ಕಕ್ಷೆಯಿಂದ ಮರಳಿದ ನೌಕೆಯನ್ನು ಚಾಪ್ ಸ್ಟಿಕ್ ಗಳಿಂದ ಹಿಡಿದ SpaceX
ರಾಕೆಟ್ ಮರುಬಳಕೆ ತಂತ್ರಜ್ಞಾನದಲ್ಲಿ ಐತಿಹಾಸಿಕ ಸಾಧನೆ

ಸಾಂದರ್ಭಿಕ ಚಿತ್ರ | Photo credit : AI
ಟೆಕ್ಸಾಸ್: ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿರುವ SpaceX, ತನ್ನ ಬೃಹತ್ ರಾಕೆಟ್ ಸ್ಟಾರ್ ಶಿಪ್ ನ ಮೇಲಿನ ಹಂತವನ್ನು ಭೂಮಿಗೆ ಮರಳಿದ ಬಳಿಕ ಉಡಾವಣಾ ಗೋಪುರದ ದೈತ್ಯ ಯಾಂತ್ರಿಕ ತೋಳುಗಳ ಮೂಲಕ ಯಶಸ್ವಿಯಾಗಿ ಹಿಡಿದು ನಿಲ್ಲಿಸಿದೆ.
ಅಮೆರಿಕದ ಟೆಕ್ಸಾಸ್ ನಲ್ಲಿರುವ ಸ್ಟಾರ್ಬೇಸ್ ಉಡಾವಣಾ ಕೇಂದ್ರದಲ್ಲಿ ರವಿವಾರ ನ. 15ರಂದು ಈ ಸಾಧನೆ ನಡೆದಿದೆ. ಬಾಹ್ಯಾಕಾಶಕ್ಕೆ ತೆರಳಿ ಭೂಮಿಯ ಕಕ್ಷೆಯನ್ನು ಸುತ್ತಿ ಮರಳಿದ ನೌಕೆಯನ್ನು ಉಡಾವಣಾ ಗೋಪುರದ ತೋಳುಗಳ ಮೂಲಕ ಹಿಡಿದಿರುವುದು ಇದೇ ಮೊದಲು. ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ ಅನ್ನು ಸಂಪೂರ್ಣವಾಗಿ ಮತ್ತು ತ್ವರಿತವಾಗಿ ಮರುಬಳಕೆ ಮಾಡುವ ಕಂಪೆನಿಯ ಗುರಿಯತ್ತ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಸ್ಟಾರ್ಶಿಪ್ ನ 15ನೇ ಸಂಯೋಜಿತ ಹಾರಾಟ ಪರೀಕ್ಷೆಯಾದ 'ಫ್ಲೈಟ್ 15'ರ ಸಂದರ್ಭದಲ್ಲಿ ಈ ಸಾಧನೆ ಮಾಡಲಾಗಿದೆ. ನ. 14ರಂದು ದಕ್ಷಿಣ ಟೆಕ್ಸಾಸ್ನ ಸ್ಟಾರ್ಬೇಸ್ ನಿಂದ ಉಡಾವಣೆಯಾಗಿದ್ದ ನೌಕೆ, ಭೂಮಿಯಿಂದ ಸುಮಾರು 275 ಕಿ.ಮೀ. ಎತ್ತರದ ಕೆಳ ಕಕ್ಷೆಯನ್ನು ತಲುಪಿತ್ತು. ಬಾಹ್ಯಾಕಾಶದಲ್ಲಿ 22 ಗಂಟೆಗಳಿಗೂ ಹೆಚ್ಚು ಕಾಲ ಕಳೆದ ಬಳಿಕ ಮರಳಿದ ಭಾರತೀಯ ಕಾಲಮಾನ ರವಿವಾರ ಬೆಳಿಗ್ಗೆ ಸುಮಾರು 2.52ಕ್ಕೆ 'ಶಿಪ್ 42' ಅನ್ನು ಗೋಪುರದ ತೋಳುಗಳು ಹಿಡಿದವು.
ಕಕ್ಷೆಯಲ್ಲಿದ್ದ ಅವಧಿಯಲ್ಲಿ ಶಿಪ್ 42 ಭೂಮಿಯನ್ನು ಸುಮಾರು 14 ಬಾರಿ ಸುತ್ತು ಹಾಕಿತು. ಈ ವೇಳೆ ಮುಂದಿನ ಪೀಳಿಗೆಯ 26 ಸ್ಟಾರ್ಲಿಂಕ್ V3 ಉಪಗ್ರಹಗಳನ್ನು ಕಕ್ಷೆಗೆ ನಿಯೋಜಿಸಿತು.
ನೌಕೆಯ ಶಾಖ ನಿರೋಧಕ ಕವಚ (ಹೀಟ್ ಶೀಲ್ಡ್) ಮತ್ತು ಇತರ ಉಪಕರಣಗಳ ಸ್ಥಿತಿಯನ್ನು ಪರಿಶೀಲಿಸಲು ಮೂರು ಉಪಗ್ರಹಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಭೂಮಿಗೆ ಮರಳುವ ಪ್ರಯಾಣಕ್ಕೆ ನೌಕೆ ಸಿದ್ಧವಾಗಿದೆಯೇ ಎಂಬುದನ್ನು ನಿರ್ಧರಿಸಲು ಈ ಕ್ಯಾಮೆರಾಗಳು ಇಂಜಿನಿಯರ್ ಗಳಿಗೆ ನೆರವಾದವು.
ಅಂತಿಮ ಪರಿಶೀಲನೆಗಳ ಬಳಿಕ ನೌಕೆ ಕಕ್ಷೆಯಿಂದ ಹೊರಬಂದು ಭೂಮಿಯ ವಾತಾವರಣವನ್ನು ಪ್ರವೇಶಿಸಿತು. ನಂತರ ನಿಯಂತ್ರಿತವಾಗಿ ಕೆಳಕ್ಕೆ ಇಳಿದು ಸ್ಟಾರ್ಬೇಸ್ ನ ಉಡಾವಣಾ ಗೋಪುರದತ್ತ ಸಾಗಿತು. ಅಲ್ಲಿ 'ಚಾಪ್ಸ್ಟಿಕ್ಸ್' ಎಂದು ಕರೆಯಲಾಗುವ ಎರಡು ಬೃಹತ್ ಯಾಂತ್ರಿಕ ತೋಳುಗಳು ನೌಕೆಯ ಎರಡೂ ಬದಿಗಳಿಂದ ಬಂದು ಅದನ್ನು ಹಿಡಿದು ನಿಲ್ಲಿಸಿದವು.
SpaceX ನ ಸ್ಟಾರ್ಶಿಪ್ ರಾಕೆಟ್ ಎರಡು ಪ್ರಮುಖ ಭಾಗಗಳನ್ನು ಹೊಂದಿದೆ. ಕೆಳಗಿನ ಭಾಗವನ್ನು 'ಸೂಪರ್ ಹೆವಿ ಬೂಸ್ಟರ್' ಎಂದು ಕರೆಯಲಾಗುತ್ತದೆ. ಇದು ರಾಕೆಟ್ ಗೆ ಆರಂಭಿಕ ವೇಗ ನೀಡಿ ಮೇಲಕ್ಕೆ ಕೊಂಡೊಯ್ಯುತ್ತದೆ. ಮೇಲಿನ ಭಾಗವೇ ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಸ್ಟಾರ್ಶಿಪ್ ನೌಕೆ.
ಕಂಪೆನಿ ಈ ಹಿಂದೆ ಸೂಪರ್ ಹೆವಿ ಬೂಸ್ಟರ್ ಗಳನ್ನು ಮರಳಿ ಪಡೆದು ಮರುಬಳಕೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಕಕ್ಷೆಯಿಂದ ಮರಳುವ ಮೇಲಿನ ಹಂತವನ್ನು ಗೋಪುರದ ತೋಳುಗಳ ಮೂಲಕ ಹಿಡಿದಿರುವುದು ಇದೇ ಮೊದಲು.
ಫ್ಲೈಟ್ 15ರ ಉದ್ದೇಶ ಎರಡೂ ಭಾಗಗಳನ್ನು ಮರಳಿ ಪಡೆಯುವುದಾಗಿತ್ತು. ಆದರೆ ಸೂಪರ್ ಹೆವಿ ಬೂಸ್ಟರ್ ಅನ್ನು ಗೋಪುರದ ಮೂಲಕ ಹಿಡಿಯುವ ಯೋಜನೆಯನ್ನು ರದ್ದುಗೊಳಿಸಲಾಯಿತು. ಬದಲಿಗೆ ಅದು ಮೆಕ್ಸಿಕೊ ಕೊಲ್ಲಿಯ ಸಮುದ್ರದಲ್ಲಿ ಇಳಿಯಿತು. ಹೀಗಾಗಿ ಮೇಲಿನ ಹಂತವನ್ನು ಮರಳಿ ಪಡೆಯುವಲ್ಲಿ ಯಶಸ್ಸು ಸಿಕ್ಕಿದರೂ, ಎರಡೂ ಭಾಗಗಳನ್ನು ಮರಳಿ ಪಡೆಯುವ ಮೂಲ ಗುರಿ ಈಡೇರಲಿಲ್ಲ.
ರಾಕೆಟ್ ನ ಎರಡೂ ಭಾಗಗಳನ್ನು ಮರಳಿ ಪಡೆದು ಮರುಬಳಕೆ ಮಾಡಲು ಸಾಧ್ಯವಾದರೆ ಉಡಾವಣಾ ವೆಚ್ಚವನ್ನು ಗಣನೀಯವಾಗಿ ತಗ್ಗಿಸಬಹುದು. ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಬಾಹ್ಯಾಕಾಶ ಯಾತ್ರೆ ಕೈಗೊಳ್ಳುವ SpaceXನ ಮಹತ್ವಾಕಾಂಕ್ಷೆಯ ಯೋಜನೆಗಳಿಗೂ ಇದು ನೆರವಾಗಲಿದೆ.






