ಪಶ್ಚಿಮ ಬಂಗಾಳದ ಸಚಿವರ ಹೇಳಿಕೆಗೆ ಬಾಂಗ್ಲಾದೇಶದ ನಾಯಕರ ತೀವ್ರ ಖಂಡನೆ

ಸಚಿವ ಅರ್ಜುನ್ ಸಿಂಗ್ | Photo Credit : PTI
ಢಾಕಾ, ನ. 27: ಬಾಂಗ್ಲಾದೇಶವನ್ನು ವಶಪಡಿಸಿಕೊಳ್ಳುವ ಕುರಿತು ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಅರ್ಜುನ್ ಸಿಂಗ್ ಅವರು ನೀಡಿರುವ ಹೇಳಿಕೆಯನ್ನು ಬಾಂಗ್ಲಾದೇಶದ ‘ನ್ಯಾಷನಲ್ ಸಿಟಿಝನ್ ಪಾರ್ಟಿ’ಯ ಸಂಚಾಲಕ ನಾಹಿದ್ ಇಸ್ಲಾಂ ತೀವ್ರವಾಗಿ ಖಂಡಿಸಿದ್ದಾರೆ. ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯು ನೆರೆಯ ರಾಷ್ಟ್ರವಾದ ಬಾಂಗ್ಲಾದೇಶದೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳ ಸಚಿವ ಸಂಪುಟದಿಂದ ಸಿಂಗ್ ಅವರನ್ನು ತಕ್ಷಣವೇ ವಜಾಗೊಳಿಸಬೇಕು. ಸಿಂಗ್ ತಮ್ಮ ಹೇಳಿಕೆಯನ್ನು ಹಿಂಪಡೆದು ಬಾಂಗ್ಲಾದೇಶದ ಜನತೆಯ ಬಳಿ ಬೇಷರತ್ ಕ್ಷಮೆಯಾಚಿಸಬೇಕೆಂದು ನಾಹಿದ್ ಇಸ್ಲಾಂ ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಳದ ಸಾರಿಗೆ ಸಚಿವರು ನೇರವಾಗಿ ನಮ್ಮ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಗುರಿಯಾಗಿಸಿಕೊಂಡಿದ್ದಾರೆ. ತನ್ನ ಸ್ವಂತ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯು ಬಾಂಗ್ಲಾದೇಶದೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ ಎಂಬುದನ್ನು ಭಾರತ ಅರಿತುಕೊಳ್ಳಬೇಕು. ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಅಥವಾ ಅಸ್ಥಿರತೆ ಉಂಟುಮಾಡುವ ಯಾವುದೇ ಪ್ರಯತ್ನವು ಭಾರತದ ಪ್ರಾದೇಶಿಕ ಸಮಗ್ರತೆಗೂ ಅಪಾಯ ತಂದೊಡ್ಡಬಹುದು. ಭಾರತದ ಯಾವುದೇ ಬಾಂಗ್ಲಾದೇಶ ವಿರೋಧಿ ಪಿತೂರಿಯನ್ನು ವಿಫಲಗೊಳಿಸಲು ಬಾಂಗ್ಲಾದೇಶದ ಜನರು ಜಾಗೃತರಾಗಿದ್ದಾರೆ ಮತ್ತು ಸಿದ್ಧರಾಗಿದ್ದಾರೆ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.






