ಹೂತಿಗಳಿಗೆ ಶಸ್ತ್ರಾಸ್ತ್ರ ನೀಡುವುದನ್ನು ನಿಲ್ಲಿಸಿ: ಇರಾನ್ಗೆ ಯಮನ್ ಆಗ್ರಹ

ಸಾಂದರ್ಭಿಕ ಚಿತ್ರ Photo Credit: AFP
ಅಡೆನ್: ಇರಾನ್ ಯಮನ್ ಯುದ್ಧವನ್ನು ಸುದೀರ್ಘಗೊಳಿಸುತ್ತಿದೆ ಮತ್ತು ಹೂತಿ ಗುಂಪಿಗೆ ರಾಜಕೀಯ ಹಾಗೂ ರಾಜತಾಂತ್ರಿಕ ಬೆಂಬಲ ನೀಡುತ್ತಿದೆ ಎಂದು ಯಮನ್ನ ಅಂತರ್ರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರವು ಸೋಮವಾರ ಆರೋಪಿಸಿದ್ದು ಯಮನ್ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಇರಾನ್ ನಿಲ್ಲಿಸಬೇಕು. ಹೂತಿ ಬಂಡುಕೋರರಿಗೆ ಶಸ್ತ್ರಾಸ್ತ್ರ ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ತನ್ನ ಮಿಲಿಟರಿ ತಜ್ಞರನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ.
ಸೌದಿ ಅರೇಬಿಯಾವು ಯಮನ್ನ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತಿದೆ ಮತ್ತು ನಾಗರಿಕರ ಗುರಿಗಳ ಮೇಲೆ ವೈಮಾನಿಕ ದಾಳಿ ನಡೆಸುತ್ತಿದೆ ಎಂಬ ಇರಾನ್ ವಿದೇಶಾಂಗ ಸಚಿವಾಲಯದ ಹೇಳಿಕೆಯನ್ನು ಯಮನ್ನ ವಿದೇಶಾಂಗ ಸಚಿವಾಲಯ ಖಂಡಿಸಿದೆ.
ಇರಾನ್ನ ಹೇಳಿಕೆಯು `ಭಯೋತ್ಪಾದಕ ಹೂತಿ ಬಂಡುಕೋರರಿಗೆ ರಾಜಕೀಯ ಮತ್ತು ಮಾಧ್ಯಮ ಬೆಂಬಲ ನೀಡುವ, ಸಂಘರ್ಷವನ್ನು ಸುದೀರ್ಘಗೊಳಿಸಿ ಯಮನ್ ಜನರ ಸಂಕಷ್ಟವನ್ನು ಹೆಚ್ಚಿಸುತ್ತಿರುವ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ' ಎಂದು `ಎಕ್ಸ್'ನಲ್ಲಿ ಮಾಡಿರುವ ಪೋಸ್ಟ್ನಲ್ಲಿ ಟೀಕಿಸಿದೆ. ಹೂತಿಗಳಿಗೆ ಹಣಕಾಸು, ಶಸ್ತ್ರಾಸ್ತ್ರ ಮತ್ತು ತರಬೇತಿ ನೀಡುವ ಜೊತೆಗೆ ಅವರ ಮಿಲಿಟರಿ ಕಾರ್ಯಾಚರಣೆಗಳ ಯೋಜನೆ ಮತ್ತು ನಿರ್ವಹಣೆಯಲ್ಲಿ ಇರಾನ್ ನೇರವಾಗಿ ಭಾಗಿಯಾಗಿದೆ ಎಂದು ಸಚಿವಾಲಯ ಪ್ರತಿಪಾದಿಸಿದೆ.




