ಗಾಝಾದ ಪತ್ರಕರ್ತರ ರಕ್ಷಣೆಗೆ ಅಲ್ ಜಝೀರಾದಿಂದ ಜಾಗತಿಕ ಕರೆ
ನಿರಂತರ ಬಾಂಬ್ ದಾಳಿಗಳ ನಡುವೆ ಹಸಿವಿನಿಂದ ಸತ್ಯವನ್ನು ಜಗತ್ತಿಗೆ ತಲುಪಿಸುತ್ತಿರುವ ಪತ್ರಕರ್ತರು!

PC : network.aljazeera.net
ದೋಹಾ, ಜು.23: ಇಸ್ರೇಲ್ ಪಡೆಗಳಿಂದ ಗಾಝಾದಲ್ಲಿ ಮಾಧ್ಯಮ ವೃತ್ತಿಪರರು ಮತ್ತು ಪತ್ರಕರ್ತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದೈಹಿಕ ಹಾನಿ, ಆಹಾರದ ತೀವ್ರ ಕೊರತೆ, ನಿರಂತರ ಬಾಂಬ್ ದಾಳಿಗಳ ನಡುವೆಯೂ ಸತ್ಯವನ್ನು ಜಗತ್ತಿಗೆ ತಲುಪಿಸುತ್ತಿರುವ ಈ ಧೈರ್ಯಶಾಲಿ ಪತ್ರಕರ್ತರ ಬದುಕು ದುಸ್ತರವಾಗಿದೆ. ಈ ಪತ್ರಕರ್ತರ ರಕ್ಷಣೆಗೆ ಜಾಗತಿಕ ಮಾಧ್ಯಮ ಸಂಸ್ಥೆಗಳು, ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಕಾನೂನು ಸಂಸ್ಥೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಅಲ್ ಜಝೀರಾ ಮೀಡಿಯಾ ನೆಟ್ವರ್ಕ್ ಕರೆ ನೀಡಿದೆ.
2023 ಅಕ್ಟೋಬರ್ ನಲ್ಲಿ ಆರಂಭವಾದ ಗಾಝಾ ಮೇಲಿನ ಇಸ್ರೇಲಿನ ದಾಳಿಗಳ ನಂತರ, ಆ ಪ್ರದೇಶದ ಜನತೆ ಬದುಕುಳಿಯಲು ಹೋರಾಟ ನಡೆಸುತ್ತಿದ್ದಾರೆ. ಸುಮಾರು 20 ಲಕ್ಷ ಜನರಿಗೆ ಆಹಾರ, ನೀರು, ವೈದ್ಯಕೀಯ ಸಹಾಯ ಸೇರಿದಂತೆ ಜೀವನೋಪಾಯ ಸೌಲಭ್ಯಗಳು ಸಿಗದ ಸ್ಥಿತಿ ನಿರ್ಮಾಣವಾಗಿದೆ.
ಈ ಪರಿಸ್ಥಿತಿಯ ಮಧ್ಯೆ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು, ಗಾಝಾದ ಜನರ ನೋವು ಜಗತ್ತಿಗೆ ತಲುಪಿಸುವ ಮಹತ್ತರ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಇದೀಗ ಅವರೇ ತಮ್ಮ ಬದುಕಿನ ಉಳಿವಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮದ ಮೂಲಕ ಜುಲೈ 19 ರಂದು ಅಲ್ ಜಝೀರಾದ ಪತ್ರಕರ್ತರೊಬ್ಬರು ತಮ್ಮ ನೋವಿನ ಧ್ವನಿಯನ್ನು ಹರಡಿದರು. ಅಲ್ ಜಝೀರಾ ಅರೇಬಿಕ್ ಚಾನೆಲ್ ನ ವರದಿಗಾರ ಅನಸ್ ಅಲ್ ಶರೀಫ್ ಪೋಸ್ಟ್ ಮಾಡಿರುವ ಸಂದೇಶವು ಕಳವಳಕಾರಿಯಾಗಿದೆ. "ಕಳೆದ 21 ತಿಂಗಳಿಂದ ನಾನು ವರದಿ ಮಾಡುತ್ತಿದ್ದೇನೆ. ಒಂದು ಕ್ಷಣವು ವರದಿ ಮಾಡುವುದನ್ನು ನಾನು ನಿಲ್ಲಿಸಿಲ್ಲ. ಆದರೆ ಇಂದು ನಾನು ಹಸಿವಿನಿಂದ ಕುಸಿಯುತ್ತಿದ್ದೇನೆ. ಬಳಲಿಕೆಯಿಂದ ನಡುಗುತ್ತಿದ್ದೇನೆ. ನನ್ನನ್ನು ಅನುಸರಿಸುತ್ತಿರುವ ಮೂರ್ಛೆಗೆ ಪ್ರತಿಕ್ಷಣ ಪ್ರತಿರೋಧಿಸುತ್ತಿದ್ದೇನೆ. ಗಾಝಾ ಸಾಯುತ್ತಿದೆ, ನಾವು ಅದರೊಂದಿಗೆ ಸಾಯುತ್ತಿದ್ದೇವೆ" ಎಂಬ ಅವರ ಪೋಸ್ಟ್ ಮತ್ತು ಅದರಲ್ಲಿ ಅವರು ಬಳಸಿರುವ ಹೃದಯವಿದ್ರಾವಕ ಶಬ್ದಗಳು ಓದುಗರ ಮನಸ್ಸನ್ನು ನೇರವಾಗಿ ತಟ್ಟಿವೆ.
ಸಂಕಷ್ಟದ ಸಮಯದಲ್ಲಿ ಧೈರ್ಯವಾಗಿ ಮುನ್ನುಗ್ಗಿ ಗಾಝಾದ ಭಯಾನಕ ವಾಸ್ತವಗಳನ್ನು ವರದಿ ಮಾಡುತ್ತಿರುವ ಪತ್ರಕರ್ತರನ್ನು ಬಹುಮಟ್ಟಿಗೆ ಕಡೆಗಣಿಸಲಾಗುತ್ತಿದೆ. ಪತ್ರಕರ್ತರು ಎದುರಿಸುತ್ತಿರುವ ಸಂಕಷ್ಟಗಳನ್ನು ಕಡೆಗಣಿಸುವ ಮೂಲಕ ಅವರನ್ನು ಕೇವಲ ಮಾಹಿತಿದಾರರನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಅವರ ನೈಜ ಸ್ಥಿತಿಗತಿಗಳನ್ನು ಪ್ರತಿ ಪತ್ರಕರ್ತ ಮತ್ತು ಮಾಧ್ಯಮ ಸಂಸ್ಥೆಯು ಪರಿಗಣಿಸಬೇಕಾದ ಅಗತ್ಯವಿದೆ.
"ಗಾಝಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಧೈರ್ಯಶಾಲಿ ಪತ್ರಕರ್ತರು ಕೇವಲ ವರದಿಗಾರರಲ್ಲ, ಅವರು ಇತಿಹಾಸದ ಜೀವಂತ ಸಾಕ್ಷಿಗಳು. ಇಸ್ರೇಲಿ ಆಕ್ರಮಣ ಪಡೆಗಳಿಂದ ಬಲವಂತದ ಹಸಿವು ಮತ್ತು ಗುರಿಯಿಟ್ಟು ಹತ್ಯೆ ಮಾಡುವುದರಿಂದ ಅವರು ಅನುಭವಿಸುತ್ತಿರುವ ನೋವನ್ನು ಅಂತ್ಯಗೊಳಿಸುವ ಋಣ ನಮ್ಮ ಮೇಲಿದೆ,” ಎಂದು ಅಲ್ ಜಝೀರಾ ಮೀಡಿಯಾ ನೆಟ್ವರ್ಕ್ ನ ಮಹಾನಿರ್ದೇಶಕಿ ಡಾ. ಮೊಸ್ತೇಫಾ ಸೌಗ್ ಹೇಳಿದ್ದಾರೆ.
"ಪತ್ರಿಕೋದ್ಯಮ ಸಮುದಾಯ ಮತ್ತು ಜಗತ್ತು ಇಂದು ನಿರ್ಣಾಯಕ ಹಂತದಲ್ಲಿದೆ. ಈ ವೃತ್ತಿಗೆ ನಿಷ್ಠೆಯಿಂದ ಕೆಲಸ ಮಾಡುವವರನ್ನು ನಾವು ಬೆಂಬಲಿಸದಿದ್ದರೆ, ಭವಿಷ್ಯದಲ್ಲಿ ಸತ್ಯವನ್ನು ಹೇಳಲು ಯಾರೂ ಉಳಿಯುವುದಿಲ್ಲ. ನಾವು ಕೈಜೋಡಿಸದಿದ್ದರೆ, ಈ ಮಾಧ್ಯಮ ಹಿಂಸೆಗೆ ಮುಕ್ತಿ ಇಲ್ಲ. ಪ್ರತಿ ಪತ್ರಕರ್ತನು ಶ್ರಮಿಸುವ ಸತ್ಯದ ತತ್ವಗಳಿಗೆ ಇದು ದ್ರೋಹವಾಗಲಿದೆ" ಎಂದು ಅವರು ಎಚ್ಚರಿಸಿದ್ದಾರೆ.
ಇಸ್ರೇಲಿ ದಾಳಿಗಳಿಂದಾಗಿ ಅಕ್ಟೋಬರ್ 2023ರಿಂದ ಇಲ್ಲಿವರೆಗೆ ಐದು ಅಲ್ ಜಝೀರಾ ಪತ್ರಕರ್ತರು ಬಲಿಯಾಗಿದ್ದಾರೆ. ಸಮರ್ ಅಬುದಕ್ಕಾ, ಹಮ್ಜಾ ಅಲ್ದಹ್ದೋಹ್, ಇಸ್ಮಾಯಿಲ್ ಅಲ್-ಘೌಲ್, ಅಹ್ಮದ್ ಅಲ್-ಲೌಹ್, ಹೊಸಮ್ ಶಬಾತ್ ವರದಿ ಮಾಡುತ್ತಲೇ ತಮ್ಮ ಜೀವ ಕಳೆದುಕೊಂಡಿದ್ದಾರೆ. ಅಲ್ಲದೆ ಅಲ್ ಜಝೀರಾ ಮತ್ತು ಇತರ ಮಾಧ್ಯಮ ಸಂಸ್ಥೆಗಳ ಹಲವಾರು ಪತ್ರಕರ್ತರು ಮತ್ತು ಅವರ ಕುಟುಂಬ ಸದಸ್ಯರೂ ಈ ಹಿಂಸೆಗೆ ಬಲಿಯಾಗಿದ್ದಾರೆ.
ಆದರೂ, ಈ ಧೈರ್ಯಶಾಲಿ ಪತ್ರಕರ್ತರು ತಮ್ಮ ಸಹೋದ್ಯೋಗಿಗಳೊಂದಿಗೆ ಇಸ್ರೇಲ್ ನ ಅಧಿಕಾರಿಗಳ ಬೆದರಿಕೆ ಹಾಗೂ ಒತ್ತಡ ತಂತ್ರಗಳಿಗೆ ಮಣಿಯದೇ ವರದಿ ಮಾಡುತ್ತಿದ್ದಾರೆ.
ಈ ರೀತಿಯ ಒತ್ತಡಕ್ಕೆ ಮಣಿದಿದ್ದರೆ, ಗಾಝಾದ ನಾಗರಿಕರ ಮೇಲೆ ನಡೆಯುತ್ತಿರುವ ಹತ್ಯಾಕಾಂಡ, ಬಲವಂತದ ಹಸಿವು ಮತ್ತು ಮಾನವೀಯತೆಯ ವಿರುದ್ಧದ ಗಂಭೀರ ಅಪರಾಧಗಳ ಬಗ್ಗೆ ವರದಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆ ಮೂಲಕ ಕರಾಳ ಅಧ್ಯಾಯವೊಂದು ಜಗತ್ತಿನಿಂದ ಮರೆಯಾಗುತ್ತಿತ್ತು.
ಸತ್ಯವನ್ನು ಹೊರತರಲು ನಿಷ್ಠೆಯಿಂದ ಶ್ರಮಿಸುತ್ತಿರುವ ಈ ಪತ್ರಕರ್ತರ ಮೇಲೆ ನಡೆಯುತ್ತಿರುವ ಬಲವಂತದ ದಮನವನ್ನು ತಕ್ಷಣ ನಿಲ್ಲಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಂತಾರಾಷ್ಟ್ರೀಯ ಸಂಸ್ಥೆಗಳು ಕೈಜೋಡಿಸಬೇಕು ಎಂದು ಅಲ್ ಜಝೀರಾ ಮೀಡಿಯಾ ನೆಟ್ ವರ್ಕ್ ಆಗ್ರಹಿಸಿದೆ.
ಸೌಜನ್ಯ: network.aljazeera.net







