ನಾನು ಏಳು ಯುದ್ಧಗಳನ್ನು ನಿಲ್ಲಿಸಿದ್ದೇನೆ, ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು: ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ನ್ಯೂಯಾರ್ಕ್/ವಾಶಿಂಗ್ಟನ್: ನಾನು ಈ ವರ್ಷದ ಆರಂಭದಲ್ಲಿ ವ್ಯಾಪಾರ ಸ್ಥಗಿತದ ಬೆದರಿಕೆ ಒಡ್ಡಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ನಿಲ್ಲಿಸಿದೆ ಎಂದು ಮತ್ತೊಮ್ಮೆ ಪುನರುಚ್ಚರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾನು ಈವರೆಗೆ ಏಳು ಯುದ್ಧಗಳನ್ನು ನಿಲ್ಲಿಸಿದ್ದು, ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ನಾನು ನೆರವು ನೀಡಿದೆ ಎಂದು ಹಲವು ಬಾರಿ ಪುನರುಚ್ಚರಿಸಿರುವ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಪೂರ್ಣ ಮತ್ತು ತಕ್ಷಣದ ಕದನ ವಿರಾಮವೇರ್ಪಡುವಂತೆ ಮಾಡಲು ಅಮೆರಿಕ ಇಡೀ ರಾತ್ರಿ ಉಭಯ ದೇಶಗಳೊಂದಿಗೆ ಮಾತುಕತೆ ನಡೆಸಿತು ಎಂದು ಮೇ 10ರಿಂದ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಡೊನಾಲ್ಡ್ ಟ್ರಂಪ್ ಹೇಳುತ್ತಲೇ ಬಂದಿದ್ದಾರೆ.
ಆದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಯಾವುದೇ ಮೂರನೆಯ ವ್ಯಕ್ತಿ ಮಧ್ಯಸ್ಥಿಕೆ ವಹಿಸಿರಲಿಲ್ಲ ಎಂದು ಡೊನಾಲ್ಡ್ ಟ್ರಂಪ್ ರ ಪ್ರತಿಪಾದನೆಯನ್ನು ಭಾರತ ಅಲ್ಲಗಳೆಯುತ್ತಲೇ ಬಂದಿದೆ.
ಶನಿವಾರ ಹಮ್ಮಿಕೊಳ್ಳಲಾಗಿದ್ದ ಅಮೆರಿಕನ್ ಕಾರ್ನರ್ ಸ್ಟೋನ್ ಸಂಸ್ಥೆಯ ಸಂಸ್ಥಾಪಕರ ಭೋಜನ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಡೊನಾಲ್ಡ್ ಟ್ರಂಪ್, “ನಾವು ಜಾಗತಿಕ ಮಟ್ಟದಲ್ಲಿ ಈ ಹಿಂದೆಂದೂ ಅಮೆರಿಕ ಗೌರವಿಸಲ್ಪಡದಿದ್ದಂತಹ ಮಟ್ಟದಲ್ಲಿ ಗೌರವ ಗಳಿಸುವ ಕೆಲಸವನ್ನು ಮಾಡುತ್ತಿದ್ದೇವೆ. ನಾವು ಶಾಂತಿ ಒಪ್ಪಂದಗಳನ್ನು ಮಾಡಿಸುತ್ತಿದ್ದೇವೆ ಹಾಗೂ ನಾವು ಯುದ್ಧಗಳನ್ನು ನಿಲ್ಲಿಸುತ್ತಿದ್ದೇವೆ. ನಾವು ಭಾರತ ಮತ್ತು ಪಾಕಿಸ್ತಾನ ಹಾಗೂ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಯುದ್ಧವನ್ನು ಸ್ಥಗಿತಗೊಳಿಸಿದ್ದೇವೆ” ಎಂದು ಘೋಷಿಸಿದರು.







