ಅಮೆರಿಕದಲ್ಲಿ ಆಂಧ್ರಾ ಮೂಲದ ವಿದ್ಯಾರ್ಥಿನಿ ಮೃತ ಸ್ಥಿತಿಯಲ್ಲಿ ಪತ್ತೆ; ಅಂತ್ಯಕ್ರಿಯೆ, ಸಾಲದ ಬಾಕಿ ಪಾವತಿಸಲು ನೆರವು ಕೋರಿದ ಕುಟುಂಬ

Photo Credit : indiatoday.in
ಟೆಕ್ಸಾಸ್: ಆಂಧ್ರಪ್ರದೇಶ ಮೂಲದ 23 ವರ್ಷದ ರಾಜ್ಯಲಕ್ಷ್ಮಿ (ರಾಜಿ) ಯರ್ಲಗಡ್ಡ ಎಂಬ ವಿದ್ಯಾರ್ಥಿನಿ ಅಮೆರಿಕದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇತ್ತೀಚೆಗಷ್ಟೆ ಟೆಕ್ಸಾಸ್ ಎ ಆ್ಯಂಡ್ ಎಂ ವಿಶ್ವವಿದ್ಯಾಲಯ-ಕಾರ್ಪಸ್ ಕ್ರಿಸ್ಟಿಯಲ್ಲಿ ಪದವಿ ಪೂರೈಸಿದ್ದ ರಾಜ್ಯಲಕ್ಷ್ಮಿ, ತನ್ನ ವ್ಯಾಸಂಗದ ನಂತರ, ಉದ್ಯೋಗಕ್ಕಾಗಿ ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಳು ಎಂದು ಮಾಧ್ಯಮಗಳು ವರದಿ ಮಾಡಿವೆ.
ಆಕೆಯ ಮೃತ ದೇಹವನ್ನು ಆಕೆಯ ಸಹಪಾಠಿಗಳು ಪತ್ತೆ ಹಚ್ಚಿದ್ದಾರೆ.
ಕಳೆದ 2-3 ದಿನಗಳಿಂದ ರಾಜಿ ಗಂಭೀರ ಸ್ವರೂಪದ ಕೆಮ್ಮು ಹಾಗೂ ಎದೆನೋವಿಗೆ ತುತ್ತಾಗಿದ್ದಳು ಎನ್ನಲಾಗಿದೆ. ನವೆಂಬರ್ 7ರ ಬೆಳಗ್ಗೆ ಆಕೆ ಮೃತಪಟ್ಟಿದ್ದಾಳೆ ಎಂದು ಆಕೆಯ ಪರವಾಗಿ ‘ಗೋ ಫಂಡ್ ಮೀ’ ನಿಧಿ ಸಂಗ್ರಹಣೆಗೆ ಚಾಲನೆ ನೀಡಿರುವ ಆಕೆಯ ಸೋದರ ಸಂಬಂಧಿ ಚಾಣಕ್ಯ ವೈ.ವಿ.ಕೆ. ತಿಳಿಸಿದ್ದಾರೆ.
ಬಾಪಟ್ಲ ಜಿಲ್ಲೆಯ ಕರಂಚೇಡು ನಿವಾಸಿಯಾದ ರಾಜ್ಯಲಕ್ಷ್ಮಿ, 2023ರಲ್ಲಿ ವಿಜಯವಾಡದ ಖಾಸಗಿ ಕಾಲೇಜೊಂದರಲ್ಲಿ ತನ್ನ ಇಂಜಿನಿರಿಂಗ್ ಪದವಿ ಪೂರೈಸಿದ್ದರು ಎನ್ನಲಾಗಿದೆ. ಬಳಿಕ, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ರಾಜ್ಯಲಕ್ಷ್ಮಿ, ಇತ್ತೀಚೆಗಷ್ಟೆ ಕಂಪ್ಯೂಟರ್ ಸೈನ್ಸ್ ನಲ್ಲಿ ಎಂಎಸ್ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದರು. ತನ್ನ ವ್ಯಾಸಂಗ ಪೂರ್ಣಗೊಂಡ ಬಳಿಕ, ಆಕೆ ಉದ್ಯೋಗ ಪಡೆಯಲು ಸಕ್ರಿಯ ಪ್ರಯತ್ನದಲ್ಲಿ ತೊಡಗಿಸಿಕೊಂಡಿರುಳು ಎಂದು ಹೈದರಾಬಾದ್ ಮೂಲದ ದಿನಪತ್ರಿಕೆ ‘ಸಿಯಾಸಟ್ ಡೈಲಿ’ ವರದಿ ಮಾಡಿದೆ.
ಮೂರು ದಿನಗಳ ಹಿಂದಷ್ಟೇ ತನ್ನ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ್ದ ರಾಜ್ಯಲಕ್ಷ್ಮಿ, ನನಗೆ ಕೆಮ್ಮು ಹಾಗೂ ಆಯಾಸದ ಅನುಭವವಾಗುತ್ತಿದೆ ಎಂದು ತಿಳಿಸಿದ್ದರು ಎಂದೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದೀಗ ಆಕೆಯ ಅಂತ್ಯಕ್ರಿಯೆ ನೆರವೇರಿಸಲು ಹಾಗೂ ಶಿಕ್ಷಣ ಸಾಲವನ್ನು ಮರುಪಾವತಿಸಲು ‘ಗೋ ಫಂಡ್ ಮೀ’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ರಾಜ್ಯಲಕ್ಷ್ಮಿಯ ಸಾವಿನ ಕಾರಣವನ್ನು ಪತ್ತೆ ಹಚ್ಚಲು ವೈದ್ಯಕೀಯ ಪರೀಕ್ಷೆ ಪ್ರಗತಿಯಲ್ಲಿದೆ.
ಕಳೆದ ವರ್ಷ ಭಾರತೀಯ ಮೂಲದ ಒಟ್ಟು 11 ವಿದ್ಯಾರ್ಥಿಗಳು ಅಮೆರಿಕದಲ್ಲಿ ಮೃತಪಟ್ಟ ಘಟನೆಗಳು ವರದಿಯಾಗಿದ್ದವು.







