ಹಾರ್ಮುಝ್ ಜಲಸಂಧಿ ತೆರವು: ತೈಲ ವಹಿವಾಟುದಾರರಿಗೆ ಸಂತಸ

ಸಾಂದರ್ಭಿಕ ಚಿತ್ರ (AI)
ಹೊಸದಿಲ್ಲಿ: ಜಾಗತಿಕ ವಾಣಿಜ್ಯ ಹಡಗುಗಳಿಗೆ ಹಾರ್ಮುಝ್ ಜಲಸಂಧಿಯನ್ನು ಮುಕ್ತಗೊಳಿಸಿರುವುದು ಭಾರತದ ತೈಲ ಕಂಪನಿಗಳು, ರಸಗೊಬ್ಬರ ಉತ್ಪಾದಕರು ಮತ್ತು ರಫ್ತುದಾರರ ಸಂತಸಕ್ಕೆ ಕಾರಣವಾಗಿದೆ.
ಭಾರತ ಹಾಗೂ ವಿದೇಶದ 41 ಹಡಗುಗಳು ಭರ್ತಿಯಾಗಿ, ಅಗಲ ಕಿರಿದಾದ ಹಾರ್ಮುಝ್ ಜಲಸಂಧಿಯನ್ನು ದಾಟಲು ಕಾಯುತ್ತಿವೆ. ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ಆರಂಭಿಸಿದ ಬಳಿಕ ಇರಾನ್ ಈ ಜಲಸಂಧಿಯಲ್ಲಿ ಸಂಚಾರ ನಿರ್ಬಂಧಗೊಳಿಸಿತ್ತು.
ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಮುನ್ನ ಭಾರತದ ಕೃಷಿಕ್ಷೇತ್ರಕ್ಕೆ ಅಗತ್ಯವಾಗಿರುವ ರಸಗೊಬ್ಬರವನ್ನು ಹೊತ್ತಿರುವ 12ಕ್ಕೂ ಹೆಚ್ಚು ಹಡಗುಗಳು ಜಲಸಂಧಿ ದಾಟಲು ಕಾಯುತ್ತಿವೆ. ಹಾರ್ಮುಝ್ ನ ಪಶ್ಚಿಮದಲ್ಲಿ ಕಾಯುತ್ತಿರುವ ಹಡಗುಗಳಲ್ಲಿ 15 ಭಾರತೀಯ ಹಡಗುಗಳಾಗಿದ್ದರೆ, ಉಳಿದ 26 ವಿದೇಶಿ ಹಡಗುಗಳಾಗಿವೆ. ಈ ಪೈಕಿ 10 ಕಚ್ಚಾ ತೈಲದ ಹಡಗುಗಳು, ನಾಲ್ಕು ಎಲ್ಪಿಜಿ ಟ್ಯಾಂಕರ್ಗಳು ಮತ್ತು ಮೂರು ಎಲ್ಎನ್ಜಿ ಒಯ್ಯುವ ಹಡಗುಗಳು ಸೇರಿವೆ ಎಂದು ತಿಳಿದುಬಂದಿದೆ.
ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸಿರುವುದನ್ನು ಘೋಷಿಸಿದ ಬೆನ್ನಲ್ಲೇ ತೈಲ ಬೆಲೆ ಪ್ರತಿ ಬ್ಯಾರಲ್ ಗೆ 90 ಡಾಲರ್ ಗಿಂತ ಕೆಳಗಿಳಿದಿವೆ. ಬ್ರೆಂಟ್ ಫ್ಯೂಚರ್ಸ್ ಟ್ರೇಡಿಂಗ್ ಶೇಕಡ 11.5ರಷ್ಟು ಕುಸಿದು ಬ್ಯಾರಲ್ ಗೆ 87.9 ಡಾಲರ್ ಗಳಾಗಿವೆ. ತೈಲಬೆಲೆ ಇಳಿದಿರುವುದು ಸಾಗಾಣಿಕೆ ವೆಚ್ಚ ಕಡಿಮೆಯಾಗಲು ಕಾರಣವಾಗುತ್ತದೆ.
"ತೈಲ ಬೆಲೆ ಇಳಿಕೆಯಾಗಿರುವುದರ ಪರಿಣಾಮ ಅಂತರರಾಷ್ಟ್ರೀಯ ಸಾಗಾಣಿಕೆ ದರವೂ ಇಳಿಯುತ್ತದೆ. ಇದು ಎಲ್ಲ ವಲಯಗಳಿಗೆ ದೊಡ್ಡ ಲಾಭ" ಎಂದು ಸಿಂಗಾಪುರ ಮೂಲದ ಶಿಪ್ಪಿಂಗ್ ಕಂಪನಿ ಎಕ್ಸಿಮ್ವಾಲಾ ಸೊಲ್ಯೂಶನ್ಸ್ ನಿರ್ದೇಶಕ ಡೇವ್ ಗರ್ಗ್ ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ತೈಲ ಬೆಲೆ ಏರಿಕೆ ಹಾಗೂ ಸಾಗಾಣಿಕೆ ವೆಚ್ಚ ಹೆಚ್ಚಳದಿಂದ ಪಶ್ಚಿಮ ಏಷ್ಯಾಗೆ ಈರುಳ್ಳಿ ರಫ್ತು ಬಹುತೇಕ ನಿಂತು ಹೋಗಿತ್ತು ಎಂದು ಪುಣೆ ಮೂಲದ ಸಂಗ್ಹಾರ್ ಎಕ್ಸ್ಪೋರ್ಟ್ಸ್ ಮಾಲೀಕ ಡ್ಯಾನಿಶ್ ಶಾ ಹೇಳಿದ್ದಾರೆ.






