2019ರ ಈಸ್ಟರ್ ಬಾಂಬ್ ದಾಳಿಗೆ ಮಾಜಿ ಗುಪ್ತಚರ ಮುಖ್ಯಸ್ಥ ಮೇಜರ್ ಜನರಲ್ ತುವಾನ್ ಸುರೇಶ್ ಸಲ್ಲೇ ನಿರ್ದೇಶನ: ಶ್ರೀಲಂಕಾ ಸಚಿವ ಆರೋಪ

Photo Credit : NDTV
ಕೊಲಂಬೊ: 2019ರ ಈಸ್ಟರ್ ಸಂಡೆ ಶ್ರೀಲಂಕಾದಲ್ಲಿ ನಡೆದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಗಳಿಗೆ ದೇಶದ ಮಾಜಿ ಗುಪ್ತಚರ ಮುಖ್ಯಸ್ಥ ಮೇಜರ್ ಜನರಲ್ ತುವಾನ್ ಸುರೇಶ್ ಸಲ್ಲೇ ನಿರ್ದೇಶನ ನೀಡಿದ್ದರು ಎಂದು ಸಾರ್ವಜನಿಕ ಭದ್ರತಾ ಸಚಿವ ಆನಂದ ವಿಜೆಪಾಲ ಸಂಸತ್ತಿನಲ್ಲಿ ಬುಧವಾರ ಆರೋಪಿಸಿದ್ದಾರೆ.
279 ಮಂದಿಯ ಸಾವಿಗೆ ಕಾರಣವಾಗಿದ್ದ ಈಸ್ಟರ್ ದಾಳಿಯ ಹಿಂದೆ ಸಲ್ಲೇ ಅವರ ಪಾತ್ರವಿದೆ ಎಂದು ಸರ್ಕಾರ ಅಧಿಕೃತವಾಗಿ ಆರೋಪಿಸಿರುವುದು ಇದೇ ಮೊದಲ ಬಾರಿ.
ದಾಳಿಗೆ ‘ಸಹಾಯ ಮತ್ತು ಪ್ರೋತ್ಸಾಹ’ ನೀಡಿದ ಆರೋಪದಡಿ ಫೆಬ್ರುವರಿಯಲ್ಲಿ ಬಂಧಿತರಾಗಿರುವ ಸಲ್ಲೇ, ಬಾಂಬ್ ದಾಳಿ ನಡೆಸಬೇಕಿದ್ದ ಕ್ಯಾಥೋಲಿಕ್ ಚರ್ಚ್ ಗಳನ್ನು ಗುರುತಿಸುವಲ್ಲಿಯೂ ಪಾತ್ರ ವಹಿಸಿದ್ದರು ಎಂದು ಸಚಿವರು ತಿಳಿಸಿದ್ದಾರೆ.
‘ನಿವೃತ್ತ ಮೇಜರ್ ಜನರಲ್ ತುವಾನ್ ಸುರೇಶ್ ಸಲ್ಲೇ ಅವರು ಭಯೋತ್ಪಾದಕರೊಂದಿಗೆ ಸೇರಿ ದಾಳಿಯ ಸಂಚು ರೂಪಿಸಿದ್ದರು. ದಾಳಿ ನಡೆಸಲು ಅವರಿಗೆ ಮಾರ್ಗದರ್ಶನ ನೀಡಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ’ ಎಂದು ವಿಜೆಪಾಲ ಹೇಳಿದ್ದಾರೆ.
'ದಾಳಿಗೆ ಕೇವಲ ಮೂರು ವಾರಗಳ ಮೊದಲು ಸಲ್ಲೇ ಕೆಲವು ವ್ಯಕ್ತಿಗಳನ್ನು ಭೇಟಿಯಾಗಿ, ದಾಳಿಗೆ ಸಂಬಂಧಿಸಿದ ಸ್ಥಳಗಳ ಮಾಹಿತಿ ಮತ್ತು ಇತರ ವಿವರಗಳನ್ನು ಪಡೆದಿದ್ದರು’ ಎಂದೂ ಅವರು ಹೇಳಿದ್ದಾರೆ.
ಆದರೆ, ತಮ್ಮ ವಕೀಲರ ಮೂಲಕ ಸಲ್ಲೇ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ.
ಭಯೋತ್ಪಾದನೆ ತಡೆ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಸಲ್ಲೇ ಉಪವಾಸ ಸತ್ಯಾಗ್ರಹ ಆರಂಭಿಸಿದ ಬಳಿಕ ರವಿವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ವಿರೋಧ ಪಕ್ಷದ ಕಾರ್ಯಕರ್ತರು ರಾಜಧಾನಿ ಕೊಲಂಬೊದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಲ್ಲೇ ವಿರುದ್ಧದ ತನಿಖೆಯ ಭಾಗವಾಗಿ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ದೇಶ ತೊರೆಯದಂತೆ ನ್ಯಾಯಾಲಯದಿಂದ ಆದೇಶ ಪಡೆಯಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
2019ರಲ್ಲಿ ಅಧ್ಯಕ್ಷರಾದ ರಾಜಪಕ್ಸೆ, ಅಧಿಕಾರ ವಹಿಸಿಕೊಂಡ ಬಳಿಕ ಸಲ್ಲೇ ಅವರನ್ನು ದೇಶದ ಪ್ರಮುಖ ಗೂಢಚರ ಸಂಸ್ಥೆಯಾದ ರಾಜ್ಯ ಗುಪ್ತಚರ ಸೇವೆ (SIS) ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ಅದಕ್ಕೂ ಮೊದಲು ಅವರು ಮಿಲಿಟರಿ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದರು.
2023ರಲ್ಲಿ ಬ್ರಿಟನ್ ನ ಚಾನೆಲ್ 4 ಪ್ರಸಾರ ಮಾಡಿದ ತನಿಖಾ ವರದಿಯಲ್ಲಿ, ಸಲ್ಲೇ ಆತ್ಮಹತ್ಯಾ ಬಾಂಬರ್ ಗಳೊಂದಿಗೆ ಸಂಪರ್ಕ ಹೊಂದಿದ್ದು, ದಾಳಿಗೆ ಮುನ್ನ ಅವರನ್ನು ಭೇಟಿಯಾಗಿದ್ದರು ಎಂದು ಆರೋಪಿಸಲಾಗಿತ್ತು. ಅಧ್ಯಕ್ಷೀಯ ಚುನಾವಣೆಯಲ್ಲಿ ರಾಜಪಕ್ಸೆಗೆ ಅನುಕೂಲವಾಗುವಂತೆ ರಾಜಕೀಯ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ದಾಳಿಗೆ ಅವಕಾಶ ನೀಡಲಾಗಿದೆ ಎಂದು ಒಬ್ಬ ವಿಶಲ್ಬ್ಲೋವರ್ ಹೇಳಿರುವುದನ್ನೂ ವರದಿ ಉಲ್ಲೇಖಿಸಿತ್ತು.
ಈಸ್ಟರ್ ಬಾಂಬ್ ದಾಳಿಯ ಎರಡು ದಿನಗಳ ಬಳಿಕ ಗೋಟಬಯ ರಾಜಪಕ್ಸೆ ಅಧ್ಯಕ್ಷೀಯ ಚುನಾವಣೆಗೆ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ್ದರು. ಉಗ್ರವಾದವನ್ನು ಮಟ್ಟಹಾಕುವುದಾಗಿ ಭರವಸೆ ನೀಡಿದ್ದ ಅವರು, ಅದೇ ವರ್ಷದ ನವೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿದ್ದರು.
ಆದರೆ, ಕ್ರಿಮಿನಲ್ ತನಿಖಾ ಇಲಾಖೆ ಇದುವರೆಗೆ ರಾಜಪಕ್ಸೆ ವಿರುದ್ಧ ಯಾವುದೇ ಆರೋಪ ದಾಖಲಿಸಿಲ್ಲ. ಆದರೂ, ತನಿಖೆಯ ಭಾಗವಾಗಿ ಶೀಘ್ರದಲ್ಲೇ ಅವರ ಹೇಳಿಕೆ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
2019ರ ಎಪ್ರಿಲ್ 21ರಂದು ನಡೆದ ಈಸ್ಟರ್ ಸಂಡೆ ದಾಳಿಗಳಲ್ಲಿ ಕೊಲಂಬೊದಲ್ಲಿನ ಮೂರು ಐಷಾರಾಮಿ ಹೋಟೆಲ್ ಗಳು, ಎರಡು ರೋಮನ್ ಕ್ಯಾಥೋಲಿಕ್ ಚರ್ಚ್ಗಳು ಹಾಗೂ ಕೊಲಂಬೊ ಹೊರವಲಯದ ಇವಾಂಜೆಲಿಕಲ್ ಪ್ರೊಟೆಸ್ಟಂಟ್ ಚರ್ಚ್ ವೊಂದನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ಬಾಂಬ್ ದಾಳಿಗಳು ನಡೆದಿದ್ದವು. ಶ್ರೀಲಂಕಾ ಇತಿಹಾಸದಲ್ಲಿಯೇ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದಾದ ಈ ಘಟನೆಯಲ್ಲಿ 279 ಮಂದಿ ಮೃತಪಟ್ಟಿದ್ದರು.






