ಸ್ಪೇಸ್ ಎಕ್ಸ್ ಗಗನಯಾನಿಗೆ ಆನಾರೋಗ್ಯ; ತುರ್ತು ಭೂಸ್ಪರ್ಶಕ್ಕೆ ಸಿದ್ಧತೆ

photo credit: timesofindia
ಬಾಹ್ಯಾಕಾಶ ಕೇಂದ್ರದ 25 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅವಧಿಗೆ ಮೊದಲೇ ಗಗನಯಾನಿಗಳನ್ನು ಮರಳಿ ಭೂಮಿಗೆ ಕರೆಸಿಕೊಳ್ಳಲಾಗುತ್ತಿದೆ.
ಸಿಬ್ಬಂದಿಯೊಬ್ಬರಿಗೆ ವೈದ್ಯಕೀಯ ಸಮಸ್ಯೆ ಕಾಣಿಸಿಕೊಂಡಿರುವ ಕಾರಣದಿಂದ ಸ್ಪೇಸ್ ಎಕ್ಸ್ ಕ್ರ್ಯೂ-11 ಮಿಷನ್ನ ನಾಲ್ವರು ಖಗೋಳಶಾಸ್ತ್ರಜ್ಞರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ (ಐಎಸ್ಎಸ್) ಅವಧಿಗೆ ಮೊದಲೇ ತುರ್ತಾಗಿ ಭೂಮಿಗೆ ಮರಳಿ ಕರೆತರಲಾಗುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.
ಬಾಹ್ಯಾಕಾಶ ಕೇಂದ್ರದ 25 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೀಗೆ ಅವಧಿಗೆ ಮೊದಲೇ ಗಗನಯಾನಿಗಳನ್ನು ಮರಳಿ ಭೂಮಿಗೆ ಕರೆಸಿಕೊಳ್ಳಲಾಗುತ್ತಿದೆ. ನಾಸಾದ ಖಗೋಳತಜ್ಞರಾದ ಮೈಕ್ ಫಿನ್ಕ್ ಮತ್ತು ಜೆನಾ ಕಾರ್ಡ್ಮ್ಯಾನ್, ಜಪಾನ್ನ ಜಾಕ್ಸಾದ ಸದಸ್ಯರಾದ ಕಿಮಿಯಾ ಯು, ರಷ್ಯಾದ ರೋಸ್ಕೊಸ್ಮೊಸ್ ಸದಸ್ಯರಾದ ಒಲೆಗ್ ಪ್ಲಟೊನೊವ್ ಅವರನ್ನು ತುರ್ತಾಗಿ ಮರಳಿ ಕರೆತರಲಾಗುತ್ತಿದೆ. ಇವರು 2025 ಆಗಸ್ಟ್ನಲ್ಲಿ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕಾಶಕ್ಕೆ ನೆಗೆದ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ತಲುಪಿದ್ದರು. 2026ರ ಮಾರ್ಚ್ನಲ್ಲಿ ಅವರ ಆರು ತಿಂಗಳ ಅಂತಾರಾಷ್ಟ್ರೀಯ ವಸತಿ ಕೊನೆಗೊಳ್ಳಬೇಕಿತ್ತು.
ಪ್ರಸ್ತುತ ವೈದ್ಯಕೀಯ ತುರ್ತು ಸೇವೆಯ ಅಗತ್ಯವಿರುವ ಸಿಬ್ಬಂದಿಯ ಆರೋಗ್ಯ ಸ್ಥಿರವಾಗಿದೆ. ಹೀಗಾಗಿ ತಕ್ಷಣವೇ ಭೂಮಿಗೆ ಮರಳುವ ಅಗತ್ಯವಿಲ್ಲದೆ ಇದ್ದರೂ, ಆರೋಗ್ಯದ ಪೂರ್ಣ ರೋಗಪರಿಶೀಲನೆಯನ್ನು ಮೈಕ್ರೋಗ್ರಾವಿಟಿಯಲ್ಲಿ (ಕಕ್ಷೆಯಲ್ಲಿರುವ ಬಾಹ್ಯಾಕಾಶ ನೌಕೆಯಂತಹ ಬಹಳ ದುರ್ಬಲ ಗುರುತ್ವಾಕರ್ಷಣೆ ಇರುವ ಪ್ರದೇಶ) ಮಾಡಲು ಸಾಧ್ಯವಿಲ್ಲದ ಕಾರಣ ಅವಧಿಗೆ ಮೊದಲೇ ಭೂಮಿಗೆ ಮರಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಜೊತೆಗೆ ನಾಸಾದ ಮುಂದಿನ ಕ್ರೂ 12 ಉಡಾವಣೆಗೆ ಸಿದ್ಧವಾಗುತ್ತಿರುವ ಕಾರಣದಿಂದ ಕ್ರೂ- 11 ಸೂಕ್ತ ಸಮಯದಲ್ಲಿ ಮರಳುತ್ತಿದೆ. ಕ್ರೂ 11ನ ನಾಲ್ವರು ಸಿಬ್ಬಂದಿ ಮರಳಿದರೆ ಫೆಬ್ರವರಿ ಮಧ್ಯಭಾಗದಲ್ಲಿ ಕ್ರೂ 12 ಸಿಬ್ಬಂದಿಗಳನ್ನು ಬಾಹ್ಯಾಕಾಶ ಕೇಂದ್ರಕ್ಕೆ ಕಳುಹಿಸಲು ನಾಸಾ ಯೋಜನೆ ಹೂಡಿದೆ.
ಖಗೋಳ ಶಾಸ್ತ್ರಜ್ಞರ ಖಾಸಗಿ ಮಾಹಿತಿಯನ್ನು ಗೌಪ್ಯವಾಗಿಡಬೇಕಾಗಿರುವ ಕಾರಣ ಸಿಬ್ಬಂದಿಗೆ ವಾಸ್ತವದಲ್ಲಿ ಯಾವ ಆರೋಗ್ಯ ಸಮಸ್ಯೆಯಾಗಿದೆ ಎನ್ನುವುದನ್ನು ತಿಳಿಸಲು ಸಾಧ್ಯವಿಲ್ಲ ಎಂದು ಮುಖ್ಯ ಆರೋಗ್ಯ ಮತ್ತು ವೈದ್ಯಕೀಯ ಅಧಿಕಾರಿ ಡಾ ಜೇಮ್ಸ್ ಪೋಲ್ಕ್ ಹೇಳಿದ್ದಾರೆ.
ಬುಧವಾರ ಫಿನ್ಕ್ ಮತ್ತು ಕಾರ್ಡ್ಮ್ಯಾನ್ ಬಾಹ್ಯಾಕಾಶದಲ್ಲಿ ನಡೆದಾಡುವ ಕಾರ್ಯಕ್ರಮವಿದ್ದು, ಅದನ್ನೂ ಮುಂದೂಡಲಾಗಿದೆ ಎಂದು ನಾಸಾ ಹೇಳಿದೆ. ಮೈಕ್ರೋಗ್ರಾವಿಟಿಯ ಸವಾಲುಗಳ ನಡುವೆ ಈಗಿನ ತುರ್ತು ಮರಳುವಿಕೆಯು ಬಾಹ್ಯಾಕಾಶ ಆರೋಗ್ಯ ಕ್ಷೇತ್ರದ ಅತ್ಯಾಧುನಿಕ ಸವಲತ್ತುಗಳಲ್ಲಿ ಒಂದಾಗಿದೆ ಎಂದು ನಾಸಾ ಹೇಳಿದೆ.







