‘ಸ್ಪೇನ್ ಹಾಳಾಗಲಿದೆ’: NATO ಮಿತ್ರರಾಷ್ಟ್ರದ ವಿರುದ್ಧ ಡೊನಾಲ್ಡ್ ಟ್ರಂಪ್ ಟೀಕೆ
ಸಿಯುಟಾ ವಲಸೆ ಬಿಕ್ಕಟ್ಟು ನಿರ್ವಹಣೆ ಬಗ್ಗೆ ಅಮೆರಿಕ ಅಧ್ಯಕ್ಷರ ಅಸಮಾಧಾನ

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್: ಸ್ಪೇನ್ ನ ವಲಸೆ ಬಿಕ್ಕಟ್ಟನ್ನು ನಿಭಾಯಿಸುತ್ತಿರುವ ರೀತಿಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಉತ್ತರ ಆಫ್ರಿಕಾದಲ್ಲಿರುವ ಸ್ಪೇನ್ ನ ಸಿಯುಟಾ ಎನ್ ಕ್ಲೇವ್ ಗೆ ಜುಲೈನಲ್ಲಿ ಸಾವಿರಾರು ವಲಸಿಗರು ಪ್ರವೇಶಿಸಿದ ಘಟನೆಯನ್ನು ಉಲ್ಲೇಖಿಸಿದ ಅವರು, ‘ಸ್ಪೇನ್ ಹಾಳಾದ ದೇಶವಾಗಲಿದೆ’ ಎಂದು ಎಚ್ಚರಿಸಿದ್ದಾರೆ.
ಜುಲೈ 30 ಮತ್ತು 31ರಂದು ಸಾವಿರಾರು ಮೊರೊಕನ್ ವಲಸಿಗರು ಸಮುದ್ರದಲ್ಲಿ ಈಜಿಕೊಂಡು ಮತ್ತು ಗಡಿ ಬೇಲಿಗಳನ್ನು ಹತ್ತಿ ಸಿಯುಟಾಗೆ ಪ್ರವೇಶಿಸಿದ್ದರು. ಇದರಿಂದ ಸಿಯುಟಾದ ಗಡಿ ಭದ್ರತಾ ಪಡೆಗಳ ಮೇಲೆ ಭಾರಿ ಒತ್ತಡ ಉಂಟಾಗಿತ್ತು. ಈ ಘಟನೆಯಲ್ಲಿ ನೂರಾರು ಮಂದಿಯನ್ನು ಬಂಧಿಸಲಾಗಿದ್ದು, 140ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸಿಯುಟಾ ಉತ್ತರ ಆಫ್ರಿಕಾದ ಕರಾವಳಿಯಲ್ಲಿರುವ ಸ್ಪೇನ್ ನ ಒಂದು ಸಣ್ಣ ಪ್ರದೇಶ. ಸುತ್ತಲೂ ಮೊರೊಕೊ ಇದೆ. ಸಿಯುಟಾ ಮೂಲಕ ಯುರೋಪ್ ಪ್ರವೇಶಿಸಲು ವಲಸಿಗರು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ.
60 ಸಾವಿರ ಮಂದಿ ಪ್ರವೇಶಿಸಲು ಯತ್ನ
ಜುಲೈ 30–31ರಂದು ಕನಿಷ್ಠ 60 ಸಾವಿರ ವಲಸಿಗರು ಸಿಯುಟಾ ಪ್ರವೇಶಿಸಲು ಪ್ರಯತ್ನಿಸಿದ್ದರು ಎಂದು ವರದಿಯಾಗಿದೆ. ಕೆಲವರು ಸಮುದ್ರದಲ್ಲಿ ಈಜಿಕೊಂಡು ಬಂದರೆ, ಇನ್ನು ಕೆಲವರು ಗಡಿ ಬೇಲಿಗಳನ್ನು ಹತ್ತಿದರು. ವಲಸಿಗರು ದೊಡ್ಡ ಸಂಖ್ಯೆಯಲ್ಲಿ ಸಿಯುಟಾದತ್ತ ಸಾಗುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆದವು.
ಆದರೆ ಎಲ್ಲರೂ ಸಿಯುಟಾದಲ್ಲೇ ಉಳಿಯಲಿಲ್ಲ. ಜುಲೈ 31ರ ಮಧ್ಯಾಹ್ನದ ವೇಳೆಗೆ ಸುಮಾರು 50 ಸಾವಿರ ಮಂದಿ ಮೊರೊಕೊಗೆ ಮರಳಿದ್ದರು ಅಥವಾ ಅವರನ್ನು ಹಿಂತಿರುಗಿಸಲಾಗಿತ್ತು ಎಂದು ಸ್ಪ್ಯಾನಿಷ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಪೇನ್ ಸರಕಾರದ ಪ್ರಕಾರ, 1,000ಕ್ಕೂ ಹೆಚ್ಚು ಅಪ್ರಾಪ್ತರು ಸೇರಿದಂತೆ ಸುಮಾರು 5 ಸಾವಿರ ಮಂದಿ ಸಿಯುಟಾದಲ್ಲಿ ಉಳಿದಿದ್ದರು. ಆದರೆ ಸಿಯುಟಾದ ಸ್ಥಳೀಯ ಸರಕಾರ ಈ ಸಂಖ್ಯೆ 9 ಸಾವಿರದಷ್ಟಿದೆ ಎಂದು ಹೇಳಿದೆ.
ಹೆಚ್ಚಿನ ವಲಸಿಗರು ಸ್ವಯಂಪ್ರೇರಿತವಾಗಿ ಮರಳಿದ್ದರೂ, ಈ ಬೆಳವಣಿಗೆ ಯುರೋಪ್ ನಲ್ಲಿ ದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಗಿದೆ.
‘ಇದು ಆಕ್ರಮಣದಂತೆ’
ಜಿಬಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಸಿಯುಟಾಕ್ಕೆ ವಲಸಿಗರು ಭಾರಿ ಸಂಖ್ಯೆಯಲ್ಲಿ ಬಂದಿದ್ದನ್ನು ‘ಒಂದು ದೇಶದ ಆಕ್ರಮಣ’ ಎಂದು ಬಣ್ಣಿಸಿದ್ದಾರೆ.
‘ನಿಮ್ಮ ದೇಶಕ್ಕೆ ಸಾವಿರಾರು ಜನರು ಧಾವಿಸುವುದನ್ನು ನೀವು ಬಯಸುವುದಿಲ್ಲ. ನಾನು ಇಂತಹದ್ದನ್ನು ಎಂದಿಗೂ ನೋಡಿಲ್ಲ’ ಎಂದು ಅವರು ಹೇಳಿದ್ದಾರೆ.
ಮಿಲಿಟರಿ ಆಕ್ರಮಣಕ್ಕಿಂತಲೂ ಇಂತಹ ಪರಿಸ್ಥಿತಿ ಕೆಟ್ಟದ್ದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯುನೈಟೆಡ್ ಕಿಂಗ್ಡಂನ ವಲಸೆ ಸಮಸ್ಯೆಯನ್ನೂ ಪ್ರಸ್ತಾಪಿಸಿದ ಟ್ರಂಪ್, ಬ್ರಿಟನ್ ಕೂಡ ವಲಸೆ ಸಮಸ್ಯೆ ಎದುರಿಸುತ್ತಿದೆ ಎಂದಿದ್ದಾರೆ. ಆದರೆ ಸಿಯುಟಾದಲ್ಲಿರುವಷ್ಟು ಗಂಭೀರ ಪರಿಸ್ಥಿತಿ ಬ್ರಿಟನ್ ನಲ್ಲಿ ಕಾಣಿಸುವುದಿಲ್ಲ ಎಂದು ಹೇಳಿದ್ದಾರೆ.
ಮೊರೊಕೊ ಪಾತ್ರದ ಬಗ್ಗೆ ಭಿನ್ನಾಭಿಪ್ರಾಯ
ವಲಸಿಗರು ಸಿಯುಟಾ ಪ್ರವೇಶಿಸಲು ಮೊರೊಕೊ ಸರಕಾರ ಅವಕಾಶ ಮಾಡಿಕೊಟ್ಟಿತ್ತು ಎಂಬ ವರದಿಗಳು ಬಂದಿದ್ದವು. ಆದರೆ ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಮೊರೊಕೊ ಸರಕಾರ ಈ ಘಟನೆಯಲ್ಲಿ ಭಾಗಿಯಾಗಿತ್ತು ಎಂಬುದನ್ನು ತಳ್ಳಿಹಾಕಿದ್ದಾರೆ.
ಆದರೆ ಸಿಯುಟಾ ಬಿಕ್ಕಟ್ಟನ್ನು ನಿಭಾಯಿಸಿದ ರೀತಿಗಾಗಿ ಸ್ಯಾಂಚೆಜ್ ಸ್ಪೇನ್ ನಲ್ಲೇ ಒತ್ತಡ ಎದುರಿಸುತ್ತಿದ್ದಾರೆ. ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗಳು ನಡೆದಿವೆ. ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ಎದುರಿಸಲಿರುವ ಸ್ಯಾಂಚೆಜ್ ಅವರಿಗೆ ಇದು ರಾಜಕೀಯವಾಗಿ ಕಳವಳದ ಬೆಳವಣಿಗೆಯಾಗಿದೆ.
ಇಟಲಿ ಜತೆಗೂ ಉದ್ವಿಗ್ನತೆ
ಈ ನಡುವೆ ಇಟಲಿ ಮತ್ತು ಸ್ಪೇನ್ ನಡುವಿನ ಸಂಬಂಧದಲ್ಲೂ ಉದ್ವಿಗ್ನತೆ ಉಂಟಾಗಿದೆ. ಇಟಲಿ, ಸ್ಪೇನ್ ನಿಂದ ಬರುವ ಪ್ರಯಾಣಿಕರ ಮೇಲೆ ತಪಾಸಣೆಗಳನ್ನು ಜಾರಿಗೊಳಿಸಿತು. ಇದಕ್ಕೆ ಪ್ರತಿಯಾಗಿ ಸ್ಪೇನ್ ಕೂಡ ಕ್ರಮ ಕೈಗೊಂಡಿತು.
NATO ವಿಚಾರದಲ್ಲಿ ಟ್ರಂಪ್–ಸ್ಯಾಂಚೆಜ್ ಭಿನ್ನಾಭಿಪ್ರಾಯ
ಟ್ರಂಪ್ ಮತ್ತು ಸ್ಯಾಂಚೆಜ್ ನಡುವೆ ವಲಸೆ ಮಾತ್ರವಲ್ಲದೆ NATO ವಿಚಾರದಲ್ಲೂ ಭಿನ್ನಾಭಿಪ್ರಾಯವಿದೆ.
ಇರಾನ್ ವಿರುದ್ಧ ದಾಳಿ ನಡೆಸಲು ಅಮೆರಿಕ ತನ್ನ ನೆಲೆಗಳನ್ನು ಬಳಸಲು ಸ್ಪೇನ್ ಅನುಮತಿ ನೀಡಲು ನಿರಾಕರಿಸಿತ್ತು.
ಬಳಿಕ 2025ರಲ್ಲಿ ಹೇಗ್ ನಲ್ಲಿ ನಡೆದ NATO ಶೃಂಗಸಭೆಯಲ್ಲಿ, 2035ರ ವೇಳೆಗೆ ರಕ್ಷಣಾ ವೆಚ್ಚವನ್ನು ಜಿಡಿಪಿಯ ಶೇ 5ಕ್ಕೆ ಹೆಚ್ಚಿಸುವ ಗುರಿಯನ್ನು ಟ್ರಂಪ್ ಮುಂದಿಟ್ಟರು. NATO ದ 32 ಸದಸ್ಯ ರಾಷ್ಟ್ರಗಳು ಬಹುತೇಕ ಈ ಗುರಿಗೆ ಒಪ್ಪಿಕೊಂಡವು. ಆದರೆ ಸ್ಪೇನ್ ಅದನ್ನು ಒಪ್ಪಲಿಲ್ಲ.
ಪ್ರಸ್ತುತ NATO ನಿಗದಿಪಡಿಸಿರುವ ಜಿಡಿಪಿಯ ಶೇ.2ರ ರಕ್ಷಣಾ ವೆಚ್ಚವೇ ಸಾಕು ಎಂದು ಸ್ಯಾಂಚೆಜ್ ಹೇಳಿದ್ದಾರೆ. ರಕ್ಷಣಾ ವೆಚ್ಚವನ್ನು ಹೆಚ್ಚಿಸುವುದು ‘ಅಸಮಂಜಸ ಮತ್ತು ಪ್ರತಿಕೂಲ’ ಎಂದು ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲೇ ಜಿಬಿ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ‘ಸ್ಪೇನ್ ಬಗ್ಗೆ ನನಗೆ ನನ್ನದೇ ಆದ ಸಮಸ್ಯೆಗಳಿವೆ. NATOಗೆ ಸಂಬಂಧಿಸಿದಂತೆ ಸ್ಪೇನ್ ಉತ್ತಮವಾಗಿ ನಡೆದುಕೊಳ್ಳುತ್ತಿಲ್ಲ’ ಎಂದು ಹೇಳಿದ್ದಾರೆ.






