ಗ್ರೀಕ್ ನ ಕಸೋಸ್ ದ್ವೀಪದಲ್ಲಿ ಪ್ರಬಲ ಭೂಕಂಪ : ಪೂರ್ವ ಮೆಡಿಟರೇನಿಯನ್ ನಲ್ಲೂ ಕಂಪನ

ಸಾಂದರ್ಭಿಕ ಚಿತ್ರ
ಗ್ರೀಕ್ : ಗ್ರೀಕ್ ನ ಕಸೋಸ್ ದ್ವೀಪದಲ್ಲಿ ಬುಧವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 6.1ರಷ್ಟು ತೀವ್ರತೆ ಹೊಂದಿದ್ದ ಪ್ರಬಲ ಭೂಕಂಪ ಸಂಭವಿಸಿದೆ. ಪೂರ್ವ ಮೆಡಿಟರೇನಿಯನ್ ಪ್ರದೇಶದಲ್ಲೂ ಕಂಪನದ ಅನುಭವವಾಗಿದ್ದು, ತಕ್ಷಣಕ್ಕೆ ಯಾವುದೇ ಸಾವು ನೋವಿನ ವರದಿಗಳು ಬಂದಿಲ್ಲ.
ಅಮೆರಿಕದ ಜಿಯೊಲಾಜಿಕಲ್ ಸರ್ವೆ (ಯುಸ್ಜಿಎಸ್) ಪ್ರಕಾರ, ಕಡಲ ಕಿನಾರೆಯಲ್ಲಿ ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯರಾತ್ರಿ ಬಳಿಕ 1.51ರ ಸುಮಾರಿಗೆ 78 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ. ಈ ಭೂಕಂಪದ ಕೇಂದ್ರ ಕಸೋಸ್ನ ರಾಜಧಾನಿ ಫ್ರೈ ಪಟ್ಟಣದಿಂದ 15 ಕಿಲೋಮೀಟರ್ ದೂರದಲ್ಲಿತ್ತು.
ಇಡೀ ಪ್ರದೇಶದ ಎಲ್ಲೆಡೆ ಕಂಪನದ ಅನುಭವಾಗಿದ್ದು, ಕ್ರೇಟ್ ದ್ವೀಪ, ಕಸೋಸ್, ಕಾರ್ಪಥೋಸ್ ಮತ್ತು ದೊಡೆಕ್ಯಾನ್ಸಿಸ್ ನ ಕೆಲವು ಭಾಗಗಳು ಹಾಗೂ ಗ್ರೀಕ್ ದೇಶದ ವಿವಿಧೆಡೆಗಳಲ್ಲಿ ಭೂಮಿ ಕಂಪಿಸಿದೆ. ಬಿಎನ್ಓ ನ್ಯೂಸ್ ವರದಿಯ ಪ್ರಕಾರ ಇಸ್ರೇಲ್ ಹಾಗೂ ಈಜಿಪ್ಟ್ ನಲ್ಲೂ ಭೂಕಂಪ ಸಂಭವಿಸಿದ್ದು, ಪೂರ್ವ ಮೆಡಿಟರೇನಿಯನ್ ಪ್ರದೇಶದಾದ್ಯಂತ ಭೂಕಂಪದ ಅನುಭವವಾಗಿದೆ.
ಕಸೋಸ್ ದ್ವೀಪ ಮತ್ತು ಕಾರ್ಪಥೋಸ್ ದ್ವೀಪಗಳು, ಪೂರ್ವ ಕ್ರೇಟ್ನಲ್ಲಿ ಮತ್ತೆ ಮಂದ ಭೂಕಂಪದ ಸಾಧ್ಯತೆಗಳಿದ್ದು, ಲಘು ಭೂಕಂಪಗಳು ಅಜಿಯನ್ ದ್ವೀಪ ಮತ್ತು ನೈರುತ್ಯ ಟರ್ಕಿಯಲ್ಲೂ ಸಂಭವಿಸುವ ಸಾಧ್ಯತೆ ಇದೆ ಎಂದು ಯುಎಸ್ಜಿಎಸ್ ಅಂದಾಜಿಸಿದೆ.







