ಇಸ್ರೇಲ್ ಜೊತೆಗಿನ ಒಪ್ಪಂದ ರದ್ದುಪಡಿಸಲು EU ಗೆ ಸ್ಪೇನ್ ಒತ್ತಾಯ

ಸ್ಪೇನ್ ಪ್ರಧಾನಮಂತ್ರಿ ಪೆಡ್ರೊ ಸ್ಯಾಂಚೆಜ್ | Photo Credit : AP
ಮ್ಯಾಡ್ರಿಡ್: ಇಸ್ರೇಲ್ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ, ಇಸ್ರೇಲ್ ಜೊತೆಗಿನ ಸಂಬಂಧ ಒಪ್ಪಂದವನ್ನು ಕೊನೆಗೊಳಿಸುವಂತೆ ಯುರೋಪಿಯನ್ ಒಕ್ಕೂಟ (EU)ವನ್ನು ಸ್ಪೇನ್ ಒತ್ತಾಯಿಸಿದೆ ಎಂದು aljazeera ವರದಿ ಮಾಡಿದೆ.
ಆಂಡಲೂಸಿಯಾದಲ್ಲಿ ನಡೆದ ರಾಜಕೀಯ ರ್ಯಾ ಲಿಯಲ್ಲಿ ಮಾತನಾಡಿದ ಸ್ಪೇನ್ ಪ್ರಧಾನಮಂತ್ರಿ ಪೆಡ್ರೊ ಸ್ಯಾಂಚೆಜ್, “ಮಂಗಳವಾರ ಸ್ಪೇನ್ ಸರ್ಕಾರವು ಇಸ್ರೇಲ್ ಜೊತೆಗಿನ ಸಂಬಂಧ ಒಪ್ಪಂದವನ್ನು ಮುರಿಯುವಂತೆ ಯುರೋಪಿಯನ್ ಒಕ್ಕೂಟಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ” ಎಂದು ತಿಳಿಸಿದ್ದಾರೆ.
ಇಸ್ರೇಲ್ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತಿದ್ದು, “ಅಂತಹ ದೇಶವು ಯುರೋಪಿಯನ್ ಒಕ್ಕೂಟದ ಪಾಲುದಾರನಾಗಲು ಸಾಧ್ಯವಿಲ್ಲ... ಅದು ಅಷ್ಟು ಸರಳವಾಗಿದೆ” ಎಂದು ಅವರು ಹೇಳಿದ್ದಾರೆ.
ಲೆಬನಾನ್ ಮೇಲಿನ ದಾಳಿಗಳನ್ನೂ ಸ್ಯಾಂಚೆಜ್ ಟೀಕಿಸಿದ್ದಾರೆ.
ಇದಕ್ಕೂ ಮೊದಲು, ಸ್ಪೇನ್, ಐರ್ಲೆಂಡ್ ಮತ್ತು ಸ್ಲೊವೇನಿಯಾ ದೇಶಗಳು ಯುರೋಪಿಯನ್ ಆಯೋಗಕ್ಕೆ ಪತ್ರ ಬರೆದು, ಇಸ್ರೇಲ್ ಜೊತೆಗಿನ ಒಪ್ಪಂದವನ್ನು ಮುಂದಿನ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಚರ್ಚಿಸಲು ಒತ್ತಾಯಿಸಿವೆ.
ಜೂನ್ 2000ರಲ್ಲಿ ಯುರೋಪಿಯನ್ ಒಕ್ಕೂಟ ಮತ್ತು ಇಸ್ರೇಲ್ ನಡುವಿನ ಸಂಬಂಧ ಒಪ್ಪಂದದಲ್ಲಿ ಮಾನವ ಹಕ್ಕುಗಳಿಗೆ ಗೌರವ ನೀಡುವ ಷರತ್ತು ಸೇರಿಸಲಾಗಿದೆ.
ಗಾಝಾ ಮೇಲೆ ಇಸ್ರೇಲ್ ನಡೆಸಿದ ಯುದ್ಧದ ನಡುವೆಯೇ, ಸ್ಪೇನ್ ಮತ್ತು ಐರ್ಲೆಂಡ್ ದೇಶಗಳು 2024ರಲ್ಲಿ ಈ ಒಪ್ಪಂದದ ಮರುಪರಿಶೀಲನೆಗೆ ಮೊದಲ ಬಾರಿಗೆ ಕರೆ ನೀಡಿದ್ದವು.
2024ರಲ್ಲಿ ಸ್ಪೇನ್ ದೇಶವು ಫೆಲೆಸ್ತೀನ್ ರಾಷ್ಟ್ರಕ್ಕೆ ಮಾನ್ಯತೆ ನೀಡಿದ ಕ್ರಮಕ್ಕೆ ಇಸ್ರೇಲ್ ಅಸಮಾಧಾನ ವ್ಯಕ್ತಪಡಿಸಿತ್ತು. ಅದರ ನಂತರದಿಂದ ಸ್ಯಾಂಚೆಜ್, ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಸರ್ಕಾರದ ವಿರುದ್ಧ ತಮ್ಮ ಟೀಕೆಗಳನ್ನು ಮುಂದುವರೆಸಿದ್ದಾರೆ.






