ಶೀಘ್ರದಲ್ಲೇ ಹಾರ್ಮುಝ್ ಜಲಸಂಧಿಯನ್ನು ಅಮೆರಿಕದ ಪ್ರಾಂತ್ಯವೆಂದು ಘೋಷಣೆ : ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಆ.15: ಇರಾನ್ ಅನ್ನು ಸೋಲಿಸಿದ ನಂತರ ಹಾರ್ಮುಝ್ ಜಲಸಂಧಿಯನ್ನು ಶೀಘ್ರದಲ್ಲೇ ಅಮೆರಿಕದ ಭೂಭಾಗ ಎಂದು ಘೋಷಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ನ್ಯೂಯಾರ್ಕ್ ರಾಜ್ಯದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿದ ಟ್ರಂಪ್ `ಈಗಾಗಲೇ ಸೋಲಿನಿಂದ ತತ್ತರಿಸಿರುವ ಇರಾನ್ ಅನ್ನು ನಾವು ಸಂಪೂರ್ಣವಾಗಿ ಸೋಲಿಸಿದ ನಂತರ ಶೀಘ್ರದಲ್ಲೇ ನಾನು ಹಾರ್ಮುಝ್ ಜಲಸಂಧಿಯನ್ನು ಅಮೆರಿಕದ ಪ್ರಾಂತವೆಂದು ಘೋಷಿಸಲಿದ್ದೇನೆ. ಇದು ಸತ್ಯ' ಎಂದು ಹೇಳಿದರು. ಟ್ರಂಪ್ ಅವರು ಹಾರ್ಮುಝ್ ಜಲಸಂಧಿಯ ಮೇಲೆ ಅಮೆರಿಕ `ಸಂಪೂರ್ಣ ನಿಯಂತ್ರಣ" ಹೊಂದಿದೆ ಎಂದು ಪದೇ ಪದೇ ಪ್ರತಿಪಾದಿಸಿದ್ದು, ಅಮೆರಿಕದ ರಕ್ಷಣೆಯಡಿಯಲ್ಲಿ ಈ ಜಲಮಾರ್ಗವು ತೆರೆದಿರುತ್ತದೆ ಎಂದು ಹೇಳಿದ್ದಾರೆ.
ಟ್ವೀಟ್ ಮೂಲಕ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ: ಟ್ರಂಪ್ ಹೇಳಿಕೆಗೆ ಇರಾನ್ ತಿರುಗೇಟು
ಹಾರ್ಮುಝ್ ಜಲಸಂಧಿಯು ಇರಾನ್ನದ್ದಾಗಿತ್ತು, ಇರಾನ್ನದ್ದಾಗಿದೆ ಮತ್ತು ಇರಾನ್ನದ್ದಾಗಿಯೇ ಉಳಿಯುತ್ತದೆ. ಈ ಜಲಸಂಧಿಯು ಇರಾನ್ನ ಆದೇಶದ ಮೇರೆಗೆ ಮಾತ್ರ ಮುಚ್ಚಲ್ಪಡುತ್ತದೆ ಮತ್ತು ತೆರೆಯಲ್ಪಡುತ್ತದೆ ಎಂದು ಇರಾನ್ ಹೇಳಿದೆ.
ಹಾರ್ಮುಝ್ ಜಲಮಾರ್ಗವನ್ನು ಶೀಘ್ರದಲ್ಲೇ ಅಮೆರಿಕದ ಪ್ರಾಂತದ ಭಾಗವಾಗಿ ಘೋಷಿಸುವುದಾಗಿ ಅಧ್ಯಕ್ಷ ಟ್ರಂಪ್ ನೀಡಿದ ಹೇಳಿಕೆಗೆ ಇರಾನ್ ತಿರುಗೇಟು ನೀಡಿದೆ.
`ಇರಾನ್ನ ಸೋಲಿನ ನಂತರ, ಶೀಘ್ರದಲ್ಲೇ ಹಾರ್ಮುಝ್ ಜಲಸಂಧಿಯನ್ನು ಅಮೆರಿಕದ ಪ್ರಾಂತವೆಂದು ಘೋಷಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಜಲಸಂಧಿಯನ್ನು ಟ್ವೀಟ್ ಮೂಲಕವಾಗಲಿ, ವಿಮಾನವಾಹಕ ನೌಕೆಯ ಮೂಲಕವಾಗಲಿ, ಆದೇಶ ಹೊರಡಿಸುವ ಮೂಲಕವಾಗಲಿ ಅಥವಾ ಚುನಾವಣಾ ಭಾಷಣದ ಮೂಲಕವಾಗಲಿ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಒಮ್ಮೆ ಸಂಪೂರ್ಣವಾಗಿ ವಾಸ್ತವವನ್ನು ಒಪ್ಪಿಕೊಳ್ಳಿ: ಇಲ್ಲಿಯವರೆಗೆ ನೀವು ಕಾರ್ಯತಂತ್ರದ ಮತ್ತು ಭಾರಿ ಸೋಲುಗಳನ್ನು ಎದುರಿಸಿದ್ದೀರಿ. ನೀವು ಸೋಲಿನ ವಾಸ್ತವತೆಯನ್ನು ಒಪ್ಪಿಕೊಳ್ಳದೆ, ನಿಮ್ಮ ಕಾಲ್ಪನಿಕ ಭ್ರಮೆಗಳನ್ನು ನಿಲ್ಲಿಸದ ಹೊರತು, ಇರಾನ್ ತನ್ನ ನಿರ್ಬಂಧವನ್ನು ಮುಂದುವರಿಸುತ್ತದೆ' ಎಂದು ಇರಾನ್ನ ಉಪ ವಿದೇಶಾಂಗ ಸಚಿವ ಕಾಜೆಮ್ ಗರಿಬಾಬಾಡಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.






