ಸುಡಾನ್: ಮೇ ತಿಂಗಳಿನಿಂದ 1,200 ಮಕ್ಕಳ ಮೃತ್ಯು; ವಿಶ್ವಸಂಸ್ಥೆ
ಮಕ್ಕಳಲ್ಲಿ ಅಪೌಷ್ಟಿಕತೆಯ ಸಮಸ್ಯೆ ಹೆಚ್ಚಳ

ಜಿನೆವಾ: ಯುದ್ಧದಿಂದ ಜರ್ಝರಿತಗೊಂಡಿರುವ ಸುಡಾನ್ ದೇಶದ ನಿರಾಶ್ರಿತರ ಶಿಬಿರದಲ್ಲಿ ಮೇ ತಿಂಗಳಿನಿಂದ 1,200ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದು ಈ ವರ್ಷಾಂತ್ಯಕ್ಕೆ ಸಾವಿರಾರು ನವಜಾತ ಶಿಶುಗಳು ಮೃತಪಡುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ.
ಸುಡಾನಿನಲ್ಲಿನ ಬಿಕ್ಕಟ್ಟಿನ ಪರಿಣಾಮ ಮಕ್ಕಳ ಆರೋಗ್ಯದ ಮೇಲೆ ಬೀರುವ ಪರಿಣಾಮದ ಕುರಿತು ಎಚ್ಚರಿಕೆ ವಹಿಸುವಂತೆ ವಿಶ್ವಸಂಸ್ಥೆ ಸಲಹೆ ನೀಡಿದೆ. ‘ನಾಗರಿಕರ ಬಗ್ಗೆ ಕ್ರೂರ ನಿರ್ಲಕ್ಷ್ಯ, ಆರೋಗ್ಯ ಮತ್ತು ಪೌಷ್ಟಿಕಾಂಶ ಸೇವೆಗಳ ಮೇಲಿನ ನಿರಂತರ ದಾಳಿಯ ಹಿನ್ನೆಲೆಯಲ್ಲಿ , ವರ್ಷಾಂತ್ಯದ ವೇಳೆಗೆ ಸಾವಿರಾರು ನವಜಾತ ಶಿಶುಗಳು ಸಾಯುವ ಅಪಾಯವಿದೆ’ ಎಂದು ವಿಶ್ವಸಂಸ್ಥೆ ಮಕ್ಕಳ ಏಜೆನ್ಸಿ(ಯುನಿಸೆಫ್)ನ ವಕ್ತಾರ ಜೇಮ್ಸ್ ಎಲ್ಡರ್ ಜಿನೆವಾದಲ್ಲಿ ಸುದ್ಧಿಗೋಷ್ಟಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಅಕ್ಟೋಬರ್ ನಿಂದ ಡಿಸೆಂಬರ್ ನಡುವಿನ ಅವಧಿಯಲ್ಲಿ ಸುಡಾನ್ ನಲ್ಲಿ 3,33,000 ಮಕ್ಕಳು ಜನಿಸುವ ನಿರೀಕ್ಷೆಯಿದೆ. ಇದೇ ವೇಳೆ ಯುದ್ಧಗ್ರಸ್ತ ದೇಶದಲ್ಲಿ ಅಪೌಷ್ಟಿಕತೆಯ ಸಮಸ್ಯೆ ತೀವ್ರಗೊಂಡಿದೆ. ಪ್ರತೀ ತಿಂಗಳೂ 55,000 ಮಕ್ಕಳಿಗೆ ಅಪೌಷ್ಟಿಕತೆಯ ಸಮಸ್ಯೆಗೆ ಚಿಕಿತ್ಸೆಯ ಅಗತ್ಯವಿದೆ. ಆದರೆ ರಾಜಧಾನಿ ಖಾರ್ಟಮ್ ನಲ್ಲಿ 50ಕ್ಕೂ ಕಡಿಮೆ ಪೌಷ್ಟಿಕಾಂಶ ಕೇಂದ್ರಗಳು, ವೆಸ್ಟ್ ದಾರ್ಫುರ್ನಲ್ಲಿ ಒಂದು ಕೇಂದ್ರ ಮಾತ್ರ ಸುಸ್ಥಿತಿಯಲ್ಲಿದೆ. ಸುಡಾನಿನಲ್ಲಿನ 9 ನಿರಾಶ್ರಿತರ ಶಿಬಿರದಲ್ಲಿ ಮೇ 15 ಮತ್ತು ಸೆಪ್ಟಂಬರ್ 14ರ ನಡುವಿನ ಅವಧಿಯಲ್ಲಿ 5 ವರ್ಷದ ಕೆಳಗಿನ 1,200ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿರುವುದಾಗಿ ಸುಡಾನಿನಲ್ಲಿರುವ ವಿಶ್ವಸಂಸ್ಥೆಯ ನಿಯೋಗ ವರದಿ ನೀಡಿದೆ ಎಂದು ಅವರು ಹೇಳಿದ್ದಾರೆ.
ಈ ಶಿಬಿರಗಳಲ್ಲಿ ಹೆಚ್ಚಾಗಿ ದಕ್ಷಿಣ ಸುಡಾನ್ ಮತ್ತು ಇಥಿಯೋಪಿಯಾದ ನಿರಾಶ್ರಿತರು ಆಶ್ರಯ ಪಡೆದಿದ್ದಾರೆ ಎಂದು ಯುಎನ್ಎಚ್ ಸಿ ಆರ್ ನ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥೆ ಅಲೆನ್ ಮರೀನಾ ಹೇಳಿದ್ದಾರೆ. ಇದೇ ಅವಧಿಯಲ್ಲಿ ಸುಮಾರು 3,100 ಶಂಕಿತ ದಡಾರ ಪ್ರಕರಣ, 500ಕ್ಕೂ ಹೆಚ್ಚು ಶಂಕಿತ ಕಾಲರಾ ಪ್ರಕರಣ ವರದಿಯಾಗಿರುವ ಜತೆಗೆ, ಡೆಂಘಿ ಮತ್ತು ಮಲೇರಿಯಾ ಪ್ರಕರಣ ಉಲ್ಬಣಗೊಂಡಿದೆ. ದಡಾರ ಅಥವಾ ಅಪೌಷ್ಟಿಕತೆಯಿಂದ ಸಂಭವಿಸುವ ಪ್ರತೀ ಸಾವನ್ನೂ ತಡೆಯುವ ವಿಧಾನ ಮತ್ತು ಆರ್ಥಿಕ ಸಂಪನ್ಮೂಲವನ್ನು ಈ ಜಗತ್ತು ಹೊಂದಿದೆ. ಇನ್ನಷ್ಟು ಸಾವನ್ನು ನಾವು ತಡೆಯಬಹುದು, ಆದರೆ ಇದಕ್ಕೆ ಇನ್ನಷ್ಟು ಹಣದ ಅಗತ್ಯವಿದೆ ಎಂದು ಯುಎನ್ಎಚ್ ಸಿ ಆರ್ ಮುಖ್ಯಸ್ಥ ಫಿಲಿಪೊ ಗ್ರಾಂಡಿ ಹೇಳಿಕೆ ನೀಡಿದ್ದಾರೆ.
ಸುಡಾನಿನಲ್ಲಿ ನೆರವಿನ ಅಗತ್ಯವಿರುವ 10 ದಶಲಕ್ಷ ಮಕ್ಕಳಿಗೆ ನೆರವು ಒದಗಿಸಲು 838 ದಶಲಕ್ಷ ಡಾಲರ್ ನಿಧಿಯ ಅಗತ್ಯವಿದೆ. ಆದರೆ ಇದುವರೆಗೆ ಇದರ 25%ದಷ್ಟು ಮೊತ್ತ ಮಾತ್ರ ದೇಣಿಗೆ ರೂಪದಲ್ಲಿ ಸಂಗ್ರಹವಾಗಿದೆ ಎಂದು ಯುನಿಸೆಫ್ ವರದಿ ಹೇಳಿದೆ.