ಅಮೆರಿಕ: ಮಿಲಿಟರಿ ಸಿಬ್ಬಂದಿ ಮುಖ್ಯಸ್ಥರ ಸಹಿತ ಮೂವರು ಸೇನಾಧಿಕಾರಿಗಳ ವಜಾ

ಸಾಂದರ್ಭಿಕ ಚಿತ್ರ | PC : NDTV
ವಾಷಿಂಗ್ಟನ್: ವಾಯುಪಡೆಯ ಜನರಲ್ ಚಾಲ್ರ್ಸ್ ಬ್ರೌನ್ ಜ್ಯೂ. ಅವರನ್ನು ಮಿಲಿಟರಿ ಸಿಬ್ಬಂದಿ ಜಂಟಿ ಮುಖ್ಯಸ್ಥರ ಹುದ್ದೆಯಿಂದ ವಜಾಗೊಳಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಜಾರಿಗೊಳಿಸಿರುವುದಾಗಿ ವರದಿಯಾಗಿದೆ.
ಅಮೆರಿಕದ ವಾಯು ಪಡೆಯಲ್ಲಿ 40 ವರ್ಷಗಳಿಂದ ಸಲ್ಲಿಸಿದ ಸೇವೆಗಾಗಿ ಜನರಲ್ ಬ್ರೌನ್ ರನ್ನು ಅಭಿನಂದಿಸುತ್ತೇನೆ ಮತ್ತು ಅವರಿಗೆ ಮತ್ತು ಕುಟುಂಬಕ್ಕೆ ಉತ್ತಮ ಭವಿಷ್ಯವನ್ನು ಹಾರೈಸುತ್ತೇನೆ. ಮಿಲಿಟರಿ ಸಿಬ್ಬಂದಿ ಜಂಟಿ ಮುಖ್ಯಸ್ಥರ ಹುದ್ದೆಯಿಂದ ಅವರನ್ನು ಬಿಡುಗಡೆಗೊಳಿಸಿದ್ದು ನಿವೃತ್ತ ವಾಯುಪಡೆ ಲೆ|ಜ| ಡ್ಯಾನ್ `ರಜಿನ್' ಕೈನ್ ರನ್ನು ಈ ಹುದ್ದೆಗೆ ನೇಮಿಸುವುದಾಗಿ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಮಿಲಿಟರಿ ಸಿಬ್ಬಂದಿಯಾಗಿ ಬ್ರೌನ್ 16 ತಿಂಗಳು ಕಾರ್ಯ ನಿರ್ವಹಿಸಿದ್ದಾರೆ. ನೌಕಾಪಡೆಯ ಕಾರ್ಯಾಚರಣೆ ಮುಖ್ಯಸ್ಥ ಅಡ್ಮಿರಲ್ ಲೀಸಾ ಫ್ರಾಂಚೆಟಿ ಮತ್ತು ವಾಯುಪಡೆಯ ಸಿಬ್ಬಂದಿ ಉಪಮುಖ್ಯಸ್ಥರ ಹುದ್ದೆಯಿಂದ ಜನರಲ್ ಜಿಮ್ ಸ್ಲಿಫಿಯನ್ನೂ ವಜಾಗೊಳಿಸಲಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ





