಧಿಕ ವಿಮಾನಗಳು ವಿಳಂಬಗೊಂಡಿವೆ.
ಅಮೆರಿಕಾದ ಫ್ಲೋರಿಡಾ ರಾಜ್ಯದ ವಾಯವ್ಯ ಪ್ರದೇಶದಿಂದ ಪೂರ್ವ ಟೆಕ್ಸಾಸ್ವರೆಗಿನ ಪ್ರದೇಶದಲ್ಲಿ ಗಂಟೆಗೆ ಒಂದು ಇಂಚಿನಷ್ಟು ಹಿಮಪಾತವಾಗಲಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ಹೇಳಿದೆ. ಫ್ಲೋರಿಡಾದ ಪೆನ್ಸಾಕೋಲ ನಗರದಲ್ಲಿ 6.5 ಇಂಚುಗಳಷ್ಟು ಹಿಮಪಾತವಾಗಿದ್ದು ಇದು 1890ರ ಬಳಿಕದ ಹೊಸ ದಾಖಲೆಯಾಗಿದೆ. ನ್ಯೂ ಆರ್ಲಿಯನ್ಸ್ ಮತ್ತು ಲೂಸಿಯಾನಾ ನಗರಗಳಲ್ಲಿ 10 ಇಂಚಿಗೂ ಅಧಿಕ ಹಿಮಪಾತವಾಗಿದ್ದು ಇದು ಶತಮಾನದಲ್ಲೇ ಅತ್ಯಧಿಕವಾಗಿದೆ. ಅಮೆರಿಕದ ದಕ್ಷಿಣ ಭಾಗದಲ್ಲಿ ಮಂಗಳವಾರ 10.5 ಇಂಚಿನಷ್ಟು ಹಿಮಪಾತವಾಗಿದೆ. ಪಶ್ಚಿಮ ನ್ಯೂಯಾರ್ಕ್ನ ಹಲವು ಕೌಂಟಿಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿರುವುದಾಗಿ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಘೋಷಿಸಿದ್ದಾರೆ.







