ಇಸ್ರೇಲ್ ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿ; ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಆಗ್ರಹ

ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ (Photo credit: saudigazette.com.sa)
ಟೆಲ್ ಅವೀವ್: ಇಸ್ರೇಲ್ ಗೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವುದನ್ನು ನಿಲ್ಲಿಸುವಂತೆ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಆಗ್ರಹಿಸಿದ್ದಾರೆ.
ಬ್ರಿಕ್ಸ್ ನ ವರ್ಚುವಲ್ ಸಭೆಯನ್ನು ದಕ್ಷಿಣ ಆಫ್ರಿಕಾ ಆಯೋಜಿಸಿದ್ದು, ಸಭೆಯಲ್ಲಿ ಚೀನಾ ಅಧ್ಯಕ್ಷ ಜಿನ್ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಉಪಸ್ಥಿತರಿದ್ದರು. ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಾಮಾನ್ಯ ಪ್ರತಿಕ್ರಿಯೆಯನ್ನು ರೂಪಿಸುವುದು ಈ ಸಭೆಯ ಉದ್ದೇಶವಾಗಿದೆ.ಈ ಸಭೆಯಲ್ಲಿ ಮಾತನಾಡಿದ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಇಸ್ರೇಲ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಸೌದಿ ಅರೇಬಿಯಾ 1967ರ ಗಡಿಗಳ ಆಧಾರದ ಮೇಲೆ ಫೆಲೆಸ್ತೀನ್ ಸ್ಥಾಪನೆಗೆ ಆಗ್ರಹಿಸುತ್ತದೆ. ಗಂಭೀರ ಮತ್ತು ಸಮಗ್ರ ಶಾಂತಿ ಪ್ರಕ್ರಿಯೆಗೆ ಇದು ಅವಶ್ಯಕವಾಗಿದೆ. 'ಸೌದಿ ಅರೇಬಿಯಾದ ಸ್ಥಾನವು ಸ್ಥಿರ ಮತ್ತು ದೃಢವಾಗಿದೆ. ಎರಡು ದೇಶ ಪರಿಹಾರಕ್ಕೆ ಸಂಬಂಧಿಸಿದ ಅಂತರಾಷ್ಟ್ರೀಯ ನಿರ್ಧಾರಗಳನ್ನು ಜಾರಿಗೊಳಿಸುವುದನ್ನು ಹೊರತುಪಡಿಸಿ ಫೆಲೆಸ್ತೀನಿನಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಸಾಧಿಸಲು ಯಾವುದೇ ಮಾರ್ಗವಿಲ್ಲ ಎಂದರು. ಅವರು ಗಾಝಾ ಮೇಲಿನ ದಾಳಿಗಳನ್ನು ಟೀಕಿಸಿದ್ದು, ಆಕ್ರಮಣ ನಿಲ್ಲಿಸಲು ಒತ್ತಾಯಿಸಿದರು.
ಸೌದಿ ಯುವರಾಜ ಗಾಝಾ ಪಟ್ಟಿಯಿಂದ ಫೆಲೆಸ್ತೀನಿಯನ್ನರ ಬಲವಂತದ ಸ್ಥಳಾಂತರದ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.ನಾವು ಒಟ್ಟಾಗಿ ಗಾಝಾ ದಲ್ಲಿ ನಡೆಯುತ್ತಿರುವ ಅಪರಾಧಗಳನ್ನು ತಡೆಯಬಹುದು ಎಂದು ಅವರು ಹೇಳಿದರು.







