ಬ್ರಿಟನ್ ನಲ್ಲಿ ಹರ್ಯಾಣ ಮೂಲದ ವಿದ್ಯಾರ್ಥಿಯನ್ನು ಇರಿದು ಹತ್ಯೆ : ಸರಕಾರದ ನೆರವು ಕೋರಿದ ಕುಟುಂಬಸ್ಥರು

Photo Credit : indiatoday.in
ಲಂಡನ್: ಹರ್ಯಾಣ ಮೂಲದ ವಿದ್ಯಾರ್ಥಿಯೊಬ್ಬನಿಗೆ ದುಷ್ಕರ್ಮಿಯೊಬ್ಬ ಇರಿದು ಹತ್ಯೆಗೈದಿರುವ ಘಟನೆ ಬ್ರಿಟನ್ನ ವೋರ್ಸೆಸ್ಟರ್ನಲ್ಲಿ ನಡೆದಿದೆ.
ಈ ಕುರಿತು ತ್ವರಿತ ತನಿಖೆ ನಡೆಸಲು ಹಾಗೂ ಮೃತದೇಹವನ್ನು ಸ್ವದೇಶಕ್ಕೆ ವಾಪಸ್ಸು ಮರಳಿ ತರಲು ರಾಜತಾಂತ್ರಿಕ ನೆರವು ನೀಡಬೇಕು ಎಂದು ಮೃತ ವಿದ್ಯಾರ್ಥಿಯ ಕುಟುಂಬಸ್ಥರು ಸರಕಾರಕ್ಕೆ ಆಗ್ರಹಿಸಿದ್ದಾರೆ.
ಮೃತ ವಿದ್ಯಾರ್ಥಿಯನ್ನು ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ. ನವೆಂಬರ್ 15ರಂದು ವೋರ್ಸೆಸ್ಟರ್ ನ ಬಾರ್ ಬೋರ್ನ್ ರಸ್ತೆಯಲ್ಲಿ ವಿಜಯ್ ಕುಮಾರ್ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಬ್ರಿಟನ್ ನಲ್ಲಿ ಉನ್ನತ ವ್ಯಾಸಂಗವನ್ನು ಮುಂದುವರಿಸಲು ಮೃತ ವಿಜಯ್ ಕುಮಾರ್ ಕೇಂದ್ರ ಅಬಕಾರಿ ಮತ್ತು ಸುಂಕ ಮಂಡಳಿಯಲ್ಲಿನ ಸರಕಾರಿ ಉದ್ಯೋಗವನ್ನು ತೊರೆದಿದ್ದ ಎಂದು ವರದಿಯಾಗಿದೆ. ಅವರು ಬ್ರಿಸ್ಟಲ್ ನ ಯೂನಿವರ್ಸಿಟಿ ಆಫ್ ವೆಸ್ಟ್ ಆಫ್ ಇಂಗ್ಲೆಂಡ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ಘಟನೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಚಾರ್ಖಿ ದಾದ್ರಿ ಶಾಸಕ ಸುನೀಲ್ ಸತ್ಪಾಲ್ ಸಂಗ್ವಾನ್, ಮೃತ ವಿದ್ಯಾರ್ಥಿಯ ಮೃತದೇಹವನ್ನು ಭಾರತಕ್ಕೆ ಮರಳಿ ತರಲು ಸರಕಾರ ತ್ವರಿತವಾಗಿ ನೆರವು ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.







