ಶ್ರೀಲಂಕಾದಲ್ಲಿ ಚಂಡಮಾರುತ ಅಬ್ಬರ: 132ಕ್ಕೇರಿದ ಮೃತರ ಸಂಖ್ಯೆ; 176 ಮಂದಿ ನಾಪತ್ತೆ

Photo Credit : NDTV
ಕೊಲಂಬೋ: ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದ ಅಬ್ಬರ ಮುಂದುವರಿದಿರುವಂತೆಯೇ ಶನಿವಾರ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು ಅಂತರಾಷ್ಟ್ರೀಯ ನೆರವಿಗೆ ಸರಕಾರ ವಿನಂತಿ ಮಾಡಿಕೊಂಡಿದೆ. ಚಂಡಮಾರುತ, ಪ್ರವಾಹ, ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 132ಕ್ಕೆ ತಲುಪಿದ್ದು ಇತರ 176 ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಚಂಡಮಾರುತದಿಂದ 15,000ಕ್ಕೂ ಅಧಿಕ ಮನೆಗಳು ನಾಶಗೊಂಡಿದ್ದು ಸುಮಾರು 78,000 ಜನರನ್ನು ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಾವಿರಕ್ಕೂ ಅಧಿಕ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಬಲಪಡಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಕೇಂದ್ರದ(ಡಿಎಂಸಿ) ಪ್ರಧಾನ ನಿರ್ದೇಶಕ ಸಂಪತ್ ಕೊಟುವೆಗೋಡ ಹೇಳಿದ್ದಾರೆ.
ವಿದ್ಯುತ್ ತಂತಿಗಳು ತುಂಡಾಗಿದ್ದು ನೀರು ಶುದ್ಧೀಕರಣ ಸೌಲಭ್ಯ ಜಲಾವೃತಗೊಂಡಿರುವುದರಿಂದ ದೇಶದ ಮೂರನೇ ಒಂದರಷ್ಟು ಪ್ರದೇಶಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು ಕುಡಿಯುವ ನೀರಿನ ಕೊರತೆಯೂ ಎದುರಾಗಿದೆ. ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ಚಂಡಮಾರುತ ಕ್ರಮೇಣ ಭಾರತದ ದಕ್ಷಿಣ ಕರಾವಳಿಯತ್ತ ಚಲಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಶ್ರೀಲಂಕಾಕ್ಕೆ ಅಪ್ಪಳಿಸಿದ ಅತ್ಯಂತ ವಿನಾಶಕಾರಿ ನೈಸರ್ಗಿಕ ವಿಕೋಪವೆಂದು ಗುರುತಿಸಿಕೊಂಡಿರುವ ದಿತ್ವಾ ಚಂಡಮಾರುತ ಅಸಾಮಾನ್ಯ ಪ್ರವಾಹ ಮತ್ತು ವ್ಯಾಪಕ ಭೂಕುಸಿತಕ್ಕೆ ಕಾರಣವಾಗಿದೆ. ಹಲವಾರು ಜಿಲ್ಲೆಗಳು ಜಲಾವೃತಗೊಂಡಿದ್ದು ಸಂಪೂರ್ಣ ಸಮುದಾಯಗಳು ಭೂಕುಸಿತದಿಂದಾಗಿ ಅತಂತ್ರ ಸ್ಥಿತಿಯಲ್ಲಿದೆ. ದೇಶದಾದ್ಯಂತ ರಸ್ತೆ ನೆಟ್ವರ್ಕ್ಗಳು, ಸೇತುವೆಗಳು, ರೈಲು ಹಳಿಗಳು ಹಾಗೂ ವಿದ್ಯುತ್ ಗ್ರಿಡ್ಗಳಿಗೆ ಗಂಭೀರ ಹಾನಿಯಾಗಿದೆ. ಶೋಧ ಮತ್ತು ಪರಿಹಾ ರ ಕಾರ್ಯಾಚರಣೆಯನ್ನು ವೇಗಗೊಳಿಸಲು ತುರ್ತು ಪರಿಸ್ಥಿತಿಯ ಅಗತ್ಯವಿದೆ ಎಂದು ಸರಕಾರದ ಮೂಲಗಳು ಹೇಳಿವೆ.
ಸೋಮವಾರ(ನವೆಂಬರ್ 24)ದಿಂದಲೂ ಶ್ರೀಲಂಕಾದಲ್ಲಿ ಮಳೆ ಸುರಿಯುತ್ತಿತ್ತು. ಆದರೆ ಬುಧವಾರ ದಿತ್ವಾ ಚಂಡಮಾರುತ ಅಪ್ಪಳಿಸಿದ ಬಳಿಕ ದ್ವೀಪರಾಷ್ಟ್ರದಾದ್ಯಂತ ದಾಖಲೆ ಮಟ್ಟದ ಮಳೆಯಾಗಿದೆ. ಶನಿವಾರ ಪ್ರವಾಹದ ಸ್ಥಿತಿ ಮತ್ತಷ್ಟು ತೀವ್ರಗೊಂಡಿದ್ದು ಕೆಲಾನಿ ನದಿಯ ದಡದಲ್ಲಿ ವಾಸಿಸುವ ಜನರಿಗೆ ಸ್ಥಳಾಂತರಗೊಳ್ಳುವಂತೆ ಆದೇಶಿಸಲಾಗಿದೆ.
ʼಆಪರೇಷನ್ ಸಾಗರ ಬಂಧುʼ ಕಾರ್ಯಾಚರಣೆ - ಭಾರತದಿಂದ ಮಾನವೀಯ ನೆರವು:
ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾಕ್ಕೆ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಒದಗಿಸುವ ಉಪಕ್ರಮವನ್ನು `ಸಾಗರ ಬಂಧು' ಕಾರ್ಯಾಚರಣೆಯ ಹೆಸರಲ್ಲಿ ಭಾರತ ಆರಂಭಿಸಿದ್ದು 27 ಟನ್ಗಳಷ್ಟು ಮಾನವೀಯ ನೆರವನ್ನು ರವಾನಿಸಿದೆ.
ಚಂಡಮಾರುತದಿಂದ ಸಂಭವಿಸಿದ ಸಾವು-ನೋವು, ನಾಶ-ನಷ್ಟಗಳ ಬಗ್ಗೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಭಾರತ ಇನ್ನಷ್ಟು ನೆರವು ರವಾನಿಸಲು ಸಿದ್ಧವಿದೆ ಎಂದು ಹೇಳಿದ್ದಾರೆ.
ಭಾರತದ ನೌಕಾಪಡೆಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಮತ್ತು ಐಎನ್ಎಸ್ ಉದಯಗಿರಿಯ ಮೂಲಕ ಶುಕ್ರವಾರ 6.5 ಟನ್ಗಳಷ್ಟು ಪಡಿತರ ವಸ್ತುಗಳನ್ನು ಲಂಕಾಗೆ ರವಾನಿಸಲಾಗಿದೆ. ಶನಿವಾರ ವಾಯುಪಡೆ ವಿಮಾನದ ಮೂಲಕ 12 ಟನ್ ಮಾನವೀಯ ನೆರವು (ಡೇರೆಗಳು, ಟರ್ಪಾಲ್, ಕಂಬಳಿಗಳು, ನೈರ್ಮಲ್ಯ ವಸ್ತುಗಳು) ಲಂಕಾಕ್ಕೆ ರವಾನೆಯಾಗಿದೆ.







