ಹಾರ್ಮುಝ್ ಜಲಸಂಧಿ ತೆರೆದಿದೆ, ನಿಯಂತ್ರಣ ನಮ್ಮ ಕೈಯಲ್ಲಿದೆ: ಇರಾನ್

Photo Credit : AP , PTI
ಟೆಹ್ರಾನ್, ಮಾ.15: ಜಾಗತಿಕ ತೈಲ ಸಾಗಣೆಗೆ ಅತ್ಯಂತ ಮಹತ್ವದ ಮಾರ್ಗವಾಗಿರುವ ಹಾರ್ಮುಝ್ ಜಲಸಂಧಿ ಇನ್ನೂ ಮುಚ್ಚಿಲ್ಪ, ತೆರೆದಿದೆ. ಆದರೆ ಅದು ನಮ್ಮ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ ಎಂದು Aljazeera ವರದಿ ಮಾಡಿದೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯ ಕಮಾಂಡರ್ ಅಲಿರೆಜಾ ತಂಗ್ಸಿರಿ ಈ ಕುರಿತು ಹೇಳಿಕೆ ನೀಡಿದ್ದು, ಜಲಸಂಧಿಯ ಪರಿಸ್ಥಿತಿ ಬಗ್ಗೆ ಅಮೆರಿಕ ನೀಡುತ್ತಿರುವ ಮಾಹಿತಿ ತಪ್ಪಾಗಿದೆ ಎಂದು ಆರೋಪಿಸಿದರು.
ಇರಾನಿನ ಹಡಗುಗಳನ್ನು ನಾಶಪಡಿಸಲಾಗಿದೆ ಹಾಗೂ ತೈಲ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲಾಗಿದೆ ಎಂಬ ಯುನೈಟೆಡ್ ಸ್ಟೇಟ್ಸ್ ಹೇಳಿಕೆಗಳನ್ನು ಅಲಿರೆಜಾ ತಂಗ್ಸಿರಿ ತಳ್ಳಿಹಾಕಿದರು. ಈ ಸಂಬಂಧ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿ, ಅಮೆರಿಕ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
“ಅಮೆರಿಕನ್ನರು ನಮ್ಮ ಹಡಗುಗಳನ್ನು ನಾಶಪಡಿಸಿದ್ದೇವೆ ಹಾಗೂ ತೈಲ ಟ್ಯಾಂಕರ್ಗಳನ್ನು ಬೆಂಗಾವಲು ಮಾಡಿದ್ದೇವೆ ಎಂದು ತಪ್ಪಾಗಿ ಹೇಳಿಕೊಂಡಿದ್ದಾರೆ. ಈಗ ಅವರು ಇತರ ದೇಶಗಳಿಂದ ಬೆಂಬಲವನ್ನು ಕೇಳುತ್ತಿದ್ದಾರೆ,” ಎಂದು ಅವರು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಟ್ರುತ್ ಸೋಶಿಯಲ್’ನಲ್ಲಿ ಮಾಡಿದ ಪೋಸ್ಟ್ನಲ್ಲಿ, ಹಾರ್ಮುಜ್ ಜಲಸಂಧಿಯನ್ನು ‘ಮರು ತೆರೆಯಲು’ ಚೀನಾ ಸೇರಿದಂತೆ ಇತರ ರಾಷ್ಟ್ರಗಳ ಸಹಾಯವನ್ನು ಕೋರಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ ಈ ಬೆಳವಣಿಗೆಗಳು ಜಾಗತಿಕ ತೈಲ ಸರಬರಾಜು ಹಾಗೂ ಸಮುದ್ರ ಸಾರಿಗೆ ಭದ್ರತೆ ಕುರಿತ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.







