ಅಮೆರಿಕ, ದಕ್ಷಿಣ ಕೊರಿಯಾದ ಜಂಟಿ ಸೇನಾ ಅಭ್ಯಾಸ ಕಡಿತಗೊಳಿಸಿದ ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಆ.17: ಇರಾನ್ ಅನ್ನು ಪರಮಾಣು ಮುಕ್ತಗೊಳಿಸುವ ಪ್ರಯತ್ನಕ್ಕೆ ನೆರವು ನೀಡಲು ದಕ್ಷಿಣ ಕೊರಿಯಾ ನಿರಾಕರಿಸಿದೆ ಎಂದು ಪ್ರತಿಪಾದಿಸಿರುವ ಅಮೆರಿಕದ ಅಧ್ಯಕ್ಷ ಡೆನಾಲ್ಡ್ ಟ್ರಂಪ್ ಅವರು ದ.ಕೊರಿಯಾದೊಂದಿಗೆ ಯೋಜಿಸಲಾಗಿದ್ದ ಜಂಟಿ ಸೇನಾ ಅಭ್ಯಾಸಗಳನ್ನು ಕಡಿತಗೊಳಿಸುವಂತೆ ರವಿವಾರ ಪೆಂಟಗನ್ಗೆ ಆದೇಶಿಸಿದ್ದಾರೆ.
ಈ ವಾರ ಪ್ರಾರಂಭವಾಗಲಿದ್ದ ಸೇನಾ ಅಭ್ಯಾಸಗಳು ವೆಚ್ಚದಾಯಕವಾಗಿರುವುದು ಮಾತ್ರವಲ್ಲದೆ, ಉತ್ತರ ಕೊರಿಯಾಗೆ ಸಂಪೂರ್ಣವಾಗಿ ಅನುಚಿತ ಮತ್ತು ಶತ್ರುತ್ವದ ಸಂಕೇತವನ್ನು ರವಾನಿಸುತ್ತವೆ. ತಾನು ಅಧಿಕಾರದಲ್ಲಿದ್ದಾಗ ಉ.ಕೊರಿಯಾ ಗೌರವಯುತವಾಗಿ ನಡೆದುಕೊಂಡಿದೆ. ಉ.ಕೊರಿಯಾದ ಅಧ್ಯಕ್ಷ ಕಿಮ್ ಜೊಂಗ್ ಉನ್ ಅವರೊಂದಿಗೆ ತನಗೆ ಉತ್ತಮ ಬಾಂಧವ್ಯವಿದೆ ಎಂದು ಟ್ರಂಪ್ ಹೇಳಿದ್ದಾರೆ.
ಆದರೆ ಈ ಅಭ್ಯಾಸಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಈಗ ತಡವಾಗಿರುವುದರಿಂದ, ಜಂಟಿ ಸೇನಾ ಅಭ್ಯಾಸಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಲು ನಾನು ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರಿಗೆ ನಿರ್ದೇಶಿಸಿದ್ದೇನೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಉತ್ತರ ಕೊರಿಯಾದ ಬೆದರಿಕೆಗಳ ವಿರುದ್ಧ ಸಿದ್ಧತೆಯನ್ನು ಹೆಚ್ಚಿಸಲು ದ.ಕೊರಿಯಾದ 18,000 ಸೈನಿಕರನ್ನು ಒಳಗೊಂಡ 11 ದಿನಗಳ ಸೇನಾ ಅಭ್ಯಾಸಗಳನ್ನು ವಿನ್ಯಾಸಗೊಳಿಸಲಾಗಿತ್ತು. ಈ ಸೇನಾ ಕವಾಯತುಗಳನ್ನು ಆಕ್ರಮಣಕಾರಿ ಯುದ್ಧದ ತಾಲೀಮು ಎಂದು ವರ್ಣಿಸಿದ್ದ ಉತ್ತರ ಕೊರಿಯ, ಅಮೆರಿಕ ಮತ್ತು ದ.ಕೊರಿಯಾ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಬೆದರಿಕೆ ಹಾಕಿತ್ತು.






