ಅಭ್ಯರ್ಥಿಯೊಬ್ಬನಿಂದ AI ಬಳಸಿ ಪರೀಕ್ಷೆಯಲ್ಲಿ ಅಕ್ರಮ: ಹೊಣೆ ಹೊತ್ತು ದಕ್ಷಿಣ ಕೊರಿಯಾದ ಶಿಕ್ಷಣ ಸಚಿವರಿಂದ ರಾಜೀನಾಮೆ

ಸಾಂದರ್ಭಿಕ ಚಿತ್ರ (Photo: PTI)
ಸಿಯೋಲ್: AI ಬಳಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಕರಣದ ಬೆನ್ನಲ್ಲೇ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾದ ಶಿಕ್ಷಣ ಸಚಿವ ಚೊಯ್ ಕ್ಯೊ-ಜಿನ್ ರಾಜೀನಾಮೆ ನೀಡಿದ್ದಾರೆ.
ಕಾಲೇಜು ಪ್ರವೇಶ ಪರೀಕ್ಷೆಯಲ್ಲಿ ಎಐ ಬಳಸಿ ಅಕ್ರಮ ಎಸಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಹಲವು ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಇದರಿಂದ ಪರೀಕ್ಷಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರಿಗೆ ಉಂಟಾದ ಗೊಂದಲದ ಹೊಣೆ ಹೊತ್ತು ಸಚಿವರು ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ. ರಾಷ್ಟ್ರಪತಿ ಲೀ ಜೇ ಮ್ಯುಂಗ್ ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ ಕೊರಿಯಾದಲ್ಲಿ ನ. 15ರಂದು ರಾಷ್ಟ್ರೀಯ ತೆರಿಗೆ ಲೆಕ್ಕಪರಿಶೋಧಕ ಅರ್ಹತಾ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ್ದ ಅಭ್ಯರ್ಥಿಯೊಬ್ಬರು AI ಬಳಸಿ ಅಕ್ರಮ ಎಸಗಿರುವುದಾಗಿ ಒಪ್ಪಿಕೊಂಡಿದ್ದರು. ಸಣ್ಣ ಕ್ಯಾಮೆರಾ ಹಾಗೂ ಸ್ಮಾರ್ಟ್ಫೋನ್ ಬಳಸಿ ಪರೀಕ್ಷೆಯ ಪ್ರಶ್ನೆಗಳನ್ನು ಚಿತ್ರಿಸಿಕೊಂಡು, AI ಮೂಲಕ ಉತ್ತರಗಳನ್ನು ಪಡೆದು ಬಹುತೇಕ ಪೂರ್ಣ ಅಂಕ ಗಳಿಸಿದ್ದಾಗಿ ಅವರು ಬಹಿರಂಗಪಡಿಸಿದ್ದರು. ಈ ಪ್ರಕರಣ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದರ ಬೆನ್ನಲ್ಲೇ ನ. 19ರಂದು ನಡೆದ ದೇಶದ ಪ್ರಮುಖ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ‘ಸುನ್ಯೂಂಗ್’ನಲ್ಲಿ ಅಕ್ರಮ ತಡೆಯಲು ಸರಕಾರ ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಸಾರ್ವಜನಿಕ ವೈ-ಫೈ ಸ್ಥಗಿತಗೊಳಿಸುವುದು, ವಿದ್ಯಾರ್ಥಿಗಳ ಉಡುಪುಗಳ ಬಟನ್ ಗಳಿಗೆ ಸ್ಟಿಕ್ಕರ್ ಅಂಟಿಸುವುದು, ಕನ್ನಡಕ ಹಾಗೂ ಬಟ್ಟೆಗಳನ್ನು ತಪಾಸಣೆ ನಡೆಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಆದರೆ, ಈ ಕ್ರಮಗಳನ್ನು ಮುಂಚಿತವಾಗಿ ಯೋಜಿಸದೆ ಪರೀಕ್ಷೆಗೆ ಕೆಲವೇ ದಿನಗಳಿರುವಾಗ ಜಾರಿಗೊಳಿಸಿದ್ದಕ್ಕೆ ಶಿಕ್ಷಣ ಸಚಿವಾಲಯದ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಪರೀಕ್ಷೆಯ ಸಿದ್ಧತೆಯಲ್ಲಿ ಉಂಟಾದ ಲೋಪಗಳಿಗೆ ಸಚಿವರು ಹೊಣೆ ಹೊತ್ತಿದ್ದಾರೆ.
ಪರೀಕ್ಷೆ ಮುಗಿದ ಬಳಿಕ ಹೇಳಿಕೆ ನೀಡಿರುವ ಚೊಯ್ ಕ್ಯೊ-ಜಿನ್, ಸಚಿವನಾಗಿ ಮುಂಚಿತವಾಗಿ ಸಮರ್ಪಕ ಸಿದ್ಧತೆ ಮಾಡಿಕೊಳ್ಳಲು ವಿಫಲವಾದ ಟೀಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪರೀಕ್ಷೆ ಮುಗಿದಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಪರೀಕ್ಷೆಯ ದಿನ ಎಲೆಕ್ಟ್ರಾನಿಕ್ ಸಾಧನಗಳಿಗೆ ಸಂಬಂಧಿಸಿದಂತೆ ಒಟ್ಟು 111 ಅಕ್ರಮ ಪ್ರಕರಣಗಳು ಪತ್ತೆಯಾಗಿದ್ದವು.






