ಐಸೆನ್ಕೋಟ್ ಮಿತ್ರ ಮತನ್ಗೆ ಇಸ್ರೇಲ್ ಸಂಸತ್ತಿನ ಸ್ಪೀಕರ್ ಸ್ಥಾನ: ನೆತನ್ಯಾಹುಗೆ ಭಾರಿ ಹಿನ್ನಡೆ

ಬೆಂಜಮಿನ್ ನೆತನ್ಯಾಹು | Photo Credit : PTI
ಜೆರುಸಲೇಂ: ತಮ್ಮ ಅಧಿಕಾರದ ಹಿಡಿತವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಹಂಗಾಮಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ರಾಜಕೀಯ ಹಿನ್ನಡೆಯಾಗಿದ್ದು , ಇಸ್ರೇಲ್ ಸಂಸತ್ತು ಮಂಗಳವಾರ ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್ಕೋಟ್ ಅವರ ಮಿತ್ರ ಮತನ್ ಕಹಾನಾ ಅವರನ್ನು ನೂತನ ಸ್ಪೀಕರ್ ಆಗಿ ಆಯ್ಕೆ ಮಾಡಿದೆ. ಈ ಮೂಲಕ ವಿರೋಧ ಪಕ್ಷಗಳ ಬಣವು ನೆತನ್ಯಾಹು ಅವರ ಅಧಿಕಾರಕ್ಕೆ ಸವಾಲು ಹಾಕಲು ಮುಂದಾಗಿದೆ.
120 ಸದಸ್ಯ ಬಲದ ಸಂಸತ್ತಿನಲ್ಲಿ ಕಹಾನಾ 66 ಮತಗಳನ್ನು ಪಡೆಯುವ ಮೂಲಕ, 52 ಮತಗಳನ್ನು ಪಡೆದ ನೆತನ್ಯಾಹು ಅವರ ಲಿಕುಡ್ ಪಕ್ಷದ ಅಭ್ಯರ್ಥಿ ಓಫಿರ್ ಕಾಟ್ಜ್ ಅವರನ್ನು ಸೋಲಿಸಿದರು. ಹಂಗಾಮಿ ಸರಕಾರವನ್ನು ಬದಲಿಸಿ ನೂತನ ಸರಕಾರ ರಚಿಸಲು ಪ್ರಯತ್ನಿಸುತ್ತಿರುವ ಐಸೆನ್ಕೋಟ್ ಮತ್ತು ನೆತನ್ಯಾಹು ನಡುವಿನ ರಾಜಕೀಯ ಪೈಪೋಟಿಯಲ್ಲಿ ಈ ಫಲಿತಾಂಶವು ಮಹತ್ವದ ಬೆಳವಣಿಗೆಯಾಗಿದೆ.
ಚರ್ಚೆಗಳ ವೇಳಾಪಟ್ಟಿ ನಿಗದಿಪಡಿಸುವುದು ಮತ್ತು ಮಸೂದೆಗಳ ಮೇಲಿನ ಮತದಾನ ಸೇರಿದಂತೆ ಸಂಸತ್ತಿನ ಕಲಾಪಗಳ ಮೇಲೆ ಸ್ಪೀಕರ್ ಸ್ಥಾನವು ಗಮನಾರ್ಹ ಪ್ರಭಾವವನ್ನು ಹೊಂದಿರುತ್ತದೆ. ಆದ್ದರಿಂದ, ಕಹಾನಾ ಅವರ ಆಯ್ಕೆಯು ನೆತನ್ಯಾಹು ಅವರ ಅಧಿಕಾರಾವಧಿಯಲ್ಲಿ ಪರಿಚಯಿಸಲಾದ ನೀತಿಗಳನ್ನು ಪ್ರಶ್ನಿಸಲು ಅಥವಾ ತಡೆಹಿಡಿಯಲು ವಿರೋಧ ಪಕ್ಷಕ್ಕೆ ಅವಕಾಶ ನೀಡಬಹುದು.




