ಸ್ಪೇಸ್ಎಕ್ಸ್ ಷೇರುಗಳ ನಾಗಾಲೋಟ: ವಿಶ್ವದ ಪ್ರಥಮ ಟ್ರಿಲಿಯನೇರ್ ಆದ ಮಸ್ಕ್

Photo: x.com/Complex
ನ್ಯೂಯಾರ್ಕ್: ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್ಎಕ್ಸ್ ರಾಕೆಟ್ ಕಂಪನಿಯ ಷೇರುಗಳು ಷೇರು ಮಾರುಕಟ್ಟೆಯ ಮೊದಲ ದಿನದ ವಹಿವಾಟಿನಲ್ಲೇ ಶೇಕಡ 11ರಷ್ಟು ಏರಿಕೆಯನ್ನು ದಾಖಲಿಸಿ 150 ಡಾಲರ್ಗೆ ಏರಿದೆ. ಶುಕ್ರವಾರ ಷೇರು ಮೌಲ್ಯ 172 ಡಾಲರ್ಗಳಿಗೆ ಏರಿದ್ದು, ಕಂಪನಿಯ ಒಟ್ಟು ಆಸ್ತಿ ಮೌಲ್ಯ 2.18 ಟ್ರಿಲಿಯನ್ ಡಾಲರ್ಗೆ ಏರಿದೆ. ಇದರಿಂದಾಗಿ ಎಲಾನ್ ಮಸ್ಕ್ ವಿಶ್ವದ ಪ್ರಥಮ ಟ್ರಿಲಿಯನೇರ್ ಎನಿಸಿಕೊಂಡಿದ್ದಾರೆ.
ಸ್ಪೇಸ್ಎಕ್ಸ್ ಕಂಪನಿಯ ಷೇರು ಮೌಲ್ಯ 135 ಡಾಲರ್ನಿಂದ 150 ಡಾಲರ್ಗಳಿಗೆ ಏರಿದಾಗ ಮಸ್ಕ್ ಅವರ ಸಂಪತ್ತು ಟ್ರಿಲಿಯನ್ ಡಾಲರ್ ಗಡಿ ದಾಟಿದಂತಾಗಿದೆ. ಅವರ ನಿವ್ವಳ ಸಂಪತ್ತಿನಲ್ಲಿ ಸ್ಪೇಸ್ಎಕ್ಸ್ ಮತ್ತು ಸ್ವಚ್ಛ ಇಂಧನ ಕಂಪನಿಯಾದ ಟೆಸ್ಲಾ ಷೇರುಗಳು ಸೇರಿವೆ. ಮಸ್ಕ್ ಸಹ-ಸಂಸ್ಥಾಪಕರಾಗಿರುವ ನ್ಯೂರಾಲಿಂಕ್ ಎಂಬ ನ್ಯೂರೋತಂತ್ರಜ್ಞಾನ ಕಂಪನಿ ಹಾಗೂ ಅವರು ಸಂಸ್ಥಾಪಿಸಿದ ಸುರಂಗ ಕೊರೆಯುವ ಬೋರಿಂಗ್ ಕಂಪನಿಯಲ್ಲೂ ಮಸ್ಕ್ ಷೇರುಗಳನ್ನು ಹೊಂದಿದ್ದಾರೆ.
ಅಮೆಝಾನ್ ಸಂಸ್ಥಾಪಕ ಜೆಫ್ ಬೆಝೋಸ್ ಅವರನ್ನು ಹಿಂದಿಕ್ಕಿ 2021ರ ಜನವರಿಯಲ್ಲಿ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎನಿಸಿಕೊಂಡಿದ್ದರು. ಟೆಸ್ಲಾ ಷೇರುಗಳ ದರ ಏರಿಕೆ ಬಳಿಕ ಅವರ ಒಟ್ಟು ಮೌಲ್ಯ 185 ಶತಕೋಟಿ ಡಾಲರ್ಗೆ ಏರಿತ್ತು.
ಬಾಹ್ಯಾಕಾಶದಲ್ಲಿ ಉಪಗ್ರಹ ಮತ್ತು ಡಾಟಾ ಕೇಂದ್ರಗಳನ್ನು ಆರಂಭಿಸುವ ಮತ್ತು ಕ್ರಮೇಣ ಮಂಗಳ ಗ್ರಹದಲ್ಲಿ ಜನರಿಗಾಗಿ ಕಾಲೋನಿ ನಿರ್ಮಿಸುವ ತಮ್ಮ ಮಹತ್ವಾಕಾಂಕ್ಷಿ ಯೋಜನೆಗೆ ಸಂಪನ್ಮೂಲ ಕ್ರೋಢೀಕರಿಸುವ ಉದ್ದೇಶದಿಂದ ಟೆಸ್ಲಾ ಮುಖ್ಯಸ್ಥ ಮಸ್ಕ್ ಸ್ಪೇಸ್ಎಕ್ಸ್ ಕಂಪನಿಯ ಷೇರುಗಳನ್ನು ಸಾರ್ವಜನಿಕ ವಹಿವಾಟಿಗೆ ಬಿಡುಗಡೆ ಮಾಡಿದ್ದರು.






