ಪಶ್ಚಿಮ ಜಪಾನ್ ನಲ್ಲಿ 6.2 ತೀವ್ರತೆಯ ಭೂಕಂಪ

ಸಾಂದರ್ಭಿಕ ಚಿತ್ರ (PTI)
ಟೋಕಿಯೋ: ಪಶ್ಚಿಮ ಜಪಾನ್ ನಲ್ಲಿ ಮಂಗಳವಾರ (ಜ.6) ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿಯ ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಪಾನ್ ಹವಾಮಾನ ಸಂಸ್ಥೆಯ ಮಾಹಿತಿ ಪ್ರಕಾರ, ಪ್ರಾಥಮಿಕವಾಗಿ 6.2 ತೀವ್ರತೆಯ ಭೂಕಂಪವು ವಾಯುವ್ಯ ಜಪಾನ್ ನ ಶಿಮಾನೆ ಪ್ರಾಂತ್ಯದಲ್ಲಿ ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ಒಳನಾಡಿನಲ್ಲಿ ಸುಮಾರು 10 ಕಿಲೋಮೀಟರ್ (6.2 ಮೈಲು) ಆಳದಲ್ಲಿತ್ತು ಎಂದು ಸಂಸ್ಥೆ ತಿಳಿಸಿದೆ.
ಭೂಕಂಪದ ತೀವ್ರತೆಯು ಶಿಮಾನೆ ಪ್ರಾಂತ್ಯದ ರಾಜಧಾನಿ ಮಾಟ್ಸುಯೆ ಸೇರಿದಂತೆ ಹತ್ತಿರದ ನಗರಗಳು ಹಾಗೂ ನೆರೆಯ ಟೊಟ್ಟೊರಿ ಪ್ರಾಂತ್ಯದ ಕೆಲವು ಭಾಗಗಳಲ್ಲಿ ಹೆಚ್ಚು ಅನುಭವಕ್ಕೆ ಬಂದಿದೆ ಎಂದು ವರದಿಯಾಗಿದೆ.
ಈ ಭೂಕಂಪದಿಂದ ಇದುವರೆಗೆ ಯಾವುದೇ ಗಾಯಗಳು ಅಥವಾ ಆಸ್ತಿಪಾಸ್ತಿ ಹಾನಿಯ ವರದಿಗಳು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಶಿಮಾನೆ ಪರಮಾಣು ವಿದ್ಯುತ್ ಸ್ಥಾವರ ಮತ್ತು ಈ ಪ್ರದೇಶದ ಸಂಬಂಧಿತ ಸೌಲಭ್ಯಗಳಲ್ಲಿ ಯಾವುದೇ ಅಸಹಜತೆಗಳು ಕಂಡುಬಂದಿಲ್ಲ ಎಂದು ಪರಮಾಣು ನಿಯಂತ್ರಣ ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಜಪಾನ್ ಜಗತ್ತಿನ ಅತ್ಯಂತ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ 'ಪೆಸಿಫಿಕ್ ರಿಂಗ್ ಆಫ್ ಫೈರ್’ ವಲಯದಲ್ಲಿದೆ ಎಂಬುದು ಗಮನಾರ್ಹ.





